ಕಾರವಾರ: ಓಡಿ ಹೋಗುವ ಭಯ ಹಾಗೂ ಕಿಡಿಗೇಡಿತನ ಸಹಿಸಲಾರದೆ ನಗರದ ತರಕಾರಿ ಮಾರುಕಟ್ಟೆಯಲ್ಲಿ ಬುಧವಾರ ಅಮಾನವೀಯವಾಗಿ ಕಟ್ಟಿಹಾಕಲಾಗಿದ್ದ ಬಾಲಕನನ್ನು ಪೊಲೀಸರು ಬಂಧಮುಕ್ತಗೊಳಿಸಿದರು. ಸಂಪದ್ ರೋಣದ ಎಂಬ ಹದಿನಾರರ ಬಾಲಕನನ್ನು ನಗರದ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮೂಟೆಗಳ ನಡುವೆ ಚೈನ್ನಿಂದ ಕಟ್ಟಿ ಹಾಕಲಾಗಿತ್ತು. ಈತನ ತಾಯಿ ಕವಿತಾ ರೋಣದ ಸಮೀಪದಲ್ಲೇ ಕಾಯಿಪಲ್ಲೆ ಮಾರಾಟ ಮಾಡುತ್ತಿದ್ದಾಳೆ. ಈಕೆಯ ಇನ್ನೊಬ್ಬ ಪುತ್ರ ಸಂತೋಷ್ ರೋಣದ ಎರಡೂವರೆ ತಿಂಗಳ ಹಿಂದೆ ಕಣ್ಮರೆಯಾದವ ಇದುವರೆಗೂ ಪತ್ತೆಯಾಗಿಲ್ಲ. ಆ ವೇದನೆಯಲ್ಲೇ ಇಡೀ ಕುಟುಂಬ ಇರುವಾಗ ಇನ್ನೊಬ್ಬ ಮಗ ಸಂಪದ್ ಕೂಡ ಓಡಿಹೋಗುವ ಆತಂಕ ಈಕೆಯನ್ನು ಕಾಡತೊಡಗಿತು. ಒಮ್ಮೆ ಕೈತಪ್ಪಿಸಿಕೊಂಡು ಓಡಿ ಹೋದ ಉದಾಹರಣೆಯೂ ಇತ್ತು. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕನ ಕಿಡಿಗೇಡಿತನ ಸಹಿಸಲು ಸಾಧ್ಯವಾಗದೆ ತಾಯಿಯ ಸಮ್ಮತಿಯಿಂದಲೆ ಈತನ ಕಾಲಿಗೆ ಚೈನ್ ಹಾಕಿ ಬಂಧಿಸಲಾಗಿತ್ತು. ಈ ಬಗ್ಗೆ ವಿವರ ಪಡೆದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸಿಪಿಐ ಎನ್.ಆರ್. ಮುಕ್ರಿ, ಪಿಎಸ್ಐ ಆನಂದಮೂರ್ತಿ ಮತ್ತಿತರರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿದರು. ಈ ರೀತಿ ಅಮಾನವೀಯವಾಗಿ ಬಂಧಿಸಿಡುವುದು ಅಪರಾಧ ಎಂದು ಎಚ್ಚರಿಕೆ ನೀಡಿದರು. ಅಷ್ಟೇ ಅಲ್ಲ, ಬಾಲಕನನ್ನು ಬಂಧಮುಕ್ತಗೊಳಿಸಿದರು. ಮತ್ತೊಬ್ಬ ಮಗ ಸಂತೋಷ್ ಈಗಾಗಲೆ ನಾಪತ್ತೆಯಾಗಿದ್ದಾನೆ. ಈತನೂ ಎಲ್ಲಿ ಓಡಿಹೋಗಬಹುದು ಎಂಬ ಭಯ ನಮ್ಮನ್ನು ಕಾಡುತ್ತಿದೆ. ಈತ ಎಲ್ಲೂ ಓಡಿಹೋಗದಂತೆ ನೋಡಿಕೊಳ್ಳಿ ಎಂದು ಬಾಲಕನ ತಾಯಿ ಕವಿತಾ ಪೊಲೀಸ್ ಅಧಿಕಾರಿಗಳಲ್ಲಿ ಮೊರೆ ಇಡುತ್ತಿದ್ದಳು. ಈಕೆಗೆ ಏಳು ಮಕ್ಕಳಿದ್ದಾರೆ. ಐವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳ ತುಂಬು ಸಂಸಾರ. ಪತಿ ಮೃತಪಟ್ಟಿದ್ದಾನೆ. ಕೇವಲ ಕಾಯಿಪಲ್ಲೆ ಮಾರಾಟ ಮಾಡಿ ಉಳಿದ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾಳೆ. ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸ್ ಅಧಿಕಾರಿಗಳು ಬಾಲಕನನ್ನು ಶಿರಸಿಗೆ ಕಳುಹಿಸಿ, ಅಲ್ಲಿಂದ ಬೆಳಗಾವಿಯ ಬಾಲಕರ ಬಾಲಮಂದಿರಕ್ಕೆ ಸೇರಿಸಲು ತೀರ್ಮಾನಿಸಿದ್ದಾರೆ. ಬಾಲಕನ ತಾಯಿಯೂ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದಾಳೆ.