ಯಲ್ಲಾಪುರ: ತಾಲೂಕಿನ ಈರಾಪುರದ ಶ್ರೀ ತ್ರಯಂಬಕೇಶ್ವರ ಯುವಕ ಮಂಡಳದ ರಜತ ಮಹೋತ್ಸವವನ್ನು ಈರಾಪುರದ ಶಾಲಾ ಮೈದಾನದಲ್ಲಿ ಜ. 27 ಮತ್ತು 28ರಂದು ಹಮ್ಮಿಕೊಳ್ಳಲಾಗಿದೆ.
ಸಂಸದ ಅನಂತಕುಮಾರ ಹೆಗಡೆ ಉತ್ಸವವನ್ನು ಜ. 27ರ ಬೆಳಗ್ಗೆ 10.30ಕ್ಕೆ ಉದ್ಘಾಟಿಸಲಿದ್ದು, ಶಾಸಕ ವಿ.ಎಸ್. ಪಾಟೀಲ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿಪಂ ಸದಸ್ಯ ಅನಂತ ನಾಗರಜಡ್ಡಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವರಾಮ ಹೆಬ್ಬಾರ, ಕಳಚೆ ಸಹ್ಯಾದ್ರಿ ಬ್ಯಾಂಕ್ ಅಧ್ಯಕ್ಷ ಉಮೇಶ ಭಾಗ್ವತ, ತಾಪಂ ಉಪಾಧ್ಯಕ್ಷ ಶಂಕರ ಕಣ್ಣಿ, ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಮುದ್ದೇಪಾಲು, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜಿ. ನಾಯಕ, ವಜ್ರಳ್ಳಿ ಗ್ರಾಪಂ ಸದಸ್ಯೆ ವೀಣಾ ಹೆಬ್ಬಾರ, ವಜ್ರಳ್ಳಿ ಸೇ.ಸ. ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 3ಕ್ಕೆ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿಎಂಎಸ್ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ ವಹಿಸಲಿದ್ದಾರೆ. 'ಯುವ ಜನಾಂಗ ಮತ್ತು ಮುಂದಿರುವ ಸವಾಲುಗಳು' ವಿಷಯ ಕುರಿತು ವಿಶ್ವದರ್ಶನ ಪಪೂ ಕಾಲೇಜಿನ ಪ್ರಾಂಶುಪಾಲ ಡಾ.ಡಿ .ಕೆ. ಗಾಂವ್ಕರ್, 'ನಮ್ಮ ಇತಿಹಾಸ ಮತ್ತು ಪರಂಪರೆ' ವಿಷಯ ಕುರಿತು ವಿಶ್ವೇಶ್ವರ ಭಟ್ಟ ಅತ್ತಿಮುರುಡು ಉಪನ್ಯಾಸ ನೀಡಲಿದ್ದಾರೆ. ಸಂಜೆ 5ಕ್ಕೆ ಪ್ರಸನ್ನ ವೈದ್ಯ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಹಾಗೂ ಸಂಜೆ 8.30ರಿಂದ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಜ. 28ರ ರಾತ್ರಿ 9ಕ್ಕೆ ಏರ್ಪಡಿಸಲಾಗಿರುವ ಸನ್ಮಾನ-ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಳಚೆಯ ಸೇ.ಸ. ಸಂಘದ ಅಧ್ಯಕ್ಷ ಉಮೇಶ ಭಾಗ್ವತ ವಹಿಸಲಿದ್ದಾರೆ. ವಜ್ರಳ್ಳಿಯ ಹಿರಿಯ ಪಶುವೈದ್ಯ ನಿರೀಕ್ಷಕ ಕೆ.ಜಿ. ಹೆಗಡೆ ಹಾಗೂ ಕಳಚೆಯ ಅಂಚೆ ವಿತರಕ ನಾರಾಯಣ ಗದ್ದೆಯವರನ್ನು ಸನ್ಮಾನಿಸಲಾಗುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಾದ ಈರಾಪುರದ ಗಣಪತಿ ಹೆಗಡೆ ಹಾಗೂ ಶ್ರೀಕೃಷ್ಣ ಹೆಗಡೆ ಇವರಿಗೆ ಉತ್ಸವದಲ್ಲಿ ಪುರಸ್ಕಾರ ನೀಡಲಾಗುವುದು. ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ತಿಮ್ಮಣ್ಣ ಗಾಂವ್ಕರ್ ನಲೆಪಾಲು, ಮಾವಿನಮನೆ ಸೇ.ಸ. ಸಂಘದ ಅಧ್ಯಕ್ಷ ಗಜಾನನ ಗಾಂವ್ಕರ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸೂರ್ಯನಾರಾಯಣ ಭಟ್ಟ, ಭಾರತ ಸೇವಾದಳದ ತಾಲೂಕು ಸಂಘಟಕ ಸಂಜೀವಕುಮಾರ ಹೊಸ್ಕೇರಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 10ಕ್ಕೆ ಪೆರ್ಡೂರಿನ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿಯವರಿಂದ 'ಕಂಸ ವಧೆ', 'ಕೃಷ್ಣಾರ್ಜುನ-ವೀರ ಅಭಿಮನ್ಯು' ಯಕ್ಷಗಾನ ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.