ಕನ್ನಡಪ್ರಭ ವಾರ್ತೆ, ಶಿರಸಿ, ಜ. 26
ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಹಳಿಯಾಳ, ಮುಂಡಗೋಡ, ಜೋಯಿಡಾ ತಾಲೂಕುಗಳಲ್ಲಿ 64ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸಹಾಯಕ ಆಯುಕ್ತ ರಾಜು ಮೊಗವೀರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಮಗೆ ಸಂವಿಧಾನ ವಿವಿಧ ಹಕ್ಕುಗಳನ್ನು ನೀಡಿದೆ. ಆದರೆ ಬೇರೆಯವರ ಹಕ್ಕುಗಳನ್ನು ಕಸಿಯುವ ಹಕ್ಕಿಲ್ಲ. ನಮಗೆ ಉದ್ಯೋಗಗಳನ್ನು ಮಾಡುವ ಹಕ್ಕನ್ನು ನೀಡಿದೆ. ಆದರೆ ಕಾನೂನು ಬಾಹಿರ ಉದ್ಯೋಗ ಮಾಡುವ ಹಕ್ಕಿಲ್ಲ. ನಮಗೆ ವಾಕ್ ಸ್ವಾತಂತ್ರ್ಯ ಹಕ್ಕನ್ನು ನೀಡಿದೆ. ಆದರೆ ಇನ್ನೊಬ್ಬರ ವಾಕ್ ಸ್ವಾತಂತ್ರ್ಯ ಕಸಿಯುವ ಹಕ್ಕಿಲ್ಲ. ವಿವಿಧ ಹಕ್ಕುಗಳನ್ನು ನೀಡಿದ್ದರೂ ಅವುಗಳನ್ನು ಕಾನೂನಿನ ಪರಿಧಿಯಲ್ಲಿ ಮಾಡುವಂತೆ ನಮ್ಮ ಸಂವಿಧಾನ ರೂಪಿಸಲಾಗಿದೆ ಎಂದರು.
ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ರಾಷ್ಟ್ರವನ್ನು ಗೌರವಿಸುವ, ಸಂವಿಧಾನವನ್ನು ಕಾಪಾಡುವ, ಅಗತ್ಯವಿದೆ. ನಾವು ರಾಷ್ಟ್ರದ ಏಕತೆ, ಐಕ್ಯತೆ ಬಿಂಬಿಸುವ ಅಗತ್ಯವಿದೆ. ಸಂವಿಧಾನ ರಕ್ಷಿಸಲು ಕಟಿಬದ್ಧರಾಗಬೇಕಿದೆ. ಸಮಾಜದಲ್ಲಿ ಅಪಾಯಕಾರಿಯಾದ ತುರ್ತು ಸಂದರ್ಭ ಎದುರಾದರೂ ಅದನ್ನು ಎದುರಿಸಲು ಸನ್ನದ್ಧರಾಗಿರಬೇಕು ಎಂದು ಕರೆ ನೀಡಿದರು.
ತಾಪಂ ಅಧ್ಯಕ್ಷ ಗುರುಪಾದ ಎಂ. ಹೆಗಡೆ, ನಗರಸಭಾಧ್ಯಕ್ಷ ರವಿ ಚಂದಾವರ ಸಮಾರಂಭದಲ್ಲಿ ಮಾತನಾಡಿದರು. ಹಿರಿಯ ನಾಗರಿಕ ಗೋವಿಂದ ರಾಯಾ ಶಾನಭಾಗ್, ಹಿರಿಯ ಮಾಸ್ಟರ್ ಅಥ್ಲಿಟ್ ವಸಂತ ನೇತ್ರೇಕರ್, ಸರ್ಕಾರಿ ಪ್ರೌಢಶಾಲೆ ಗಣೇಶನಗರದ ವಿದ್ಯಾರ್ಥಿನಿ ಪೂಜಾ ಶೆಟ್ಟಿ (ರಾಷ್ಟ್ರಮಟ್ಟದ ಸಾಧನೆ), ವಾಲಿಬಾಲ್ ಆಟಗಾರ ಮಾರಿಕಾಂಬಾ ಪ್ರೌಢಶಾಲೆ ವಿದ್ಯಾರ್ಥಿ ದಿವಾಕರ ಗೌಡ, ಅವೇಮರಿಯಾದ ಶಿಕ್ಷಕ ಗಜೇಂದ್ರ ಬೈಂದೂರು, ಸರ್ಕಾರಿ ಕಾಲೇಜಿನ ಗಣೇಶ ಆಚಾರಿ, ಹಾಗೂ ಇಬ್ಬರು ಅಂಗನವಾಡಿ ಸಾಧಕಿಯರನ್ನು ಸನ್ಮಾನಿಸಲಾಯಿತು. ನಗರದ ವಿವಿಧ ಶಾಲೆಗಳ, ಪ್ರೌಢಶಾಲೆಗಳ ಮಕ್ಕಳ ಆಕರ್ಷಕ ಪಥಸಂಚಲನ, ದೈಹಿಕ ವ್ಯಾಯಾಮ ಸಾರ್ವಜನಿಕರ ಕಣ್ಮನ ಸೆಳೆಯಿತು. ಕ್ರೀಡಾಂಗಣದ ಹೊರಭಾಗದಲ್ಲಿ ಮಕ್ಕಳು ನಡೆಸಿಕೊಟ್ಟ ಸಾಹಸ ಪ್ರದರ್ಶನ ರೋಮಾಂಚಕಾರಿಯಾಗಿತ್ತು. ಸಮಾರಂಭದಲ್ಲಿ ಮಾಜಿ ಸಚಿವ ಪ್ರೇಮಾನಂದ ಜೈವಂತ, ಮಾಜಿ ಶಾಸಕ ವಿವೇಕಾನಂದ ವೈದ್ಯ, ಜಿಪಂ ಸದಸ್ಯರಾದ ಶೋಭಾ ನಾಯ್ಕ್, ಉಷಾ ಹೆಗಡೆ, ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ಕುರ್ಡೇಕರ್, ಶಿರಸಿ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಎನ್.ಡಿ. ಬಿರ್ಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಸನ್ನಕುಮಾರ್ ಮತ್ತಿತರರು ಇದ್ದರು.