ಪ್ರತಿಭಾ ಪಲಾಯನ ತಪ್ಪಿಸಿ

Updated on: 




ಕುಮಟಾ:  ತಾಲೂಕು ಮಟ್ಟದ ಕೃಷಿ ಮಾಹಿತಿ ಆಂದೋಲನ ಕಾರ್ಯಕ್ರಮವನ್ನು ಕೃಷಿ ಇಲಾಖೆ  ಆವರಣದಲ್ಲಿ ಮಂಗಳವಾರ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ಪ್ರತಿಭಾ ಪಲಾಯನ ಆಗುತ್ತಿದೆ. ನಮ್ಮ ಪ್ರತಿಭೆಗಳು ಗುಳೆ ಹೋಗದಂತೆ ತಡೆಯವ ಪ್ರಯತ್ನಗಳಾಗಬೇಕು. ಅಡಕೆ, ತೆಂಗು, ಭತ್ತ ಇತ್ಯಾದಿ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಮೊದಲು ರೈತರಿಗೆ ಸಮರ್ಪಕವಾದ ಮಾಹಿತಿ ಕೊರತೆಯಿತ್ತು. ಇಂದು ರೈತರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇಂತಹ ಕಾರ್ಯಕ್ರಮದಿಂದಾಗಿ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗುತ್ತದೆ. ಕೃಷಿ ಇಲಾಖೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದೆ ಎಂದು ಶ್ಲಾಘಿಸಿದರು.  
ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ವಿನೋದ ಪ್ರಭು, ಜಿ.ಪಂ. ಉಪಾಧ್ಯಕ್ಷೆ ಲಲಿತಾ ಪಟಗಾರ, ಕೃಷಿ ಸಮಾಜದ ಅಧ್ಯಕ್ಷ ವಿವೇಕ ಜಾಲಿಸತ್ಗಿ, ಪಶುಸಂಗೋಪನಾ ಇಲಾಖೆಯ ನಿರ್ದೇಶಕ ಡಾ ಜಿ.ಕೆ. ಕುರ್ಸೆ, ಕೃಷಿ ಇಲಾಖೆಯ ಡಾ.  ಕಿರಣಕುಮಾರ ಮತ್ತು ಡಾ. ಜಿ.ವಿ. ನಾಯಕ, ತಾ ಪಂ ಉಪಾಧ್ಯಕ್ಷೆ ಇಂದಿರಾ ಮುಕ್ರಿ, ತಾ.ಪಂ. ಸದಸ್ಯ ಫ್ರಾನ್ಸಿಸ್ ಫರ್ನಾಂಡಿಸ್ ಮತ್ತು   ಗೋಪಾಲಕೃಷ್ಣ ಗೌಡ, ಮೀನುಗಾರಿಕಾ ಇಲಾಖೆಯ ವಸಂತ ಹೆಗಡೆ ಮತ್ತಿತರರು ಇದ್ದರು. ಸಭೆಯ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ಭಾರತಿ ದೇವತೆ ವಹಿಸಿದ್ದರು. ಸಹಾಯಕ ಕೃಷಿ ನಿರ್ದೇಶಕ ಎಸ್.ವಿ. ಹೆಗಡೆ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ಭಟ್ಟ ಸೂರಿ ಕಾರ್ಯಕ್ರಮ ನಿರೂಪಿಸಿದರು.
ಪ್ರದರ್ಶನ ಹಾಗೂ ಕೃಷಿ ಪರಿಕರ ವಿತರಣೆ, ಕೃಷಿ ಮಾಹಿತಿ ಆಂದೋಲನ, ಪಶುಸಂಗೋಪನಾ ಇಲಾಖೆ, ಆರೋಗ್ಯ, ಜಲಾನಯನ, ಮೀನುಗಾರಿಕೆ, ತೋಟಗಾರಿಕೆ, ಸಂಪ್ರದಾಯ ಕೃಷಿ ಉಪಕರಣ, ರೇಷ್ಮೆ ಮತ್ತಿತರ ಇಲಾಖೆಗಳ ಮಳಿಗೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವಿವಿಧ ಇಲಾಖೆಯ ಫಲಾನುಭವಿಗಳಿಗೆ ಪರಿಕರಗಳನ್ನು ವಿತರಿಸಲಾಯಿತು. ಭತ್ತದಲ್ಲಿ ಹೆಚ್ಚಿನ ಪೈರನ್ನು ಗಳಿಸಿದ ಸುರೇಶ ಪಟಗಾರ ಪ್ರಥಮ, ದ್ವಿತೀಯ ಬಹುಮಾನ ಅಣ್ಣುರಾಯ, ತೃತೀಯ ಬಹುಮಾನ ಮಂಕಾಳು ಗೌಡ ಅವರಿಗೆ ನೀಡಲಾಯಿತು.  ಈ ಸಂದರ್ಭದಲ್ಲಿ ಜಿಲ್ಲೆಯ ಸರ್ವೋತ್ತಮ ಪ್ರಶಸ್ತಿ  ಪಡೆದ ಕೃಷಿ ಅಧಿಕಾರಿ ಸಿ.ಎನ್. ಪಟಗಾರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com