ಶಿರಸಿ: ತಾಲೂಕಿನ ಗಣೇಶಪಾಲ್ನಲ್ಲಿ ಕಿರು ಜಲ ವಿದ್ಯುತ್ ಯೋಜನೆ ಜಾರಿ ಮಾಡುವುದರಿಂದ ಪರಿಸರಕ್ಕೆ ಹಾನಿಯಾಗಿದ್ದು, ಯೋಜನೆ ಸ್ಥಗಿತಗೊಳಿಸಲು ಸರ್ಕಾರವನ್ನು ಒತ್ತಾಯಿಸಬೇಕು ಎಂದು ಜಿಪಂನ ಮಾಜಿ ಸದಸ್ಯ ಜಿ.ಎನ್. ಹೆಗಡೆ ಮುರೇಗಾರ್ ಪತ್ರ ಬರೆದು ಆಗ್ರಹಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತ ಕುಮಾರ ಹೆಗಡೆ ಹಾಗೂ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರಿಗೆ ಪತ್ರ ಬರೆದಿರುವ ಮುರೇಗಾರ್, ತಾಲೂಕಿನ ಕೊಡ್ನಗದ್ದೆ ಗ್ರಾಪಂ ವ್ಯಾಪ್ತಿಯಲ್ಲಿ ಬೆಂಗಳೂರಿನ ಖರೆ ಪವರ್ ರೀಸೋರ್ಸಸ್ ಪ್ರೈವೇಟ್ ಲಿಮಿಟೆಡ್ (ದೂ. 080-4094046) ಕಂಪನಿ ಮೂಲಕ ಸರ್ಕಾರ ಕಿರು ಜಲ ವಿದ್ಯುತ್ ಯೋಜನೆಗೆ ಮುಂದಾಗಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಜಲ ವಿದ್ಯುತ್ ಯೋಜನೆಗಳಿಂದ ಪರಿಸರಕ್ಕೆ ಹಾನಿ ಆಗುವ ಬಗ್ಗೆ ತಾವುಗಳು ವಿರೋಧಿಸಿದ್ದು, ಸದ್ರಿ ಯೋಜನೆ ಸ್ಥಗಿತಕ್ಕೆ ಆದೇಶ ಮಾಡಬೇಕೆಂದು ವಿನಂತಿಸಿದ್ದಾರೆ.
ಸದ್ರಿ ಯೋಜನೆ ಕುರಿತಾಗಿ ಜಡ್ಡಿಗದ್ದೆ, ವಾನಳ್ಳಿ ಭಾಗದಲ್ಲಿ ಪರ-ವಿರೋಧ ಸಭೆ ನಡೆಯುತ್ತಿದೆ. ಬೇಡ್ತಿ ಕೊಳ್ಳ ಸಂರಕ್ಷಣ ಸಮಿತಿ, ಸ್ವರ್ಣವಲ್ಲೀ ಸಂಸ್ಥಾನ ಕೂಡ ಈ ಹಿಂದೆ ಜಲ ವಿದ್ಯುತ್ ಯೋಜನೆಗೆ ಸಂಪೂರ್ಣ ವಿರೋಧ ವ್ಯಕ್ತ ಪಡಿಸಿದೆ. ಗಣೇಶಪಾಲ್ನಲ್ಲಿ ಈ ಯೋಜನೆ ಪ್ರಾರಂಭಿಸುವುದರಿಂದ ಸಾಕಷ್ಟು ಜೀವವೈವಿಧ್ಯವಿರುವ ಪ್ರದೇಶ ನಾಶವಾಗುವುದಲ್ಲದೇ, ಪ್ರಸಿದ್ಧ ಧಾರ್ಮಿಕ ಸ್ಥಳವಾದ ಗಣೇಶಪಾಲ್ ಗಣಪತಿ ದೇವರ ಸ್ಥಳಕ್ಕೂ ತೊಂದರೆ ಆಗಲಿದೆ. ವಿದ್ಯುತ್ ಯೋಜನೆ ನಂತರ ಇಲ್ಲಿನ ವಿದ್ಯುತ್ನ್ನು ಉಮ್ಮಚಗಿ ಗ್ರಿಡ್ಗೆ ತೆಗೆದುಕೊಂಡು ಹೋಗುವ ಪ್ರಸ್ತಾಪವಿದ್ದು, ಸದ್ರಿ ಲೈನ್ನಿಂದಾಗಿ ಅರಣ್ಯಕ್ಕೆ ಹಾನಿ ಆಗಲಿದೆ. ಯಾವುದೇ ದೃಷ್ಟಿಕೋನದಿಂದಲೂ ಈ ಯೋಜನೆ ಅವೈಜ್ಞಾನಿಕವಾದದ್ದಾಗಿದೆ. ಕೂಡಲೇ ಸರ್ಕಾರ ಈ ಯೋಜನೆ ಸ್ಥಗಿತಗೊಳಿಸುವಂತೆ ಒತ್ತಾಯಿಸಬೇಕು ಎಂದು ಮುರೇಗಾರ್ ಪತ್ರದ ಮೂಲಕ ಆಗ್ರಹಿಸಿದ್ದಾರೆ.