ಕಾರವಾರ: ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ರು. 280 ಕೋಟಿ ಬಂಡವಾಳ ಹೊಂದಿ, ಭಟ್ಕಳ ಅರ್ಬನ್ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ರಾಜ್ಯದ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ರಮಾನಾಥ ರೈ ಹೇಳಿದ್ದಾರೆ. ಭಟ್ಕಳ ಅರ್ಬನ್ ಬ್ಯಾಂಕ್‌ನ 9ನೇ ಶಾಖೆಯನ್ನು ಹೊನ್ನಾವರದ ಮಂಕಿಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕುಗಳು ಜನರಿಗೆ ಸ್ಪಂದಿಸಲು ಹಿಂದೇಟು ಹಾಕುತ್ತಿರುವ ಈ ಕಾಲದಲ್ಲಿ ಅರ್ಬನ್ ಬ್ಯಾಂಕ್‌ನಂಥ ಸಹಕಾರಿ ಸಂಸ್ಥೆಗಳು ಸಮಾಜದ ಅಭಿವೃದ್ಧಿಗೆ ಸಹಕರಿಸುತ್ತಿರುವುದು ಶ್ಲಾಘನೀಯ. ಆರ್ಥಿಕ ಸಹಾಯದ ಜತೆಗೆ ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯದಲ್ಲೂ ಬ್ಯಾಂಕು ತನ್ನ ಛಾಪನ್ನು ಮೂಡಿಸಿರುವುದು ಸ್ವಾಗತಾರ್ಹ ಎಂದರು. ಬ್ಯಾಂಕಿನ ವಿಶೇಷ ಸೌಲಭ್ಯ ಸಲಕರಣೆ ಉದ್ಘಾಟಿಸಿದ ಶಾಸಕ ಮಂಕಾಳ ವೈದ್ಯ, ಹಿಂದುಳಿದ ಪ್ರದೇಶವಾದ ಮಂಕಿ ಗ್ರಾಮದಲ್ಲಿ ತನ್ನ ಶಾಖೆ ತೆರೆದು ಈ ಭಾಗದ ಬಡವರು ಮತ್ತು ಹಿಂದುಳಿದ ಜನಾಂಗದವರಿಗೆ ಅನುಕೂಲ ಕಲ್ಪಿಸಲು ಭಟ್ಕಳ ಅರ್ಬನ್ ಬ್ಯಾಂಕ್ ಮುಂದಾಗಿದೆ. ಇದರ ಸದ್ಬಳಕೆ ಆಗಲಿ ಎಂದರು. ಭಟ್ಕಳ ಪುರಸಭೆ ಮಾಜಿ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಮಂಕಿ ಜಿಪಂ ಸದಸ್ಯೆ ವನಿತಾ ನಾಯಕ, ಹೊನ್ನಾವರ ತಾಪಂ ಅಧ್ಯಕ್ಷೆ ಹರ್ಷಿಣಿ ಚಂದ್ರಶೇಖರ ಗೌಡ, ಮಂಕಿ ಗ್ರಾಪಂ ಅಧ್ಯಕ್ಷೆ ಸುನೀತಾ ನಾಯ್ಕ, ತಾಪಂ ಸದಸ್ಯ ರಾಜು ನಾಯ್ಕ, ಮಾಜಿ ಐಎಫ್‌ಎಸ್ ಅಧಿಕಾರಿ ಜಾಫರ ಸಾಧೀಕ ಶಾಬಂದ್ರಿ ಮಾತನಾಡಿದರು. ಪ್ರಧಾನ ವ್ಯವಸ್ಥಾಪಕ ಎಸ್.ಎ. ರಜಾಕ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಬ್ಯಾಂಕಿನ ಅಧ್ಯಕ್ಷ ಮಹಮ್ಮದ್ ಅಕ್ರಂ ಮುಸ್ಬಾ ಅಧ್ಯಕ್ಷತೆ ವಹಿಸಿದ್ದರು. ರಂಜಿತಾ ಹಾಗೂ ಸಿಂಚನಾ ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕ ಶಂಭು ಹೆಗಡೆ ವಂದಿಸಿದರು.
Advertisement