ಜಾತ್ರೆಗೆ ಭರದ ಸಿದ್ಧತೆ

Updated on: 

ರಮೇಶ ಪಂಡಿತ್
ಗೋಕರ್ಣ: ಪೌರಾಣಿಕ ಹಾಗೂ ಪ್ರವಾಸಿ ತಾಣವಾದ ಗೋಕರ್ಣದಲ್ಲಿ ಮಾ. 5ರಿಂದ 13ರ ತನಕ ನಡೆಯಲಿರುವ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕಾಗಿ ಭರದಿಂದ ಸಿದ್ಧತೆ ನಡೆಯುತ್ತಿದೆ. ಸಾವಿರ ಸಾವಿರ ಜನರ ಸ್ವಾಗತಕ್ಕೆ ಗೋಕರ್ಣ ಸಜ್ಜಾಗುತ್ತಿದೆ. ಶಿವರಾತ್ರಿ ಉತ್ಸವಕ್ಕೆ ಪೂರ್ವಭಾವಿಯಾಗಿ ಯಾಗಗಳನ್ನು ನಡೆಸಬೇಕಾಗಿರುವುದರಿಂದ ಹಳೆಯದಾದ ಯಾಗಶಾಲೆಯನ್ನು ನವೀಕರಿಸಲಾಗುತ್ತಿದೆ. ಇದರಿಂದ ಸುಸಜ್ಜಿತ ಯಾಗಶಾಲೆ ಲಭ್ಯವಾದಂತಾಗಲಿದೆ.
ರಾಮಕಥೆ ಪ್ರಮುಖ ಆಕರ್ಷಣೆ: ಈ ಬಾರಿಯ ಶಿವರಾತ್ರಿ ಪ್ರಮುಖ ಆಕರ್ಷಣೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ನಡೆಸಲಿರುವ ರಾಮಕಥೆ. ಶ್ರೀಗಳು ಇದುವರೆಗೆ ನಡೆಸಿರುವ ರಾಮಕಥೆಗಳಲ್ಲಿ ಜನತೆ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದಾರೆ. ಗೋಕರ್ಣದಲ್ಲಿ ನಡೆಯಲಿರುವ ರಾಮಕಥೆಯೂ ಕೂಡ ಸಾವಿರ ಸಾವಿರ ಸಂಖ್ಯೆಯಲ್ಲಿ ಜನತೆಯನ್ನು ಆಕರ್ಷಿಸಲಿದೆ ಎನ್ನುವ ನಿರೀಕ್ಷೆ ಇದೆ. ಜೊತೆಗೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಮಹರ್ಷಿ ದೈವರಾತ ವೇದಿಕೆ ಅದ್ಧೂರಿಯಾಗಿ ಸಿಂಗಾರಗೊಳ್ಳುತ್ತಿದೆ. ಇದರ ಮೈದಾನವನ್ನೂ ಸ್ಥಳೀಯ ಆಡಳಿತದ ಸಹಾಯದಿಂದ ಅಗಲೀಕರಣಗೊಳಿಸುತ್ತಿದ್ದು, ಸಹಸ್ರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.
ಪುತ್ತೂರಿನ ಪ್ರಸಿದ್ಧ ಸುವರ್ಣಕಾರರಾದ ಕೇಶವ ಮುಳಿಯರವರಿಂದ ಕಂಚು ಹಾಗೂ ಬೆಳ್ಳಿಯಿಂದ ಮಹಾಬಲೇಶ್ವರ ದೇವಸ್ಥಾನದ ನೂತನ ಮಹಾದ್ವಾರದ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಶಿವರಾತ್ರಿ ಸಂದರ್ಭದಲ್ಲಿ ಉದ್ಘಾಟಿಸುವ ನಿರೀಕ್ಷೆ ಇದೆ. ಮಾ. 13ರಂದು ಮಹಾರಥೋತ್ಸವ ನಡೆಯಲಿದೆ. ಇದಕ್ಕಾಗಿ ರಥವನ್ನು ಇಲ್ಲಿನ ಬೇಲೆಹಿತ್ಲ ಮತ್ತು ತಾರಮಕ್ಕಿ ಭಾಗದ ಹಾಲಕ್ಕಿ ಜನಾಂಗದವರು ಸಿದ್ಧಪಡಿಸುತ್ತಿದ್ದಾರೆ. ದೇವರ ದರ್ಶನಕ್ಕಾಗಿ ದಿನಪೂರ್ತಿ ಸರದಿಯಲ್ಲಿ ನಿಂತು ಕಾಯುವ ಭಕ್ತರ ಅನುಕೂಲಕ್ಕಾಗಿ ಆಡಳಿತ ಮಂಡಳಿಯವರು ದೇವಸ್ಥಾನದ ಒಳಾಂಗಣದ ಸುತ್ತಲೂ ಕಬ್ಬಿಣದ ತಗಡುಗಳ ಶೆಡ್ ನಿರ್ಮಿಸಿ ಬಿಸಿಲಿನಿಂದ ರಕ್ಷಣೆ ನೀಡುವ ವ್ಯವಸ್ಥೆ ಕಲ್ಪಿಸಿದ್ದಾರೆ.
ಅಗತ್ಯ ಸಿದ್ಧತೆ:  ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಮತ್ತು ಸಾರ್ವಜನಿಕರ ವಿಶೇಷ ವ್ಯವಸ್ಥೆಗೆ ಸಂಬಂಧಪಟ್ಟಂತೆ ಕಳೆದ ಎರಡು ದಿನಗಳ ಹಿಂದೆ ಜಿಪಂ ಸದಸ್ಯ ಪ್ರದೀಪ ನಾಯಕ, ಗ್ರಾಪಂ ಅಧ್ಯಕ್ಷ ಮಂಜುನಾಥ ಜನ್ನು, ತಾಪಂ ಅಧ್ಯಕ್ಷೆ ಭಾರತೀ ದೇವತೆ, ಆಡಳಿತ ಸಮಿತಿ ಅದ್ಯಕ್ಷ ಡಾ. ವಿ.ಆರ್ ಮಲ್ಲನ್, ಪೊಲೀಸ್ ಅಧಿಕಾರಿಗಳು, ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಕರು ಮತ್ತಿತರ ಸ್ಥಳೀಯರೊಂದಿಗೆ ದೇವಸ್ಥಾನದ ಆಡಳಿತ ಸಮಿತಿ ಸಭೆ ನಡೆಸಿದೆ.
ಗೋಕರ್ಣದ ಶಿವರಾತ್ರಿ ಮಹೋತ್ಸವದಲ್ಲಿ ಕೇವಲ ಕರ್ನಾಟಕದ ಜನತೆಯಷ್ಟೇ ಅಲ್ಲ, ದೇಶದ ವಿವಿಧೆಡೆಯಿಂದ ಜನತೆ ಆಗಮಿಸುತ್ತಾರೆ. ಮೇಲಾಗಿ ಗೋಕರ್ಣದಲ್ಲಿರುವ ವಿದೇಶಿಗರೂ ಸಾವಿರಾರು ಸಂಖ್ಯೆಯಲ್ಲಿ ರಥೋತ್ಸವದ ಸಂದರ್ಭದಲ್ಲಿ ಹಾಜರಿರುತ್ತಾರೆ. ಜನತೆ ಅಪಾರ ಸಂಖ್ಯೆಯಲ್ಲಿ ಸೇರುವುದರಿಂದ ಶಿವರಾತ್ರಿಗೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com