ಭಟ್ಕಳ: ಮಂಗಳೂರಿನಿಂದ ಭಟ್ಕಳಕ್ಕೆ ಬರುತ್ತಿದ್ದ ಖಾಸಗಿ ಬಸ್ ಚಾಲಕನ ಮೇಲೆ ಕ್ಷುಲ್ಲಕ ಕಾರಣಕ್ಕೆ 10 ಜನರ ಗುಂಪೊಂದು ಬಸ್ ತಡೆದು ಹಲ್ಲೆ ಮಾಡಿದ ಘಟನೆ ಸರ್ಪನಕಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಹಲ್ಲೆಗೊಳಗಾದ ಚಾಲಕನನ್ನು ಹೊಸನಗರದ ನರಸಿಂಹ ಮೂರ್ತಿ ಶ್ರೀನಿವಾಸ ರಾವ್ ಎಂದು ಗುರುತಿಸಲಾಗಿದೆ. ಈತ ಮಂಗಳೂರಿನಿಂದ ಭಟ್ಕಳದ ಕಡೆಗೆ ಖಾಸಗಿ ಬಸ್ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಬೆಳಕೆ ಸಮೀಪ ಬೈಕ್‌ಗೆ ಡಿಕ್ಕಿ ಹೊಡೆದ ನೆಪವೊಡ್ಡಿ ಸರ್ಪನಕಟ್ಟೆಯ ವಿಶ್ವನಾಥ ಶೆಟ್ಟಿ, ಹನುಮಂತ ನಾಯ್ಕ, ಗಣೇಶ ನಾಯ್ಕ ಹಾಗೂ ಇನ್ನು 10 ಜನರು ಸೇರಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡ ಬಸ್ ಚಾಲಕನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂದ ಬಸ್ ನಿರ್ವಾಹಕ ಪ್ರದೀಪ ಕುಬಾಲ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪಿಎಸ್‌ಐ ನವೀನಕುಮಾರ ಜೋಗಿ ತನಿಖೆ ಕೈಗೊಂಡಿದ್ದಾರೆ.
ಭಟ್ಕಳದಲ್ಲಿ ಸಿಎಸ್‌ಟಿ-ಮಂಗಳೂರು ಎಕ್ಸ್‌ಪ್ರೆಸ್ ರೈಲು ನಿಲುಗಡೆ: ಹರ್ಷ
ಭಟ್ಕಳ: ಮಂಗಳೂರಿನಿಂದ ಮುಂಬೈ ಸಿಎಸ್‌ಟಿಗೆ ಹೊರಡುವ ಸಿಎಸ್‌ಟಿ-ಮಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಭಟ್ಕಳದಲ್ಲಿ ನಿಲುಗಡೆಗೆ ರೇಲ್ವೆ ಇಲಾಖೆ ಹಸಿರು ನಿಶಾನೆ ತೋರಿರುವುದಕ್ಕೆ ಭಟ್ಕಳದ ಸಮಾಜ ಸೇವಕ ಸೈಯದ್ ಹಸನ್ ಬರ್ಮಾವರ ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಮೂರು ವರ್ಷಗಳಿಂದ ಸಿಎಸ್‌ಟಿಎಂ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಹೋರಾಟ ನಡೆಸಿದ ಫಲವಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಕಾಂಗ್ರೆಸ್ ಮುಖಂಡರ ಸತತ ಪ್ರಯತ್ನದ ಫಲವಾಗಿ ಭಟ್ಕಳದಲ್ಲಿ ನಿಲುಗಡೆಯ ಯಶಸ್ಸು ದೊರೆತಿದೆ. ಇದು ಭಟ್ಕಳ ಜನತೆಗೆ ಸಂದ ಗೌರವವಾಗಿದೆ ಎಂದರು. ಭಟ್ಕಳ ರೇಲ್ವೆ ನಿಲ್ದಾಣದಲ್ಲಿಯೂ ಹತ್ತು ಹಲವು ಸಮಸ್ಯೆಗಳಿದ್ದು, ಅದನ್ನೂ ಸಹ ಇಲಾಖೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಹಮ್ಮದ್ ಮೋತಿಶಾಮ ಮತ್ತಿತರು ಉಪಸ್ಥಿತರಿದ್ದರು.
Advertisement