ಕಾರವಾರ: ಕರಾವಳಿಯಲ್ಲಿ ಮಳೆ ಪ್ರಮಾಣ ಇಳಿಮುಖವಾಗಿದೆ. ಕಳೆದ ಎರಡು ದಿನಗಳಿಂದ ಆವರಿಸಿದ್ದ ನೆರೆ ಆತಂಕ ದೂರಾಗಿದೆ.
ಶುಕ್ರವಾರ ಕಾರವಾರ, ಕುಮಟಾ, ಭಟ್ಕಳ, ಹೊನ್ನಾವರ, ಅಂಕೋಲಾಗಳಲ್ಲಿ ಬೆಳಗ್ಗೆ ಜಿಟಿಜಿಟಿ ಮಳೆಯಾಗಿದ್ದು, ಮಧ್ಯಾಹ್ನ ಬಿಸಿಲು ಆವರಿಸಿದೆ. ನಾಗರಪಂಚಮಿಗೆ ಮಳೆ ಕೊಂಚ ಬ್ರೇಕ್ ನೀಡಿದ್ದರಿಂದ ಭಕ್ತರು ಯಾವ ಅಡ್ಡಿಯಿಲ್ಲದೇ ಹಬ್ಬ ಆಚರಿಸುವಂತಾಯಿತು. ಕಾರವಾರದಲ್ಲಿ ಬೆಳಗ್ಗೆ ಆಗಾಗ ಮಳೆಯಾಗಿದ್ದು, ಮಧ್ಯಾಹ್ನದ ನಂತರ ಮೋಡ ಮುಸುಕಿದ ವಾತಾವರಣವಿತ್ತು. ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಹೆಚ್ಚಿನ ಮಳೆಯಾಗಿಲ್ಲ. ಎರಡು ದಿನಗಳಿಂದ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗಿ ನೆರೆ ಭೀತಿ ಆವರಿಸಿತ್ತು. ಗ್ರಾಮಾಂತರ ಪ್ರದೇಶಗಳಲ್ಲಿ ಗದ್ದೆಗಳು ಜಲಾವೃತವಾಗಿ ಕೃಷಿಗೆ ಆತಂಕ ಎದುರಾಗಿತ್ತು. ಆದರೆ, ಶುಕ್ರವಾರ ಮಳೆ ಪ್ರಮಾಣ ಇಳಿಕೆಯಾದ್ದರಿಂದ ಜನರ ಆತಂಕ ದೂರಾಗಿದೆ. ಕುಮಟಾದಲ್ಲಿ ತಗ್ಗು ಪ್ರದೇಶಗಳಲ್ಲಿ ಶೇಖರಣೆಯಾಗಿದ್ದ ನೀರು ಹರಿದಿದೆ. ಹೊನ್ನಾವರದ ಗುಂಡಬಾಳ ಭಾಸ್ಕೇರಿ ನದಿಗಳ ನೀರಿನ ಪ್ರಮಾಣ ಇಳಿಕೆಯಾಗಿದೆ.