ಹೊನ್ನಾವರ: ಶರಾವತಿ ಅಣೆಕಟ್ಟು ಹಿನ್ನೀರು ಪ್ರದೇಶದಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ಸೋಮವಾರ ಅಣೆಕಟ್ಟೆ ನೀರಿನ ಮಟ್ಟ 1802 ಅಡಿ ತಲುಪಿದ್ದು, ಭರ್ತಿಗೆ 14 ಅಡಿ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಶರಾವತಿ ಎಡ-ಬಲ ದಂಡೆಯಲ್ಲಿ ಕಟ್ಟೆಚ್ಚರ ವಹಿಸಲು ಶಾಸಕ ಮಂಕಾಳ ಎಸ್. ವೈದ್ಯ ಅಧಿಕಾರಿಗಳೊಂದಿಗೆ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಸಭೆ ನಡೆಸಿದರು.
ಶರಾವತಿ ಅಣೆಕಟ್ಟು ಯೋಜನೆ ಮುಖ್ಯ ಅಧಿಕಾರಿ ರಾಫೆಲ್ ಡಿಸೋಜಾ ಅವರಿಂದ ಮಾಹಿತಿ ಪಡೆದರು.
ಅಣೆಕಟ್ಟಿನ ವಿದ್ಯುದಾಗಾರದ ಕೆಳಭಾಗದ ಶರಾವತಿ ಪಾತಳಿಯ ಎಡಬಲ ದಂಡೆಯಲ್ಲಿ ನೆರೆ ಸಂಭವಿಸುವುದು, ಅತಿವೃಷ್ಟಿಗಿಂತ ಬದಲಾಗಿ ಅಣೆಕಟ್ಟಿನಿಂದ ಹೆಚ್ಚಿನ ನೀರನ್ನು ಹೊರಬಿಡುವುದರಿಂದ ಸಂಭವಿಸುತ್ತಿದೆ. ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಹೊರಬಿಡುವಾಗ ಅಗತ್ಯ ಮುನ್ನೆಚ್ಚರಿಕೆ, ಆಯಾ ಗ್ರಾಪಂಗಳಿಗೆ ತಕ್ಷಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಣೆಕಟ್ಟೆಗೆ 37 ಸಾವಿರ ಕ್ಯುಸೆಕ್ ನೀರಿನ ಒಳಹರಿವಿದ್ದು, ನಿತ್ಯ ವಿದ್ಯುತ್ ಉತ್ಪಾದನೆಗೆ ಇದನ್ನಾಧರಿಸಿ ಅಣೆಕಟ್ಟಿನ ನೀರು ಬಳಸಲಾಗುತ್ತಿದೆ. ಅಣೆಕಟ್ಟೆ ಗರಿಷ್ಠ ಸಾಮರ್ಥ್ಯಕ್ಕೆ ಅನುಗುಣವಾಗಿ 1816 ಅಡಿ ಭರ್ತಿ ಆಗುವವರೆಗೂ ನೀರು ಹೊರಬಿಡುವ ಪ್ರಶ್ನೆಯಿಲ್ಲ. ಮಳೆ ಪ್ರಮಾಣ ಇಳಿಕೆಯಾಗಿದ್ದರಿಂದ ನೀರು ಹೊರಬಿಡುವ ಪ್ರಮೇಯ ವಿರಳ ಎಂದು ರಾಫೆಲ್ ಡಿಸೋಜಾ ತಿಳಿಸಿದರು.
ತಾಲೂಕಿನ ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು, ಮಳೆಯಿಂದಾಗಿ ಸಂಭವಿಸಿದ ಹಾನಿ ಕುರಿತು ವರದಿ ನೀಡುವಂತೆ ಸೂಚಿಸಿದರು.
ಮಳೆ-ಗಾಳಿಯಿಂದಾಗಿ ಎಲ್ಲೇ ಮನೆ ಮೇಲೆ ಮರ ಬಿದ್ದು ಹಾನಿಯಾದಲ್ಲಿ ಆಯಾ ಗ್ರಾಪಂ ಪಿಡಿಒ, ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ತೆರಳಿ ಹಾನಿಗೀಡಾದ ಕುಟುಂಬದವರಿಗೆ ನೆರವು, ಸಹಕಾರ ನೀಡಬೇಕೆಂದು ಶಾಸಕರು ಆದೇಶಿಸಿದರು.
ತಹಸೀಲ್ದಾರ್ ಕಚೇರಿಯಲ್ಲಿ 24 ಗಂಟೆ ಕಾರ್ಯನಿರತ ಸಹಾಯವಾಣಿ ಕೇಂದ್ರ ತೆರೆಯಬೇಕು. ನೆರೆ ನಿರ್ವಹಣೆಗೆ ರಚಿಸಿದ ನೋಡಲ್ ಅಧಿಕಾರಿಗಳು ಆಯಾ ಗ್ರಾಪಂ ವ್ಯಾಪ್ತಿಯ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ನಿರ್ಲಕ್ಷ್ಯ ವಹಿಸದೆ ಮಾನವೀಯ ನೆಲೆಯಲ್ಲಿ ಜನತೆಗೆ ಸಹಕರಿಸಿ ಎಂದರು.
ಖರ್ವಾ ರಸ್ತೆ, ಬೇರೊಳ್ಳಿ, ಕಾವೂರು, ಕಾಸರಕೋಡ ರಸ್ತೆ ಮಳೆಯಿಂದಾಗಿ ಹದಗೆಟ್ಟಿವೆ ಎಂಬ ವಿಷಯ ಪ್ರಸ್ತಾಪವಾಯಿತು. ಅದಕ್ಕೆ ಶಾಸಕರು, ಮಳೆ ಹಾನಿ ಸಂಭವಿಸಿದ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.
ಕೊಡ್ಲಗದ್ದೆ ಕಿರು ಸೇತುವೆ ಮುರಿದು ಬಿದ್ದು ಣ ವರ್ಷವಾಗಿದೆ. ಇದೇ ಸೇತುವೆಗೆ ಮರದ ದಿಮ್ಮಿ ಬಳಸಿ ಸಂಕವಾಗಿಸಿಕೊಂಡ ಗ್ರಾಮಸ್ಥರು 6 ವರ್ಷಗಳಿಂದ ಸಂಚರಿಸುತ್ತಿದ್ದಾರೆ. ಅದು ಸುದ್ದಿಯಾಗಲಿಲ್ಲ. ಅದೇ ಮರದ ದಿಮ್ಮಿ ಮಳೆಗೆ ಈ ವರ್ಷ ತೇಲಿ ಹೋಗಿದ್ದು ಪ್ರಚಾರ ಪಡೆಯುತ್ತಿದೆ. ಈ ಬಗ್ಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಅನುದಾನ ನೀಡುವುದಾಗಿ ತಿಳಿಸಿದರು.
ತಾಪಂ ಇಒ ಆರ್.ಡಿ. ನಾಯ್ಕ, ಪಿಡಿಒಗಳಿಗೆ ಆಗಸ್ಟ್ನೊಳಗೆ ಮಳೆ ಹಾನಿ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ತಹಸೀಲ್ದಾರ್ ಜಿ.ಎಂ. ಬೋರಕರ್, ಜಿಪಂ, ತಾಪಂ ಪ್ರತಿನಿಧಿಗಳು, ಹಲವು ಇಲಾಖಾಧಿಕಾರಿಗಳು, ನೋಡಲ್ ಅಧಿಕಾರಿಗಳು ಮತ್ತಿತರರು ಸೋಮವಾರ ನಡೆದ ಸಭೆಯಲ್ಲಿ ಇದ್ದರು.
ಜನ-ಜಾನುವಾರು ರಕ್ಷಣೆಗೆ 11 ದೋಣಿ
ಮನವಿಗೆ ಸ್ಪಂದಿಸಿದ ಸಚಿವ ಆರ್.ವಿ. ದೇಶಪಾಂಡೆ, ಪ್ರವಾಹಪೀಡಿತ ನೆರೆ ಸಂದರ್ಭದಲ್ಲಿ ಜನ- ಜಾನುವಾರು ರಕ್ಷಣೆಗಾಗಿ 11 ದೋಣಿ ಮಂಜೂರು ಮಾಡಿದ್ದು, ಆಯಾ ಗ್ರಾಪಂಗಳಿಗೆ ನೀಡಿದೆ. ದೇಶಪಾಂಡೆ 26 ಲಕ್ಷ ಮಂಜೂರಿ ನೀಡಿದ್ದಾರೆ. ರು. 17,51,100 ವೆಚ್ಚದಲ್ಲೀಗ ನಗರಬಸ್ತಿಕೇರಿ, ಉಪ್ಪೋಣಿ, ಹೆರಂಗಡಿ, ಜಲವಳ್ಳಿ, ಮಾವಿನಕುರ್ವಾ, ಕಾಸರಕೋಡ ಗ್ರಾಪಂಗಳಿಗೆ ಆರು ಯಾಂತ್ರಿಕ ದೋಣಿ, ಹಡಿನಬಾಳ, ಚಿಕ್ಕನಕೋಡ, ಹಳದೀಪುರ, ಕಡತೋಕಾ, ನವಿಲಗೋಣ ಗ್ರಾಪಂಗಳಿಗೆ ಐದು ಗ್ಲಾಸ್ಫೈಬರ್ ಚಿಕ್ಕ ದೋಣಿಗಳನ್ನು ಒದಗಿಸಿದೆ. ಇವುಗಳನ್ನು ನೆರೆಪೀಡಿತ ಸಂದರ್ಭಗಳ ಹೊರತಾಗಿ ನಿತ್ಯ ಜನರ ಅನುಕೂಲಕ್ಕೆ ತಾರಿ ದಾಟಿಸಲು ಬಳಸಬಹುದು. ಇದರ ಮೇಲ್ವಿಚಾರಣೆಯನ್ನು ಆಯಾ ಗ್ರಾಪಂಗಳು ಮಾಡಬೇಕೆಂದು ಶಾಸಕರು ಸೂಚಿಸಿದರು.