ಅಂತರಂಗದ ಗುರುವಿಗೆ ಎತ್ತರದ ಸ್ಥಾನವಿರಲಿ

Updated on

ಕನ್ನಡಪ್ರಭ ವಾರ್ತೆ, ಹೊನ್ನಾವರ, ಆ. 4
ಚಾತುರ್ಮಾಸ್ಯವೆಂದರೆ ಬದುಕಿಗೆ ಸಂಪತ್ತು ತುಂಬುವ ವಿಶೇಷ ದಿನ. ಉತ್ತಮ ಬದುಕಿಗೆ ಬೇಕಾದ ಉತ್ತಮ ಅಂಶಗಳನ್ನು ಗಳಿಸಿಕೊಳ್ಳುವ ಸದವಕಾಶವಿದು ಎಂದು ರಾಘವೇಶ್ವರ ಶ್ರೀಗಳು ನುಡಿದರು.
ಜಯಚಾತುರ್ಮಾಸ್ಯದ ನಿಮಿತ್ತ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಇಂದು ಸೇವೆ ಸಲ್ಲಿಸಿದ ಭೋವಿ ಸಮಾಜದವರು ಗುರುಪೀಠವನ್ನು ಎತ್ತಿಹಿಡಿದವರು. ಆನೆ-ಮೇನೆ-ಸೇನೆಯ ರಾಜಸನ್ಯಾಸ ಪೀಠವಾಗಿರುವ ಶ್ರೀ ರಾಮಚಂದ್ರಾಪುರ ಮಠದಲ್ಲಿ ಮೇನೆಯನ್ನು ಹೊತ್ತು ಸೇವೆಸಲ್ಲಿಸಿದ ಭೋವಿ ಸಮಾಜ ಇಂದು ಇಲ್ಲಿದ್ದರೆ, ಶಿಷ್ಯ ಸಮೂಹ ಸೇನೆಯ ರೂಪದಲ್ಲಿದೆ. ಭೋವಿ ಸಮಾಜದ ಭಾವ ಇಂದಿನ ಆಧುನಿಕ ವಾಹನಗಳಲ್ಲಿಲ್ಲ. ಅದರಲ್ಲಿರುವ ಸೌಲಭ್ಯ ಮುಖ್ಯವಲ್ಲ ಹಿಂದಿರುವ ಭಾವ ಮುಖ್ಯ. ಗುರುಪೀಠವನ್ನು ಎತ್ತಿಹಿಡಿದ ಭೋವಿ ಸಮಾಜಕ್ಕೆ ಸಂಪೂರ್ಣ ಆಶೀರ್ವಾದವಿದೆ ಎಂದರು.
ಇಂದು ವಿಶೇಷ ವ್ಯಕ್ತಿತ್ವವೊಂದು ಪುಸ್ತಕರೂಪದಲ್ಲಿ ಪ್ರಕಟವಾಗುತ್ತಿದೆ. ಭೂಮಿ ಎಂಬ ತೋಟದ ಕಳೆ - ಕಳೆದು, ಬೆಳೆ - ಬೆಳೆದು ಭೂಮಿಯನ್ನು ನಂದನವನವನ್ನಾಗಿಸಿದ ಮಹಾಪುರುಷ ಪರಶುರಾಮ ಕೃತಿಯಲ್ಲಿ ದುಷ್ಟರಿಗೆ ಕೊಡಲಿಯಾಗು ಎನ್ನುವ ಸಂದೇಶವಿದೆ ಎಂದು ಅವರು ನುಡಿದರು. ನಿಮ್ಮ ನಿಮ್ಮ ಬದುಕಿನಲ್ಲೂ ಗುರುವನ್ನು ಎತ್ತಿಹಿಡಿಯಿರಿ, ಅಂತರಂಗದ ಗುರುವಿಗೆ ಎತ್ತರದ ಸ್ಥಾನವಿರಲಿ ಎಂಬ ಸಂದೇಶವನ್ನು ಶ್ರೀಗಳು ನೀಡಿದರು.
ಭಾರತಿ ಪ್ರಕಾಶನದವರು ಪ್ರಕಟಿಸಿದ ಕೃತಿಯ ಲೇಖಕರಾದ ವಿದ್ವಾನ್ ಗಣೇಶ ಭಟ್ಟ ಕೂಜಳ್ಳಿ ಲೇಖಕರ ನುಡಿಯನ್ನಾಡಿದರು. ನಾಗರಾಜ ಭಟ್ಟ ಬೆಂಗ್ರೆ ಪ್ರಾಯೋಜಕತ್ವ ವಹಿಸಿದ್ದರು. ಶ್ರೀಗಳ ಲೇಖನಾಮೃತವನ್ನೊಳಗೊಂಡ ಅಮೃತತಿಥಿ ಕಿರುಹೊತ್ತಿಗೆಯನ್ನು ಕೆನರಾ ವೆಲ್ಫೇರ್ ಟ್ರಸ್ಟಿಗಳಾದ ಪ್ರೊ. ಜಿ.ವಿ. ಭಟ್ ಕೊಂಕೇರಿ ಹಾಗೂ ಆಡಳಿತಾಧಿಕಾರಿ ಕೃಷ್ಣಾನಂದ ಶೆಟ್ಟಿ ಜಂಟಿಯಾಗಿ ಬಿಡುಗಡೆಗೊಳಿಸಿದರು. ರವೀಂದ್ರ ಭಟ್ಟ ಸೂರಿ ಕೃತಿ ಹಾಗೂ ಲೇಖಕರನ್ನು ಪರಿಚಯಿಸಿದರು.
ಸೋಮವಾರದ ಸರ್ವಸೇವೆಯನ್ನು ಸಿದ್ದಾಪುರ ಮಂಡಲದ ದೊಡ್ಮನೆ, ಚಪ್ಪರಮನೆ, ಇಟಗಿ ವಲಯದವರು ನೆರವೇರಿಸಿದರು. ಕೆಕ್ಕಾರಿನ ದೇಶಭಂಡಾರಿ ಸಮಾಜದವರು ಆಂಜನೇಯನಿಗೆ ಕಲ್ಪೋಕ್ತಪೂಜೆ ಸಲ್ಲಿಸಿದರು. ಸುಬ್ರಹ್ಮಣ್ಯ ಹರಿಹರ ಹೆಗಡೆ, ಹೆರವಟ್ಟಾ ಗಾಯತ್ರಿ ಹವನದ ಪ್ರಾಯೋಜಕತ್ವ ವಹಿಸಿದ್ದರು. ಹೆಗಡೆ ವಲಯದ ಗೋದಾವರಿ ಪ್ರಕಾಶ ಹೆಗಡೆ ಅನ್ನಪೂರ್ಣೇಶ್ವರೀ ಯಾಗದ ಪ್ರಾಯೋಜಕತ್ವ ವಹಿಸಿದ್ದರು.
ಉತ್ತರ ಕನ್ನಡದ ಎಲ್ಲ ಭಾಗಗಳಲ್ಲಿ ವಾಸವಾಗಿರುವ ಅನಾದಿ ಕಾಲದಿಂದ ಶ್ರೀಮಠದ ಸೇವೆ ಸಲ್ಲಿಸುತ್ತಿರುವ ಮೂಲ ಭೋವಿ ಸಮಾಜ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳಿಂದ ವಂಚಿತವಾಗಿದೆ. ನ್ಯಾಯಯುತವಾಗಿ ನಮ್ಮ ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳು ಸಿಗುವಂತಾಗಬೇಕು. ಶ್ರೀಪೀಠದ ಅನುಗ್ರಹವಾಗಬೇಕು ಎಂದು ಶ್ರೀಗಳವರಲ್ಲಿ ಸಮಾಜದವರು ಒಟ್ಟಾಗಿ ನಿವೇದಿಸಿದರು. ನೇಪಾಳದ ಪಶುಪತಿನಾಥ ದೇವಾಲಯದ ಮೂಲ ಅರ್ಚಕರಾದ ಸುಬ್ರಹ್ಮಣ್ಯ ಭಟ್ಟ ಶ್ರೀಗಳಿಂದ ವಿಶೇಷ ಅನುಗ್ರಹ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com