ಕುಮಟಾ: ಅಘನಾಶಿನಿ ಹೋಬಳಿ ಮಟ್ಟದ ಜನಸ್ಪಂದನ ಸಭೆ ಕಾಗಲ ಗ್ರಾಮದ ಅಘನಾಶಿನಿಯ ಹಾಲಕ್ಕಿ ಒಕ್ಕಲ ಸಭಾಭವನದಲ್ಲಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿತು. ಜಿಪಂ ಎಂಜಿನಿಯರಿಂಗ್ ವಿಭಾಗದ ಕಾರ್ಯವೈಖರಿ ಕುರಿತು ಗ್ರಾಮಸ್ಥರು ಅತೃಪ್ತಿ ವ್ಯಕ್ತಪಡಿಸಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು. ಹೆಸ್ಕಾಂ ರಸ್ತೆ ಮಧ್ಯೆ ಹಾದು ಹೋಗಿರುವ ತಂತಿಗಳ ಕೆಳಗೆ ಗಾರ್ಡ್ ಅಳವಡಿಸದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆ ಗಟಾರು ನಿರ್ಮಿಸದೆ ರಸ್ತೆ ಕಾಮಗಾರಿ ನಡೆಸುತ್ತಿರುವುದೂ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು. ಸಾರಿಗೆ ಬಸ್ಸುಗಳು ರಸ್ತೆಯಲ್ಲೇ ಕೆಟ್ಟು ನಿಲ್ಲುವುದರ ಬಗ್ಗೆಯೂ ಜನ ಸಿಟ್ಟಾದರು. ಒಳ್ಳೆಯ ಬಸ್ಸುಗಳನ್ನು ಬಿಡುವಂತೆ ಒತ್ತಾಯಿಸಿದರು. ಪ್ರಕೃತಿ ವಿಕೋಪದಲ್ಲಿ ಭಾಗಶಃ ಮನೆ ಹಾನಿಗೀಡಾದ ಸಂತ್ರಸ್ತರಿಗೆ ಶಾಸಕರು ಪರಿಹಾರದ ಚೆಕ್ ವಿತರಿಸಿದರು. ಸಭೆಯಲ್ಲಿ ತಾಪಂ ಸದಸ್ಯ ರತ್ನಾಕರ ನಾಯ್ಕ, ಗ್ರಾಪಂ ಅಧ್ಯಕ್ಷ ಜಿನೇಂದ್ರ ಜೈನ್ ಹಾಗೂ ಸದಸ್ಯರು ಹಾಜರಿದ್ದರು. ಎಂ.ಎಂ. ಖಾನ್ ಸ್ವಾಗತಿಸಿದರು.
ಜಿಲ್ಲಾದ್ಯಂತ 165 ಮಿಮೀ ಮಳೆ
ಕಾರವಾರ: ಸೋವವಾರ ಬೆಳಗ್ಗೆ 8ರಿಂದ ನಂತರದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಉಂಟಾದ ಮಳೆ ಪ್ರಮಾಣ ಹೀಗಿದೆ. ಅಂಕೋಲಾದಲ್ಲಿ 27.6 ಮಿ.ಮೀ. ಭಟ್ಕಳ 54.8 ಮಿ.ಮೀ. ಹಳಿಯಾಳ 7.2 ಮಿ.ಮೀ, ಹೊನ್ನಾವರ 40 ಮಿ.ಮೀ, ಕಾರವಾರ 9.8 ಮಿ.ಮೀ, ಕುಮಟಾ 25.4 ಮಿ.ಮೀ, ಮುಂಡಗೋಡ 10.2 ಮಿ.ಮೀ, ಸಿದ್ದಾಪುರ 44.2 ಮಿ.ಮೀ, ಶಿರಸಿ 12 ಮಿ.ಮೀ, ಜೋಯಿಡಾ 31 ಮಿ.ಮೀ. ಯಲ್ಲಾಪುರ 32 ಮಿ.ಮೀ., ಮಳೆಯಾಗಿದೆ. ಆ. ತಿಂಗಳ ಸಾಮಾನ್ಯ ಮಳೆ ಪ್ರಮಾಣ 594.3 ಮಿ.ಮೀ. ಇದ್ದು, ಇದುವರೆಗೆ ಸರಾಸರಿ 165 ಮಿ.ಮೀ. ಮಳೆ ದಾಖಲಾಗಿದೆ.
ಜಲಾಶಯ ನೀರಿನ ಮಟ್ಟ: ಕದ್ರಾ 34. 50 ಮೀ (ಗರಿಷ್ಠ), 32.7 ಮೀ (ಇಂದಿನ ಮಟ್ಟ), ಕೊಡಸಳ್ಳಿ 75.50 ಮೀ (ಗರಿಷ್ಠ), 72.15 (ಇಂದಿನ ಮಟ್ಟ), ಸೂಪಾ 564 ಮೀ. (ಗ), 544 ಮೀ (ಇ.ಮಟ್ಟ), ತಟ್ಟಿಹಳ್ಳ 468.38 ಮೀ (ಗ), 457.85 ಮೀ (ಇ.ಮಟ್ಟ), ಬೊಮ್ಮನಹಳ್ಳಿ 438.38 ಮೀ(ಗ), 435.12 ಮೀ (ಇ.ಮಟ್ಟ), ಗೇರುಸೊಪ್ಪ 55 ಮೀ (ಗ), 49.64 ಮೀ (ಇ.ಮಟ್ಟ), ಲಿಂಗನಮಕ್ಕಿ (ಅಡಿಗಳಲ್ಲಿ) 1809 ಅಡಿ (ಗ) , 1802 .35 ಅಡಿ (ಇ.ಮಟ್ಟ)
ನಾಳೆ ವಿದ್ಯುತ್ ವ್ಯತ್ಯಯ
ಕಾರವಾರ: ವಿದ್ಯುತ್ ಉಪಕರಣಗಳ ನಿರ್ವಹಣಾ ಕಾರ್ಯಗಳ ಹಿನ್ನೆಲೆಯಲ್ಲಿ ಆ. 6ರಂದು ಬುಧವಾರ ಕಾರವಾರ ನಗರದ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಶಿರವಾಡ, ಸುಂಕೇರಿ, ನಂದನಗದ್ದ, ತೇಲಂಗ ರೋಡ್, ಕೆಎಚ್ಬಿ ಕಾಲೊನಿ, ಕೈಗಾರಿಕಾ ಪ್ರದೇಶದಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಅಧಿಕಾರಿಗಳು ಕೋರಿದ್ದಾರೆ.
ಕೌಶಲ್ಯ ಅಭಿವೃದ್ಧಿ ತರಬೇತಿ
ಕಾರವಾರ: ಅಲ್ಪಸಂಖ್ಯಾತ ಮಹಿಳೆಯರಿಗೆ ತಾಲೂಕು ಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗವಕಾಶಗಳಿಗೆ ವಿವಿಧ ತರಬೇತಿಗಳನ್ನು ಆಯೋಜಿಸಲಾಗಿದೆ.ಅಕೌಂಟಿಂಗ್ ಬೇಸಿಕ್, ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ಅನಿಮೇಶನ್, ಫೋಟೊಶಾಪ್, ಕೋರಲ್ ಡ್ರಾ, ಫ್ಲಾಶ್ (ಮೂರು ತಿಂಗಳ ಅವಧಿ) ಮೆಹಂದಿ ಡಿಸೈನಿಂಗ್, ಟೀಶರ್ಟ್ಗಳ ಮೇಲೆ ಲೋಗೊ ಡಿಸೈನಿಂಗ್, ಮಗ್ ಮತ್ತು ಪ್ಲೇಟ್ ಇತ್ಯಾದಿಗಳ ಮೇಲೆ ಸಾಂಪ್ರದಾಯಿಕ ರಂಗೋಲಿ ಡಿಸೈನಿಂಗ್ ತರಬೇತಿ ನೀಡಲಾಗುವುದು. ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಚೇರಿ ಅಥವಾ ತಾಲೂಕಿನಲ್ಲಿರುವ ಎಸಿಸಿಪಿಎಲ್ ತರಬೇತಿ ಸಂಸ್ಥೆಗಳಿಂದ ಪಡೆದು ಆ. 11ರ ಒಳಗಾಗಿ ಸಲ್ಲಿಸಬೇಕು. ಅಭ್ಯರ್ತಿಯ ವಯೋವುತಿ 18ರಿಂದ 41ರ ಒಳಗಿರಬೇಕು. ಕುಟುಂಬದ ವಾರ್ಷಿಕ ವರಮಾನ ರು. 3 ಲಕ್ಷ ಮೀರಿರಬಾರದು. ತರಬೇತಿಯನ್ನು ಕಾರವಾರ ಮತ್ತು ದಾಂಡೇಲಿ ತರಬೇತಿ ಕೇಂದ್ರಗಳಲ್ಲಿ ನೀಡಲಾಗುವುದು. ಎಸ್ಎಸ್ಎಲ್ಸಿ, ಐಟಿಐ ಉತ್ತೀರ್ಣರಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ 08382-226589 ಸಂಪರ್ಕಿಸಬಹುದು.
ಮಂಜುನಾಥಗೆ ಬೀಳ್ಕೊಡುಗೆ
ಯಲ್ಲಾಪುರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಯಲ್ಲಾಪುರ ಘಟಕದಲ್ಲಿ ಸುಮಾರು 34 ವರ್ಷಗಳ ಕಾಲ ಚಾಲಕರಾಗಿ ಕಾರ್ಯನಿರ್ವಹಿಸಿ ಸೇವಾವಧಿಯಲ್ಲಿ ಬಂಗಾರದ ಪದಕ ಹಾಗೂ ಬೆಳ್ಳಿ ಪದಕಗಳನ್ನು ಪಡೆದಿದ್ದ ಮಂಜುನಾಥ ನಾಯ್ಕ (ಮಂಜಣ್ಣ) ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ಅವರನ್ನು ಸಂಸ್ಥೆ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಘಟಕ ವ್ಯವಸ್ಥಾಪಕ ಡಿ. ಸಂತೋಷ ಅಧ್ಯಕ್ಷತೆ ವಹಿಸಿ ಮಂಜಣ್ಣ ಅವರನ್ನು ಸನ್ಮಾನಿಸಿದರು. ಘಟಕದ ಸಿಬ್ಬಂದಿ, ಕಾರ್ಮಿಕರು ಉಪಸ್ಥಿತರಿದ್ದರು. ಭಾಗವತ ವಂದಿಸಿದರು.
ರೈಲಿಗೆ ಸಿಲುಕಿ ಒಬ್ಬ ಸಾವು
ಜೋಯಿಡಾ: ತಾಲೂಕಿನ ಕ್ಯಾಸಲ್ರಾಕ್ ರೈಲ್ವೆ ಸ್ಟೇಶನ್ನಲ್ಲಿ ಪ್ರವಾಸಿಗನೊಬ್ಬ ನಿಜಾಮುದ್ದಿನ್ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ. ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ರವಿ ವಾಸುವಳ್ಳಿ (36) ಮೃತನು. ಬಿಜಾಪುರದಿಂದ ಜೋಯಿಡಾ ತಾಲೂಕಿನ ದೂದಸಾಗರ ಜಲಪಾತ ವೀಕ್ಷಣೆಗೆ ತಂಡದೊಂದಿಗೆ ಬಂದಿದ್ದ ಎನ್ನಲಾಗಿದೆ. ಬಿಜಾಪುರದ ಇಂಡಿ ತಾಲೂಕಿನ ಸುಮಾರು 15 ಪ್ರವಾಸಿಗರ ತಂಡ ಭಾನುವಾರ ಮುಂಜಾನೆ ಕ್ರೂಸರ್ ಮೂಲಕ ಕ್ಯಾಸಲ್ರಾಕ್ ರೈಲ್ವೆ ಸ್ಟೇಶನ್ಗೆ ಬಂದಿಳಿದು ಅಲ್ಲಿಂದ ರೈಲ್ವೆ ಮೂಲಕ ದೂದಸಾಗರ ವೀಕ್ಷಣೆಗೆ ಹೋಗಿದ್ದರೆನ್ನಲಾಗಿದೆ. ದೂದಸಾಗರ ಜಲಪಾತ ವೀಕ್ಷಿಸಿ ಮರಳಿ ಬಂದು ನಿಜಾಮುದ್ದಿನ್ ಎಕ್ಸ್ಪ್ರೆಸ್ ರೈಲು ಇಳಿಯುವಾಗ ರೈಲ್ವೆ ಸ್ಟೇಶನ್ ಬಳಿ ಆಯತಪ್ಪಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
Advertisement