ಕನ್ನಡಪ್ರಭ ವಾರ್ತೆ, ಶಿರಸಿ, ಆ. 5
ತಾಲೂಕಿನಲ್ಲಿಯ ಶಿಕ್ಷಕರ ಕೊರತೆ ಹೋಗಲಾಡಿಸುವ ನಿಟ್ಟಿನಲ್ಲಿ 60 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಶಿರಸಿ ಬಿಇಒ ಎಂ.ಎಸ್. ಹೆಗಡೆ ಹೇಳಿದರು.
ತಾಪಂನ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಸದ್ಯ ಇಲಾಖೆ 20 ಶಿಕ್ಷಕರ ಕೊರತೆ ಅನಿಭವಿಸುತ್ತಿದೆ. ಈ ಶಿಕ್ಷಕರ ನೇಮಕ ತ್ವರಿತವಾಗಿ ಆಗಬೇಕಾಗಿದೆ ಎಂದು ತಿಳಿಸಿದರು. ತಾಪಂ ವತಿಯಿಂದ 20 ಶಿಕ್ಷಕರನ್ನು ತ್ವರಿತವಾಗಿ ನೇಮಿಸಕೊಳ್ಳಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.
ಪಶುಸಂಗೋಪನಾ ಇಲಾಖೆ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ರಾಜ್ಯವನ್ನು ಕಾಲುಬಾಯಿ ರೋಗಮುಕ್ತವನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಎಲ್ಲೆಡೆ 7ನೇ ಹಂತದ ಕಾಲುಬಾಯಿ ಲಸಿಕಾ ಕಾರ್ಯಕ್ರಮವನ್ನು ಆ. 15ರಿಂದ ಹಮ್ಮಿಕೊಳ್ಳಲಾಗುತ್ತಿದೆ. ಶೇ. 100 ಸಾಧನೆ ಮಾಡುವುದು ನಮ್ಮ ಗುರಿ.
ಲಸಿಕೆ: ರೈತರು ಪಶುಗಳಿಗೆ ಕಾಲುಬಾಯಿ ಲಸಿಕೆ ಹಾಕಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ರೈತರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಲಸಿಕೆ ಹಾಕಿಸಲು ಜಾಗೃತಿ ಮೂಡಿಸುವ ಸಲುವಾಗಿ ಮೆಸೇಜ್ ಮಾಡುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಲಸಿಕೆ ಹಾಕುವ ದಿನಾಂಕವನ್ನು ರೈತರ ಮೊಬೈಲ್‌ಗೆ ಮೆಸೇಜ್ ಮೂಲಕ ಕಳಿಸಲಾಗುತ್ತದೆ. ಈ ಪ್ರಕ್ರಿಯೆಗಾಗಿ ರೈತರ ಮೊಬೈಲ್ ನಂಬರ್ ಸಂಗ್ರಹ ಮಾಡಲಾಗುತ್ತಿದೆ ಎಂದರು.
ಹಿಂದುಳಿದ ವರ್ಗಗಳ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಹಿಂದುಳಿದ ವರ್ಗದ ಮಕ್ಕಳಿಗಾಗಿ ಸ್ಕಾಲರ್ ಶಿಪ್ ನೀಡಲಾಗುತ್ತಿದೆ.
ವಿದ್ಯಾರ್ಥಿ ವೇತನ: ಗಂಡು ಮಕ್ಕಳಿಗೆ ರು. 500 ಹಾಗೂ ಹೆಣ್ಣುಮಕ್ಕಳಿಗೆ ರು. 600 ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವಿದ್ಯಾರ್ಥಿ ವೇತನ ಪಡೆಯುವಂತೆ 50 ಶಾಲೆಗಳಿಗೆ ಮಾಹಿತಿ ತಿಳಿಸಲಾಗಿದೆ. ಹಲವಾರು ಅರ್ಜಿಗಳು ಬಂದಿವೆ. ವಿದ್ಯಾರ್ಥಿ ವೇತನ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದಾಗ ತಾಪಂ ಸದಸ್ಯ ಗುರುಪಾದ ಹೆಗಡೆ ಅವರು ಮಾತನಾಡಿ ಈ ವಿದ್ಯಾರ್ಥಿ ವೇತನ ಪಡೆಯಲು ಅಗತ್ಯ ಕಾಗದ ಪತ್ರಗಳನ್ನು ಸಂಗ್ರಹಿಸಲು ರು. 1200 ಅಧಿಕ ಖರ್ಚಾಗುತ್ತದೆ ಎಂದು ಲೇವಡಿ ಮಾಡಿದರು.
ಪೊಲೀಸ್, ಶಿಶುಕಲ್ಯಾಣ ಇಲಾಖೆ ಅಧಿಕಾರಿಗಳು ಮಾತನಾಡಿ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಹೆಚ್ಚಿನ ಒತ್ತು ನೀಡಿಲಾಗಿದೆ. ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಮಕ್ಕಳು ಅಥವಾ ಪಾಲಕರು 1098ಕ್ಕೆ ಕರೆ ಮಾಡಬಹುದಾಗಿದೆ. ಅಲ್ಲದೇ ಇಲಾಖೆ ಸಾಂತ್ವನ ಕೇಂದ್ರವನ್ನೂ ತೆರೆದಿದ್ದು 1091ಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಅಲ್ಲದೆ ಅಂಗನವಾಡಿ ಕುರಿತಂತೆಯೂ ಚರ್ಚೆ ನಡೆಯಿತು. ತೋಟಗಾರಿಕಾ ಇಲಾಖೆ, ಕೆಡಿಸಿಸಿ, ಚಿಕ್ಕ ನೀರಾವರಿ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಶೈಲಜಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ದತ್ತಾತ್ರೆಯ ವೈದ್ಯ, ತಾಪಂ ಕಾರ್ಯನಿರ್ವಹಣಾಧಿಕಾರಿ ಚಿಕ್ಕಮಠ, ಬಂಗಾರಪ್ಪ ಇದ್ದರು.
Advertisement