ಹೊನ್ನಾವರ: ದೇವ, ಜೀವ, ದೇಹ, ದೇಶ ಒಂದೇ ರೇಖೆಯಲ್ಲಿದ್ದಾಗ ಅದು ರಾಮ ರಾಜ್ಯ ಎನ್ನಿಸಿಕೊಳ್ಳುತ್ತದೆ. ನೇರ ವ್ಯಕ್ತಿತ್ವ - ನೇರ ಅಭಿವ್ಯಕ್ತಿ ಇರುವವರು ಉತ್ತಮ ವ್ಯಕ್ತಿ ಎನ್ನಿಸಿಕೊಳ್ಳುತ್ತಾರೆ. ಬಾಲ್ಯಾವಸ್ಥೆಯಲ್ಲಿ ಹೆಚ್ಚು ಕಾಲ ಕಳೆಯಲು ಸಾಧ್ಯವಾಗಲಿಲ್ಲ. ಭಜಗೋವಿಂದಂ ಪ್ರವಚನದಲ್ಲಾದರೂ ಬಾಲ್ಯವನ್ನು ಹೆಚ್ಚು ಕಾಲ ಕಳೆಯೋಣ ಎಂದು ರಾಘವೇಶ್ವರ ಶ್ರೀ ನುಡಿದರು.
ಜಯಚಾತುರ್ಮಾಸ್ಯದ ನಿಮಿತ್ತ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಿದ್ಯೆ ಇದ್ದು ಗರ್ವವಿಲ್ಲದಿದ್ದರೆ ಅದು ಶ್ರೇಷ್ಠ. ನಿಜವಾದ ವಿದ್ಯೆ ಇದ್ದರೆ ವಿನಯ ತನ್ನಿಂದ ತಾನೇ ಬರುತ್ತದೆ.ಪಂಡಿತ ವಿದ್ಯಾ ಮಂಡಿತನಾಗಬೇಕು. ಗಮಂಡಿತನಾಗಬಾರದು ಎಂದು ಅವರು ನುಡಿದರು.
ಬೀಜ ವೃಕ್ಷವಾಗುವಾಗ ನಡೆಯುವ ಪ್ರಕ್ರಿಯೆಯಂತೆ ನಾವು ವಾತಾವರಣದಿಂದ ಹೀರಿಕೊಂಡು ಬೆಳೆದಿದ್ದೇವೆ. ಒಳ್ಳೆಯದನ್ನು ಹೀರಿಕೊಂಡರೆ ಪರಿಶುದ್ಧ ವಾತಾವರಣದಲ್ಲಿ ಬೆಳೆದರೆ ಉತ್ತಮ ವ್ಯಕಿಯಾಗಲು ಸಾಧ್ಯ. ಮಕ್ಕಳಿಗೆ ಬೈಯುವಾಗಲೂ ಕಾರಣ ನೀಡಿ ಬೈಯಬೇಕು. ಸರಿ ತಪ್ಪು ತಿಳಿಸಿ ಬೈದಾಗ ಬೈಗುಳದಿಂದಲೂ ಬೆಳೆಯಲು ಸಾಧ್ಯ.
ನಾವು ಒಳಗಿರುವುದನ್ನು ಹೊರಹಾಕಿದರೆ ಹೊರಗಿನ ಸಂಬಂಧ ಹಾಳಾಗುತ್ತದೆ. ಒಳಗಿರುವುದನ್ನು ಹೊರಹಾಕದಿದ್ದರೆ ನಮ್ಮ ಒಳಗೇ ಹಾಳಾಗುತ್ತದೆ. ಹಾಗಾಗಿ, ಸತ್ಯವನ್ನು ಸಿಹಿಯಾಗಿ ಹೇಳಲು ರೂಢಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧ್ಯ. ನಮ್ಮ ಮಕ್ಕಳು ಒಳ್ಳೆಯವರಾಗಿ ಬೆಳೆಯಬೇಕೆಂದರೆ ಮಗು ಬೆಳೆಯುವ ವಾತಾವರಣದ ಕೆಡಕುಗಳನ್ನು ತೆಗೆಯಬೇಕು. ಮಕ್ಕಳೆದುರು ತಪ್ಪು ಮಾಡಿದರೆ ಮುಗ್ಧ ಮಗು ಅದನ್ನೇ ಸಹಜವೆಂದು ಭಾವಿಸಿ ತಪ್ಪು ಮಾಡುತ್ತದೆ. ಹಾಗಾಗಿ, ಬೆಳೆಯುವ ಮಗುವಿನ ಬಗ್ಗೆ ಜಾಗ್ರತೆ ಇರಲಿ. ಎಂದೂ ವ್ಯಸನಿಗಳಾಗಬೇಡಿ, ಮಗುವಿನ ಭವಿಷ್ಯಕ್ಕಾಗಿ ವ್ಯಸನ ತ್ಯಜಿಸಿ ಎಂದು ಕರೆ ನೀಡಿದರು.
ವಿದ್ವಾನ್ ಅನಂತ ಶರ್ಮಾ ಭುವನಗಿರಿ ಬರೆದ ಶ್ರೀ ಶಂಕರಾಚಾರ್ಯ ಕೃತಿಯನ್ನು ಶ್ರೀಗಳು ಬಿಡುಗಡೆ ಮಾಡಿದರು. ವಿ.ಜಿ. ಹೆಗಡೆ ಮುಡಾರೆ ಕೃತಿ ಬಿಡುಗಡೆ ಪ್ರಾಯೋಜಕತ್ವ ವಹಿಸಿದ್ದರು. ರಾಮರಕ್ಷಾ ಸ್ತೋತ್ರ ಕಿರು ಹೊತ್ತಗೆಯನ್ನು ನಾಗರಾಜ ದೀಕ್ಷಿತ ಬಿಡುಗಡೆ ಮಾಡಿದರು. ದಿನೇಶ ಪೈ ಪೆರ್ಲ ಶ್ರೀಗಳ ಅನುಗ್ರಹ ಪಡೆದರು. ಎಲ್.ಆರ್. ಭಟ್ಟ ಶಿರಸಿ ಸ್ವರಚಿತ ರಾಮಾಯಣ ಕಥಾಸಾಗರ ಗ್ರಂಥವನ್ನು ಶ್ರೀಗಳಿಗೆ ಸಮರ್ಪಿಸಿದರು. ಜಯಚಾತುರ್ಮಾಸ್ಯ ಸಮಿತಿ ಸಂಪರ್ಕ ಕಾರ್ಯದರ್ಶಿ ರವೀಂದ್ರ ಭಟ್ಟ ಸೂರಿ ಕೃತಿ ಮತ್ತು ಲೇಖಕರನ್ನು ಪರಿಚಯಿಸಿದರು.
Advertisement