ಕಾರವಾರ: ಕರಾವಳಿ ತಾಲೂಕುಗಳಲ್ಲಿ ಎಲ್ಲಡೆ ಮೋಡ ಮುಸುಕಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುತ್ತಿದೆ. ಕಾರವಾರದಲ್ಲಿ ಭಾರಿ ಮಳೆಯಾಗುತ್ತಿದೆ. ಆಗಾಗ ಬಿರುಗಾಳಿ ಬೀಸುತ್ತಿದ್ದು, ನೆರೆ ಆತಂಕ ದೂರವಾಗಿದೆ.
ಕಾರವಾರದಲ್ಲಿ ಮಂಗಳವಾರ ಬೆಳಗಿನಿಂದ ನಿರಂತರವಾಗಿ ಮಳೆಯಾಗಿದೆ. ಮಧ್ಯಾಹ್ನ 1.30ಕ್ಕೆ ಭಾರಿ ಮಳೆಯಾಗಿದೆ. ಮೋಡ ಮುಸುಕಿದ ವಾತಾವರಣವಿದ್ದು, ತೀವ್ರ ಗಾಳಿ ಬೀಸುತ್ತಿದೆ. ಅಂಕೋಲಾದಲ್ಲಿ ರಾತ್ರಿ ಸಮಯದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಎರಡು ಮೂರು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದೆ. ಮಂಗಳವಾರ ಹೆಚ್ಚಿನ ಮಳೆಯಾಗಿಲ್ಲ. ಕುಮಟಾ, ಭಟ್ಕಳ, ಹೊನ್ನಾವರಗಳಲ್ಲಿಯೂ ಸಾಧಾರಣ ಮಳೆಯಾಗಿದೆ. ಗುಂಡಬಾಳ, ಭಾಸ್ಕೇರಿ ನದಿಗಳು ತುಂಬಿ ಹರಿಯುತ್ತಿವೆ. ಕಳೆದ ವಾರಕ್ಕೆ ಹೋಲಿಸಿದರೆ ಮಳೆ ಪ್ರಮಾಣ ಇಳಿಮುಖವಾಗಿದೆ.
ಸೋಮವಾರ ಬೆಳಗ್ಗೆ 8ರಿಂದ ನಂತರದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಭಾಗಗಳಲ್ಲಿ ಉಂಟಾದ ಮಳೆ ಪ್ರಮಾಣ ಹೀಗಿದೆ.
ಅಂಕೋಲಾದಲ್ಲಿ 27.6 ಮಿಮೀ ಭಟ್ಕಳ 54.8 ಮಿಮೀ, ಹಳಿಯಾಳ 7.2 ಮಿಮೀ, ಹೊನ್ನಾವರ 40 ಮಿಮೀ, ಕಾರವಾರ 9.8 ಮಿಮೀ, ಕುಮಟಾ 25.4 ಮಿಮೀ, ಮುಂಡಗೋಡ 10.2 ಮಿಮೀ, ಸಿದ್ದಾಪುರ 44.2 ಮಿಮೀ, ಶಿರಸಿ 12 ಮಿಮೀ, ಜೋಯಿಡಾ 31 ಮಿಮೀ, ಯಲ್ಲಾಪುರ 32 ಮಿಮೀ ಮಳೆಯಾಗಿದೆ.
Advertisement