ಕಾರವಾರ: ಜಿಲ್ಲೆಯಾದ್ಯಂತ ಕೆಲವು ವಾರಗಳಿಂದ ಮುಂಗಾರು ಮಳೆ ಚೆನ್ನಾಗಿ ಆಗುತ್ತಿರುವಂತೆ ಕೃಷಿ ಚಟುವಟಿಕೆಗೆ ವೇಗ ದೊರೆತಿದೆ. ಹಲವು ತಾಲೂಕುಗಳಲ್ಲಿ ಬಿತ್ತನೆ ಕಾರ್ಯ ನಿಗದಿತ ಗುರಿಗಿಂತ ಬಹಳ ಹಿಂದಿದ್ದು, ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಇದುವರೆಗೆ 69 ಪ್ರತಿಶತ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಕರಾವಳಿ ಜಿಲ್ಲೆಗಳಲ್ಲಿ ಬಹುತೇಕ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಒಂದು ವಾರದಲ್ಲಿ ಶೇ. 100ರಷ್ಟು ಬಿತ್ತನೆಯಾಗಲಿದೆ. ಜೊಯಿಡಾದಲ್ಲಿ ಬಿತ್ತನೆ ಕಾರ್ಯ ಸಾಂಪ್ರದಾಯಿಕವಾಗಿ ವಿಳಂಬವಾಗಿ ನಡೆಯುತ್ತಿದ್ದು, ತಿಂಗಳ ಅಂತ್ಯದ ಒಳಗೆ ಜಿಲ್ಲೆಯಲ್ಲಿ ಬಿತ್ತನೆ ಗುರಿಯನ್ನು ಸಾಧಿಸುವ ವಿಶ್ವಾಸವಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ತಿಳಿಸಿದ್ದಾರೆ.
ಹಳಿಯಾಳ ತಾಲೂಕಿನಲ್ಲಿ ಶೇ. 101, ಮುಂಡಗೋಡಿನಲ್ಲಿ ಶೇ. 90, ಕುಮಟಾದಲ್ಲಿ ಶೇ. 80, ಅಂಕೋಲಾದನಲ್ಲಿ ಶೇ. 71, ಭಟ್ಕಳದಲ್ಲಿ ಶೇ. 76, ಹೊನ್ನಾವರದಲ್ಲಿ ಶೇ. 74, ಕಾರವಾರದಲ್ಲಿ ಶೇ. 60ರಷ್ಟು ಬಿತ್ತನೆ ಗುರಿಯನ್ನು ಸಾಧಿಸಲಾಗಿದೆ. ಇನ್ನುಳಿದಂತೆ ಜೊಯಿಡಾ ಶೇ. 11.65, ಯಲ್ಲಾಪುರ ಶೇ. 28, ಶಿರಸಿ ಶೇ. 47.63, ಸಿದ್ಧಾಪುರ ಶೇ. 18.42 ಬಿತ್ತನೆ ಗುರಿಯನ್ನು ಇದುವರೆಗೆ ಸಾಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿ 67905 ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ 43442 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕೂರಿಗೆ ಬಿತ್ತನೆಯಲ್ಲಿ ಅಧಿಕ ಇಳುವರಿ 17225 ಹೆಕ್ಟೇರ್ ಗುರಿಯಿದ್ದು, 16780 ಹೆ. ಬಿತ್ತನೆಯಾಗಿದೆ. ಸ್ಥಳೀಯ ಬತ್ತ 11265 ಹೆ. ಗುರಿಯಿದ್ದು, 11306 ಹೆ. ಬಿತ್ತನೆಯಾಗಿದೆ. ನಾಟಿ ಬಿತ್ತನೆಯಲ್ಲಿ ಅಧಿಕ ಇಳುವರಿ 27365ಹೆ. ಗುರಿಯಿದ್ದು 12499 ಹೆ. ಬಿತ್ತನೆಯಾಗಿದೆ. ಸ್ಥಳೀಯ ಬತ್ತ 12050 ಹೆ. ಗುರಿಯಿದ್ದು 2704 ಹೆ. ಬಿತ್ತನೆ ಪೂರ್ಣಗೊಂಡಿದೆ ಎಂದು ಅವರು ಹೇಳಿದ್ದಾರೆ.
ಇನ್ನುಳಿದಂತೆ ಮುಸುಕಿನ ಜೋಳ 5820 ಹೆ. ಗುರಿಯಿದ್ದು 5990 ಹೆ. ಬಿತ್ತನೆ ಮಾಡಲಾಗಿದೆ. ಕಬ್ಬು (ಬಿತ್ತನೆ) 2397 ಹೆ. ಗುರಿಯಿದ್ದು 1912 ಹೆ., ಕಬ್ಬು (ಕೂಳೆ) 2863 ಹೆ. ಗುರಿ ಹಾಗೂ 3392 ಹೆ. ಬಿತ್ತನೆಯಾಗಿದೆ. ಸೋಯಾಬಿನ್ 2 ಸಾವಿರ ಹೆ. ಗುರಿಯಿದ್ದು 1720 ಹೆ. ಬಿತ್ತನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಚುರುಕುಗೊಂಡ ಮಳೆ: ಜೂನ್ ತಿಂಗಳಲ್ಲಿ ಕೆಲ ತಾಲೂಕುಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿ ಆತಂಕ ಮೂಡಿಸಿದ್ದರೂ, ಆ ಬಳಿಕ ಮುಂಗಾರು ಚೇತರಿಸಿದೆ. ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ ವಾಡಿಕೆ ಮಳೆ ಪ್ರಮಾಣ 2444 ಮಿಮಿ ಆಗಿದ್ದು, ಈ ವರ್ಷ 1720 ಮಿಮಿ ಮಳೆ ದಾಖಲಾಗಿದೆ. ಈ ಬಾರಿ ವಾಡಿಕೆಗಿಂತ 724 ಮಿಮಿ ಕಡಿಮೆ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿತ್ತು.
Advertisement