ವಸಂತಕುಮಾರ್ ಕತಗಾಲ
ಕನ್ನಡಪ್ರಭ ವಾರ್ತೆ, ಕಾರವಾರ, ಆ. 5
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಶಿಶು ಮರಣದ ಪ್ರಮಾಣ ಹೆಚ್ಚು. ಆಧುನಿಕ ವೈದ್ಯಕೀಯ ಸೌಲಭ್ಯಗಳಿಂದ ವಂಚಿತವಾದ ಇಲ್ಲಿ ಶೇ. 20.83ರಷ್ಟು ಶಿಶುಗಳು ಸಾವಿಗೀಡಾಗುತ್ತಿವೆ. ಸಿದ್ದಾಪುರದಲ್ಲಿ ಶಿಶು ಮರಣ ಪ್ರಮಾಣ ಅತಿ ಕಡಿಮೆ ಅಂದರೆ ಶೇ. 4.41ರಷ್ಟಿದೆ. ಜಿಲ್ಲೆಯ ಆರೋಗ್ಯ ಸ್ಥಿತಿ ಸುಧಾರಿಸುವುದೇ ಇಲ್ಲ.
ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ತಾಲೂಕು ಜೋಯಿಡಾ. ಅಲ್ಲಿನ್ನೂ ವಿದ್ಯುತ್, ರಸ್ತೆ, ಸೇತುವೆ, ಕುಡಿಯುವ ನೀರು, ಶಾಲೆ... ಹೀಗೆ ಆಧುನಿಕ ಸೌಲಭ್ಯಗಳನ್ನು ಕಾಣದ ಸಾಕಷ್ಟು ಹಳ್ಳಿಗಳಿವೆ. ಅದರಲ್ಲೂ ಗಡಿ ಪ್ರದೇಶ ಸಂಪೂರ್ಣವಾಗಿ ಸೌಲಭ್ಯಗಳಿಂದ ವಂಚಿತವಾಗಿಯೇ ಇದೆ. ಆಸ್ಪತ್ರೆಗೆ ಹೋಗಬೇಕೆಂದರೆ 10-20 ಕಿ.ಮೀ. ನಡೆಯಬೇಕು. ಕಂಬಳಿಯಲ್ಲಿ ರೋಗಿಗಳನ್ನು, ಗರ್ಭಿಣಿಯರನ್ನು ಹೊತ್ತು ತರಬೇಕು. ಅದೃಷ್ಟ ಗಟ್ಟಿ ಇದ್ದರೆ ಮಾತ್ರ ಬದುಕಲು ಸಾಧ್ಯ.
ಆರೋಗ್ಯದ ಅರಿವು ಅಗತ್ಯ: ಜೋಯಿಡಾದ ಗ್ರಾಮಾಂತರ ಪ್ರದೇಶದ ಜನತೆಯಲ್ಲಿ ಆರೋಗ್ಯದ ಬಗ್ಗೆ ಅರಿವನ್ನು ಹೆಚ್ಚಿಸಬೇಕಾಗಿದೆ. ಜತೆಗೆ ವೈದ್ಯಕೀಯ ಸೌಲಭ್ಯ ಗ್ರಾಮಾಂತರ ಪ್ರದೇಶಕ್ಕೂ ತಲುಪುವ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.
2012ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ ಶಿಶು ಮರಣದ ಪ್ರಮಾಣ ಎಲ್ಲೆಲ್ಲಿ ಎಷ್ಟೆಷ್ಟು ಎನ್ನುವುದು ಖಚಿತವಾಗಿದ್ದು, ಶಿಶು ಮರಣದ ಗಂಭೀರ ಸಮಸ್ಯೆ ನಿವಾರಣೆಗೆ ಆರೋಗ್ಯ ಇಲಾಖೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. 2012ರಲ್ಲಿ ನಡೆಸಿದ ಸಮೀಕ್ಷೆಯ ವಿವರ ಹೀಗಿದೆ.
ಜೋಯಿಡಾದ ನಂತರ ಶಿರಸಿಯಲ್ಲಿ ಶಿಶು ಮರಣದ ಪ್ರಮಾಣ ಹೆಚ್ಚು (ಶೇ. 18.96). ಹೆರಿಗೆ ಸಮಯದಲ್ಲಿ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಅಂಕೋಲಾ ತಾಲೂಕಿನಲ್ಲಿ ಶಿಶು ಮರಣದ ಪ್ರಮಾಣ ಶೇ. 18.09ರಷ್ಟಿದೆ. ಯಲ್ಲಾಪುರದಲ್ಲಿ ಶಿಶು ಮರಣದ ಪ್ರಮಾಣ ಶೇ. 14.39, ಮುಂಡಗೋಡದಲ್ಲಿ ಶೇ. 11.82, ಹೊನ್ನಾವರದಲ್ಲಿ ಶೇ. 8.97, ಭಟ್ಕಳದಲ್ಲಿ ಶೇ. 7.2, ಹಳಿಯಾಳದಲ್ಲಿ ಶೇ. 6.80, ಕಾರವಾರದಲ್ಲಿ ಶೇ. 5.36, ಕುಮಟಾದಲ್ಲಿ ಶೇ. 4.94ರಷ್ಟಿದೆ. ಜಿಲ್ಲೆಯಲ್ಲಿ ಜನನಿ ಸುರಕ್ಷಾ ಯೋಜನೆಯಡಿ 7342 ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. 7301 ಮಹಿಳೆಯರು ಮಡಿಲು ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಆಧುನಿಕ ಯುಗದಲ್ಲೂ ಶಿಶು ಮರಣದ ಪ್ರಮಾಣ ಉಳಿದ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಉತ್ತರ ಕನ್ನಡದಲ್ಲಿ ಹೆಚ್ಚಿರುವುದು ಕಳವಳಕಾರಿ ಸಂಗತಿಯಾಗಿದೆ. ಆರೋಗ್ಯ ಇಲಾಖೆ ಶಿಶು ಮರಣದ ಪ್ರಮಾಣ ತಗ್ಗಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಜಿಲ್ಲೆಯ ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ 24್ಢ7 ಸೇವೆಯನ್ನು ಪರಿಚಯಿಸಿತಾದರೂ ತಿಂಗಳಿಗೆ 5 ಹೆರಿಗೆಗಳು ಆಗುತ್ತಿಲ್ಲ ಎಂಬ ನೆಪವೊಡ್ಡಿ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ. ಇದೂ ಶಿಶು ಮರಣದ ಪ್ರಮಾಣ ಹೆಚ್ಚಲು ಕಾರಣವಾಗಿದೆ.
Advertisement