ಕನ್ನಡಪ್ರಭ ವಾರ್ತೆ, ಹೊನ್ನಾವರ, ಆ. 6
ಬೆಣಚು ಕಲ್ಲು-ಕಲ್ಲುಸಕ್ಕರೆ ನೋಡಲು ಒಂದೇ ರೀತಿ. ಬಣ್ಣದಲ್ಲಿ ವ್ಯತ್ಯಾಸವಿಲ್ಲ. ವ್ಯತ್ಯಾಸವಿರುವುದು ರಸದಲ್ಲಿ. ಸಾಮಾನ್ಯ ಮನುಷ್ಯ - ಮಹಾಪುರುಷ ನೋಡಲು ಒಂದೇ. ಆದರೆ ಮಹಾಪುರುಷರಲ್ಲಿ ಕರಗುವ ಶಕ್ತಿಯಿದೆ. ಯಾರು ಕರಗಬಲ್ಲರೋ ಅವರೇ ಮಹಾತ್ಮರು. ಕಲ್ಲುಸಕ್ಕರೆ ಬಾಯಲ್ಲಿಟ್ಟರೆ ಅದು ಕರಗಿ ಅದ್ವೈತವಾಗುತ್ತದೆ. ಸಂತರಲ್ಲಿ ಅಂತಹ ಸವಿ ಇದೆ ಎಂದು ರಾಘವೇಶ್ವರ ಶ್ರೀಗಳು ನುಡಿದರು.
ಜಯಚಾತುರ್ಮಾಸ್ಯದ ಇಪ್ಪತ್ತಾರನೇ ದಿನದ ಸಭೆಗೆ ಭಜಗೋವಿಂದಂ ಪ್ರವಚನ ಅನುಗ್ರಹಿಸಿದ ಶ್ರೀಗಳು ಯಾವ ದಿನವನ್ನು ನಾವು ಸಾರ್ಥಕವಾಗಿ ಕಳೆದಿದ್ದೇವೋ ಅದು ಕಳೆದದ್ದಲ್ಲ ಗಳಿಸಿದ್ದು ಎಂದು ಭಾವಿಸಬೇಕು. ಗುಡುಗು-ಸಿಡಿಲು, ಮಳೆ-ಮಿಂಚು ಎಲ್ಲವೂ ಆಕಾಶದಲ್ಲೇ ಆದರೂ ಅದಕ್ಕೆ ಏನೂ ಆಗುವುದಿಲ್ಲ. ನಾವೂ ಹಾಗೆಯೇ ಇರಬೇಕು. ಜ್ಞಾನವಿಲ್ಲದೇ ಮುಕ್ತಿ ಇಲ್ಲ - ಗುರುವಿಲ್ಲದೇ ಜ್ಞಾನವಿಲ್ಲ ಪ್ರಾಪಂಚಿಕ ಸುಖದ ಹುಚ್ಚನ್ನು ಬೆಳೆಸಿಕೊಳ್ಳದೇ ಪರಮಾತ್ಮನ ಹುಚ್ಚನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
ಮಗುವಿಗೆ ಗುಮ್ಮನನ್ನು ತೋರಿಸಬೇಡಿ ಅಮ್ಮನನ್ನು ತೋರಿಸಿ ಎಂಬ ಸಂದೇಶ ನೀಡಿದರು. ಸಿದ್ದಾಪುರ ಮಂಡಲದ ಬಾನ್ಕುಳಿ, ಹಾರ್ಸಿಕಟ್ಟಾ ತಾಳಗುಪ್ಪಾ-ಇಡವಾಣಿ ವಲಯಗಳು ಸರ್ವಸೇವೆ ನಡೆಸಿದವು. ಖಾರ್ವಿ ಸಮಾಜದವರು ಹೊರೆಗಾಣಿಕೆಯೊಂದಿಗೆ ವಿಶೇಷ ಸೇವೆ ಸಲ್ಲಿಸಿದರು.
ಕೃತಿ ಲೋಕಾರ್ಪಣೆ: ಶ್ರೀಸುರೇಶ್ವರಾಚಾರ್ಯ ಕೃತಿಯನ್ನು ಶ್ರೀಗಳವರು ಲೋಕಾರ್ಫಣೆಗೊಳಿಸಿದರು. ಲೇಖಕ ಎಸ್.ಜಿ. ಭಟ್ಟ, ಕಬ್ಬಿನಗದ್ದೆ ಲೇಖಕರ ನುಡಿಗಳನ್ನಾಡಿದರು. ಅಪ್ಸರಕೊಂಡ ವಲಯದ ಸುಬ್ರಾಯ ರಾಮಚಂದ್ರ ಹೆಗಡೆ ಪ್ರಾಯೋಜಕತ್ವ ವಹಿಸಿದ್ದರು. ಸಿದ್ದಾಪುರದ ಲಲಿತಾ ಭಟ್ಟ ಬರೆದ ಶ್ರೀಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳು ಕೃತಿಯನ್ನು ಖಾರ್ವಿ ಸಮಾಜದ ಮುಖಂಡ ಚಂದ್ರು ಖಾರ್ವಿ ಬಿಡುಗಡೆಗೊಳಿಸಿದರು.
ರವೀಂದ್ರ ಭಟ್ಟ ಸೂರಿ ಕೃತಿ ಹಾಗೂ ಲೇಖಕರನ್ನು ಪರಿಚಯಿಸಿದರು. ಸಿದ್ದಾಪುರ ಮಂಡಲದ ಉಸ್ತುವಾರಿ ಸುಬ್ರಾಯ ಎಸ್. ಭಟ್ಟ, ಮಂಡಲಾಧ್ಯಕ್ಷ ನರೇಂದ್ರ ಹೆಗಡೆ, ಕಾರ್ಯದರ್ಶಿ ಜಿ.ಎಸ್. ಭಟ್ಟ, ಮಹಾ ಮಂಡಲ ಪ್ರಸಾರ ಪ್ರಧಾನ ರಮೇಶ ಹೆಗಡೆ ಗುಂಡೂಮನೆ, ಮೂಲಮಠ ಕಾರ್ಯದರ್ಶಿ ಭಾಸ್ಕರ ಹೆಗಡೆ ವಲಯಗಳ ಸಭೆ ನಡೆಸಿದರು.
ಶ್ರೀಸುರೇಶ್ವರಾಚಾರ್ಯ ಕೃತಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು.
Advertisement