ಹೊಸಪೇಟೆ: ಚಿತ್ತವಾಡ್ಗಿ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಕಾರ್ಮಿಕರ ಕೆಲಸದ ಹಾಜರಾತಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಕಾರ್ಮಿಕರ ಹಕ್ಕುಗಳನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿ ಬುಧವಾರ ಐ.ಎಸ್.ಆರ್. ವರ್ಕರ್ಸ್ ಯೂನಿಯನ್ ನಗರದ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ನೀಡಿದರು.
ಸಿಐಟಿಯು ಮುಖಂಡ ಎ. ಕರುಣಾನಿಧಿ ಮಾತನಾಡಿ, ಕಳೆದ ತಿಂಗಳು 26ರಂದು ರೈತರಿಗೆ ಬಾಕಿ ರು. 9.08 ಕೋಟಿ ಪಾವತಿಸಿಲ್ಲ ಎಂದು ಸಕ್ಕರೆ ಕಾರ್ಖಾನೆಗೆ ಬೀಗ ಹಾಕಿ ತಾಲೂಕು ಆಡಳಿತ ಸೀಜ್ ಮಾಡಿದೆ. ಸೀಜ್ ಮಾಡುವಾಗ ವರ್ಕ್‌ಶಾಪ್ ಒಳಗಡೆ ಇರುವ ಕಾರ್ಮಿಕರ ಹಾಜರಾತಿ ತೆಗೆದುಕೊಳ್ಳುವ ಪಂಚಿಂಗ್ ಮಶಿನ್ ಸೀಜ್ ಆಗಿದೆ. ಅದರಿಂದ ಕಾರ್ಮಿಕರು ಹಾಜರಾತಿ ಹಾಕುವುದು ನಿಂತಿದೆ ಎಂದರು.
ಆಡಳಿತ ಮಂಡಳಿ ಕೆಲಸ-ಕೂಲಿ ನೀತಿ ಅನುಸರಿಸುತ್ತಿದೆ. ಕಾರ್ಮಿಕರು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಕಾರ್ಖಾನೆ ಜಪ್ತಿ, ತೆರವುಗೊಳಿಸುವವರೆಗೆ ಕಾರ್ಮಿಕರ ಹಾಜರಾತಿ ಕಲ್ಪಿಸಲು ಪಂಚಿಂಗ್ ಮಶಿನ್ ಜಪ್ತಿಯಿಂದ ವಿನಾಯಿತಿ ನೀಡಬೇಕು. ಕಾರ್ಮಿಕರಿಗೆ ಸಂಬಳ, ಹಾಜರಾತಿ, ಸೇವಾ ನಿಯಮ ಮತ್ತು ಭದ್ರತೆ ಮತ್ತಿತರ ಕಾರ್ಮಿಕರ ಹಕ್ಕುಗಳು ಮತ್ತು ಸೌಲಭ್ಯ ಜಪ್ತಿ ಆದೇಶದಿಂದ ತೊಂದರೆಯಾಗಬಾರದು ಎಂದು ಆದೇಶಿಸಬೇಕು. ಆಡಳಿತ ಮಂಡಳಿಗೆ ಈ ಕುರಿತು ಸೂಕ್ತ ನಿರ್ದೇಶನ ನೀಡಬೇಕು. ರೈತರಿಗೆ ನೀಡುವ ಬಾಕಿ ಹಣದ ವಿವಾದವನ್ನು ಬಗೆಹರಿಸಿ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು. ಕಬ್ಬು ಅರೆಯುವ ಕೆಲಸ ಮುಂದೂಡಬಾರದು ಎಂದರು.
ಯೂನಿಯನ್ ಗೌರವಾಧ್ಯಕ್ಷ ಎಂ.ಎ. ವಲಿಸಾಬ್ (ಹಕೀಮ್ ಸಾಬ್) ಪ್ರಧಾನ ಕಾರ್ಯದರ್ಶಿ ಶಿವಾನಂದ ಸ್ವಾಮಿ, ಯೂನಿಯನ್ ಕಾರ್ಯದರ್ಶಿ ಯಾಸೀನ್ ಖಾನ್, ಯೂನಿಯನ್ ಮುಖಂಡರಾದ ಸಂಪತ್ ಕುಮಾರ್, ಎಚ್. ಬಸವರಾಜ್, ಎಂ.ಆರ್.ಎಂ. ಮಹ್ಮದ್, ಪಿ. ಜಾನ್, ವಿಜಯ್, ಇಕ್ಲಾಬ್, ವಿಜಯಲಕ್ಷ್ಮೀ ಇತರರು ಭಾಗವಹಿಸಿದ್ದರು.
Advertisement