ಭಟ್ಕಳ: ತಾಲೂಕಿನಲ್ಲಿ ಬತ್ತದ ಸಸಿಗಳು ನಾಟಿ ಕಾರ್ಯ ಮುಗಿಯುವ ಹಂತದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಭೂಮಿ ಬಾಯ್ಬಿಟ್ಟು, ರೈತ ಮಳೆಗಾಗಿ ಮುಗಿಲಿನತ್ತ ಮುಖ ಮಾಡಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ. ಭಟ್ಕಳ ತಾಲೂಕಿನ ಬೈಲೂರು, ಮಾವಳ್ಳಿ, ಕಾಯ್ಕಿಣಿ, ಬೆಂಗ್ರೆ, ಕಟಗಾರಕೊಪ್ಪ, ಹೆಬಳೆ, ಶಿರಾಲಿಗಳಲ್ಲಿ ಬತ್ತದ ಸಸಿಗಳು ಬಲಿತು ಭೂಮಿ ಹಸನಗೊಂಡು ನೆಟ್ಟಿ ಕಾರ್ಯಕ್ಕೆ ಅಣಿಗೊಂಡಿದ್ದರೂ ಮಳೆ ಕೈಕೊಟ್ಟಿದ್ದರಿಂದ ಕೃಷಿ ಕಾರ್ಯ ಸ್ಥಗಿತಗೊಂಡಿದೆ. ಕಳೆದ ವರ್ಷ ಜುಲೈ ಮೊದಲ ವಾರದಂದೆ ರೈತ ನಾಟಿ ಕೆಲಸ ಮುಗಿಸಿ ಹಸನ್ಮುಖಿಯಾಗಿ ಬೇರೆ ಕೆಲಸ ಕಾರ್ಯಗಳಲ್ಲಿ ಮಗ್ನನಾಗಿದ್ದ. ಈ ವರ್ಷ ಆರಂಭದಲ್ಲೇ ಮಳೆ ಕೈಕೊಟ್ಟಿದ್ದರಿಂದ ಭವಿಷ್ಯದ ಬಗ್ಗೆ ಚಿಂತಾಕ್ರಾಂತನಾಗಿದ್ದಾನೆ. ಬಿತ್ತನೆಗಾಗಿ ರೈತ ಈಗಾಗಲೇ ಹಣ ಖರ್ಚು ಮಾಡಿದ್ದು, ಮತ್ತೆ ಪುನಃ ಬಿತ್ತನೆಗೆ ಬೀಜವೂ ಇಲ್ಲದೆ ಹಣವೂ ಇಲ್ಲದೆ ಇಕ್ಕಟ್ಟಿನ ಸ್ಥಿತಿಯಲ್ಲಿದ್ದಾನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಾಯಕ್ಕೆ ಧಾವಿಸಲಿ ಎನ್ನುವುದು ರೈತರ ಆಗ್ರಹವಾಗಿದೆ.