ಅಂಕೋಲಾ: ನಮ್ಮ ಪರಿಸರವು ತ್ಯಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಲಿನಗೊಳ್ಳುತ್ತಿದ್ದು, ಬೆಟ್ಟ, ಗುಡ್ಡಗಳು ಬೋಳಾಗುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನು ಕೆಲವೇ ವರ್ಷಗಳಲ್ಲಿ ಭೂಮಿ ಸರ್ವನಾಶವಾದರೂ ಅಚ್ಚರಿಪಡಬೇಕಾಗಿಲ್ಲ ಎಂದು ಸಾಹಿತಿ ವಿ.ಜೆ. ನಾಯಕ ಆತಂಕ ವ್ಯಕ್ತಪಡಿಸಿದರು.
ಅವರು ಪಟ್ಟಣದ ಕನ್ನಡ ಭವನದಲ್ಲಿ ಕರ್ನಾಟಕ ಸಂಘ ಅಂಕೋಲಾ, ಜನ ಶಿಕ್ಷಣ ಸಂಸ್ಥಾನ ಕಾರವಾರ, ಹಸಿರು ಹೊನ್ನು ಸಂಸ್ಥೆ ಕಾರವಾರ ಮತ್ತು ಆಶ್ರಯದಲ್ಲಿ ಆಯೋಜಿಸಲಾದ ಪರಿಸರ ಜಾಗೃತಿ ಹಾಗೂ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನ ಶಿಕ್ಷಣ ಸಂಸ್ಥಾನದ ಅಧ್ಯಕ್ಷ ಮಂಜುನಾಥ ಪವಾರ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ವಿಷ್ಣು ನಾಯ್ಕ ವೃಕ್ಷಾರೋಪಣ ನೆರವೇರಿಸಿದರು.
ಶಾಂತಾರಾಮ ನಾಯಕ ಹಿಚ್ಕಡ, ಪ್ರೊ. ಮೋಹನ ಹಬ್ಬು ಮಾತನಾಡಿದರು.
ಕರ್ನಾಟಕ ಸಂಘದ ಅಧ್ಯಕ್ಷ ಜಗದೀಶ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕ ರಮೇಶ ಭಂಡಾರಿ ಸ್ವಾಗತಿಸಿದರು. ಕಾರ್ಯದರ್ಶಿ ಉಲ್ಲಾಸ ಹುದ್ದಾರ ನಿರ್ವಹಿಸಿದರು. ಕೋಶಾಧ್ಯಕ್ಷ ಮಹೇಶ ನಾಯಕ ವಂದಿಸಿದರು.