ಹೊನ್ನಾವರ: ತಾಲೂಕಿನ ಕೆಕ್ಕಾರಿನ ಶ್ರೀರಘೂತ್ತಮ ಮಠದಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಜಯ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲಿದ್ದು, ಜುಲೈ 12ರಿಂದ ಸೆಪ್ಟೆಂಬರ್ 9ರ ವರೆಗೆ ನಡೆಯುವ ಈ ಪೂಣ್ಯ ಪರ್ವದಲ್ಲಿ ಪಾಲ್ಗೊಳ್ಳಲಿರುವ ಲಕ್ಷಾಂತರ ಭಕ್ತರಿಗೆ ನಿತ್ಯ ಆದರ-ಆತಿಥ್ಯದ ಸಂಬಂಧ ಗೇರುಸೊಪ್ಪಾ ವಲಯದಲ್ಲಿ ವಲಯಾಧ್ಯಕ್ಷ ಪಿ.ಎಸ್. ಭಟ್ಟ ಉಪ್ಪೋಣಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಹೊನ್ನಾವರ ಹವ್ಯಕ ಮಂಡಲ ಉಪಾಧ್ಯಕ್ಷ ರಾಜಾರಾಂ ಹೆಬ್ಬಾರ, ಕಾರ್ಯದರ್ಶಿ ಸತೀಶ್ ಭಟ್, ಸೇವಾ ಪ್ರಧಾನ ಚಂದ್ರಶೇಖರ ಹೆಗಡೆ, ಪ್ರಸಾರ ಪ್ರಧಾನ ಎಸ್.ಜಿ. ಭಟ್ಟ ಹಾಗೂ ಮಂಡಲ ವಲಯ ಪದಾಧಿಕಾರಿಗಳು ಪಾಲ್ಗೊಂಡು ಶ್ರೀಗುರು ಸೇವೆಯಲ್ಲಿ ಪ್ರತಿಯೊಬ್ಬರೂ ಕಾರ್ಯಕರ್ತರಾಗಿ ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತು ಸಮಾಲೋಚಿಸಲಾಯಿತು.
ಶ್ರೀಗಳ ಪುರಪ್ರವೇಶ, ವಿದ್ಯಾಮಂದಿರದ ಲೋಕಾರ್ಪಣಾ ಕಾರ್ಯಕ್ರಮಗಳನ್ನು ಅಭೂತಪೂರ್ವವಾಗಿ ನಡೆಸಲು ಪೂರ್ವಸಿದ್ಧತೆ ಸಂಬಂಧ ನಿರ್ಣಯಿಸಲಾಯಿತು. ಶ್ರೀಗುರುಗಳ ಆಶೀರ್ವದಿಸಿ ಅನುಗ್ರಹಿಸುವ ಭಜಗೋವಿಂದಂ ಹಾಗೂ ಶ್ರೀ ರಾಮಕಥಾದ ಪೂರ್ಣ ಪ್ರಯೋಜನ ಪಡೆಯುವಂತೆ ಮನೆ ಮನೆ ಪ್ರಚಾರಕ್ಕೆ ನಿರ್ಣಯಿಸಲಾಯಿತು. ಚಾತುರ್ಮಾಸ್ಯದ ಸಂದರ್ಭದಲ್ಲಿ ಸಕಲ ಸದ್ಭಕ್ತರೂ ಆಗಮಿಸಲು, ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಕರೆಕೊಡಲಾಯಿತು. ಗುರುವಂದನೆಯಿಂದ ಆರಂಭಗೊಂಡು ಶಂಖನಾಧದೊಂದಿಗೆ ಸಂಪನ್ನಗೊಂಡಿತು. ಇದೇ ವೇಳೆ, ಶ್ರೀ ಚನ್ನಕೇಶವ ದೇವಸ್ಥಾನದಲ್ಲಿ ಕರ್ಕಿ ವಲಯದ ಪೂರ್ವಭಾವಿ ಸಭೆ ಜರುಗಿತು. ಹೊನ್ನಾವರ ಮಂಡಲ ಅಧ್ಯಕ್ಷ ಜಿ.ಜಿ. ಭಟ್ ಚೌಕಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ರಾಜಾರಾಂ ಹೆಬ್ಬಾರ, ಕಾರ್ಯದರ್ಶಿ ಸತೀಶ ಭಟ್, ಪ್ರಸಾರ ಪ್ರಧಾನ ಎಸ್.ಜಿ. ಭಟ್ ಮಾತನಾಡಿದರು.
ವಲಯಾಧ್ಯಕ್ಷ ಗೋವಿಂದ ಜೋಶಿ ಸ್ವಾಗತಿಸಿದರು. ಎಂ.ಪಿ. ಭಾಗ್ವತ್, ಪಿ.ಟಿ. ಭಟ್ ಉಪಸ್ಥಿತರಿದ್ದರು. ಶಂಖನಾದ ಗುರುವಂದನೆಯೊಂದಿಗೆ ಆರಂಭವಾದ ಸಭೆ ಶಾಂತಿಮಂತ್ರದೊಂದಿಗೆ ಸಂಪನ್ನಗೊಂಡಿತು.
ಅಪ್ಸರಕೊಂಡದಲ್ಲೂ ಹವ್ಯಕ ವಲಯ ಸಭೆ ನಡೆಯಿತು. ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಜಿ.ಜಿ. ಭಟ್ ಚಾತುರ್ಮಾಸ್ಯದ ಅಗತ್ಯ ಸಿದ್ಧತೆಗಳ ಮಾಹಿತಿ ನೀಡಿದರು. ವಿದ್ಯಾರ್ಥಿ ಶಿಕ್ಷಕ, ನೌಕರ, ಮಾತೆಯರು ನಿರ್ವಹಿಸುವ ಸಾಂಪ್ರದಾಯಿಕ ಆಹಾರ-ಆಹಾರೋತ್ಸವದ ಕುರಿತು ತಿಳಿಸಿದರು. ಕಾರ್ಯದರ್ಶಿ ಸತೀಶ್ ಭಟ್ ಮಾತನಾಡಿದರು.
ವಲಯಾಧ್ಯಕ್ಷ ಎಸ್.ಎಸ್. ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಲಂಬೋದರ ಹೆಗಡೆ ವಂದಿಸಿದರು.