ಶಿರಸಿ: ಕಾನೂನು ಉತ್ಸವದ ಅಂಗವಾಗಿ ಜರುಗುತ್ತಿರುವ ಕಾನೂನು ವಸ್ತು ಪ್ರದರ್ಶನವು ವಿವಿಧ ಇಲಾಖೆ ಸಹಯೋಗದೊಂದಿಗೆ ಸಂಘಟಿಸಲಾಗಿದ್ದು, ಜು. 6ರ ಸಂಜೆ 5 ಗಂಟೆವರೆಗೆ ಮಾತ್ರ ವೀಕ್ಷಣೆಗೆ ಅವಕಾಶವಿರುತ್ತದೆ.
ವಸ್ತು ಪ್ರದರ್ಶನದಲ್ಲಿ ಸಂವಿಧಾನಕ್ಕೆ ಸಂಬಂಧಪಟ್ಟಂತೆ ವಿಶೇಷ ಅಂಶಗಳ ಜತೆ ತಿದ್ದುಪಡಿ ಉಚ್ಚ ಮತ್ತು ಸವೋಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರುಗಳ ಪಟ್ಟಿ, ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಕಾನೂನು ಮಹಾವಿದ್ಯಾಲಯ, ಉತ್ತರ ಕನ್ನಡದಿಂದ ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಯ್ಕೆ ಆಗಿರುವ ಗಣ್ಯರ ಚಿತ್ರ, ಮಹಿಳೆಯರ ಮೇಲೆ ದೌರ್ಜನ್ಯವಾಗುತ್ತಿರುವ ಕ್ರಿಮಿನಲ್ ಪ್ರಕರಣಗಳ ವಿವರ, ಶಿಕ್ಷಣ ಹಕ್ಕು, ರಸ್ತೆ ಸಾರಿಗೆ ನಿಯಮ, ಪೊಲೀಸ್ ಕಾಯ್ದೆಗೆ ಸಂಬಂಧಿಸಿ, ಅಬಕಾರಿ, ಅರಣ್ಯ ಇಲಾಖೆಯವರಿಂದ ರಚಿತವಾದ ಚಿತ್ರಣ ವಸ್ತು ಪ್ರದರ್ಶನದಲ್ಲಿ ಗಮನ ಸೆಳೆಯುತ್ತದೆ.
ಅರಣ್ಯ ಮಹಾವಿದ್ಯಾಲಯವು ಜೀವವೈವಿಧ್ಯ ಕಾಯ್ದೆಯ ಅಂಶ, ಪರಿಸರ ಅಸಮತೋಲನೆಯಿಂದ ಉಂಟು ಮಾಡುವ ಸ್ತಬ್ಧಚಿತ್ರ ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆರೋಗ್ಯ ಇಲಾಖೆಯು ಮುತುವರ್ಜಿಯಿಂದ ತಯಾರಿಸಿದ ವಸ್ತು ಪ್ರದರ್ಶನ ಜನಸಾಮಾನ್ಯರ ಗಮನ ಸೆಳೆದಿದೆ. ಕಂದಾಯ ತೂಕ ಮತ್ತು ಅಳತೆ, ಕಾರ್ಮಿಕ ಇಲಾಖೆಯ ಕಾನೂನಾತ್ಮಕ ಅಂಶಗಳನ್ನು ವೀಕ್ಷಕರಿಗೆ ಪರಿಚಯಿಸಿದೆ. ತಾಲೂಕು ಪಂಚಾಯಿತಿಯಿಂದ ತಯಾರಿಸಲ್ಪಟ್ಟ ಗ್ರಾಮ ಪಂಚಾಯಿತಿ ವ್ಯವಸ್ಥೆಗೆ ಬಿಂಬಿಸುವ ಸಂಗತಿ ಸಾರ್ವಜನಿಕರ ಗಮನ ಸೆಳೆಯುತ್ತದೆ. ಸಮಾಜ ಕಲ್ಯಾಣ, ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂತಾದ ಇಲಾಖೆಗಳು ಕಾನೂನಿನ ಅರಿವು ಜಾಗೃತಿ ಮೂಡಿಸಿವೆ. ಆಕರ್ಷಕವಾಗಿರುವ ಕಾನೂನಿನ ಅರಿವು ಮೂಡಿಸಬೇಕೆಂಬ ಘೋಷಣೆಯ ಬ್ಯಾನರ್ಗಳು ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತಿದೆ.
ವಿಶ್ವದಲ್ಲಿಯೇ ದೀರ್ಘ ಕಾಲದ ಕಾನೂನು ಕಾರ್ಯಕ್ರಮವೆಂದು ಖ್ಯಾತಿ ಪಡೆದುಕೊಂಡಂಥ ಕಾನೂನು ಉತ್ಸವದಲ್ಲಿ ಏರ್ಪಡಿಸಲಾದ ಕಾನೂನು ವಸ್ತು ಪ್ರದರ್ಶನ ವೀಕ್ಷಿಸುವಂತೆ ವಕೀಲರ ಸಂಘದ ಹಾಗೂ ಸ್ಪಂದನ ಸಂಸ್ಥೆಯ ಅಧ್ಯಕ್ಷ ಎ. ರವೀಂದ್ರ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.