ಡೆಂಘೀ: ಮುನ್ನೆಚ್ಚರಿಕೆ ವಹಿಸಿ

Updated on: 

ಕಾರವಾರ: ಕಳೆದ ವರ್ಷ ಜಿಲ್ಲೆಯಲ್ಲಿ 183 ಡೆಂಘೀ ಪ್ರಕರಣಗಳು ವರದಿಯಾಗಿದ್ದು, ಡೆಂಘೀ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಮೇಶ್ ರಾವ್, ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ವರ್ಷ ಇಬ್ಬರು ಡೆಂಘೀ ಪ್ರಕರಣದಲ್ಲಿ ಬಲಿಯಾಗಿದ್ದು, ಈ ವರ್ಷ ಇದುವರೆಗೆ ಕೇವಲ ಐದು ಪ್ರಕರಣಗಳು ವರದಿಯಾಗಿವೆ. ಆದರೆ ಮುಂದಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ. ಈ ರೋಗವು ಸೋಂಕು ಹೊಂದಿದ ಈಡೀಸ್ ಇಜಿಪ್ಟೈ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇವು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆ ನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಈ ರೋಗದ ಪ್ರಮುಖ ಲಕ್ಷಣ. ತೀವ್ರ ತೆರನಾದ ಡೆಂಘೀ ಕಾಯಿಲೆಯಾದ ಡೆಂಘೀ ಹಿಮೋರೀಜಿಕ್ ಸಿಂಡ್ರೋಮ್‌ನಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತ ಸ್ರಾವದ ಗುರುತುಗಳು  ಕಾಣಿಸಿಕೊಳ್ಳುತ್ತವೆ.
ಈ ರೋಗಕ್ಕೆ ನಿರ್ದಿಷ್ಟವಾದ ಔಷಧ ಅಥವಾ ಲಸಿಕೆ ಇಲ್ಲ. ರೋಗದ ಲಕ್ಷಣಗಳಿಗೆ ಅನುಸಾರವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆಯ ವೈದ್ಯರಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಅವರು ಹೇಳಿದ್ದಾರೆ.
 ಈಡೀಸ್ ಇಜಿಪ್ಟೈ-ಟೈಗರ್ ಸೊಳ್ಳೆ ಮೈಮೇಲೆ ಹುಲಿಯಲ್ಲಿರುವಂತೆ ಪಟ್ಟಿಗಳಿರುವ ಕಾರಣ ಟೈಗರ್ ಸೊಳ್ಳೆ ಎಂದೂ ಕರೆಯುತ್ತಾರೆ. ಸೋಂಕಿತ ಹೆಣ್ಣು ಸೊಳ್ಳೆಯಿಂದ ಅದರ ಮೊಟ್ಟೆಗಳಿಗೂ ಸೋಂಕು ಪ್ರಸಾರ ಆಗುತ್ತದೆ. Ú ಅವುಗಳ ಲಾರ್ವಾ ನಿರ್ಮೂಲನೆ ಮಾಡುವುದರಿಂದ ಈ ರೋಗದ ನಿಯಂತ್ರಣ ಸಾಧ್ಯ.
ಡೆಂಘೀ ವಿರೋಧಿ ಮಾಸಾಚರಣೆ
ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ಈಡೀಸ್, ಅನಾಫಿಲೀಸ್ ಸೊಳ್ಳೆಗಳು ಉತ್ಪತ್ತಿ ಆಗಿ ರೋಗ ವಾಹಕ ಆಶ್ರಿತ ರೋಗಗಳಾದ ಡೆಂಘೀ, ಚಿಕೂನ್‌ಗುನ್ಯಾ ಹಾಗೂ ಮಲೇರಿಯಾ ರೋಗಗಳು ಬರುವ ಸಾಧ್ಯತೆಯಿದೆ. ಜುಲೈ ತಿಂಗಳನ್ನು ಡೆಂಘೀ ವಿರೋಧಿ ಮಾಸವನ್ನಾಗಿ ಆಚರಿಸಲಾಗುತ್ತಿದೆ. ಎಲ್ಲ ಗ್ರಾಮಗಳಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜ್ವರ ಸಮೀಕ್ಷೆ, ಲಾರ್ವಾ ಸಮೀಕ್ಷೆ ನಡೆಸುವುದು, ಲಾರ್ವಾ ಉತ್ಪತ್ತಿ ತಾಣಗಳನ್ನು ಗುರುತಿಸಿ ನಾಶಪಡಿಸುವುದು, ಘನ ತ್ಯಾಜ್ಯ ನಿರ್ವಹಣೆ ಮಾಡುವುದು ಹಾಗೂ ಡೆಂಘೀ ಕಾಯಿಲೆ ಹಾಗೂ ಅದರ ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. ಈ ವರ್ಷ ಡೆಂಘೀ ಜ್ವರವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಾ. ಕ್ಯಾಪ್ಟನ್ ರಮೇಶ್ ರಾವ್ ಮೊ. 9448842797ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com