ಮಯೂರ ಹೆಗಡೆ
ಕನ್ನಡಪ್ರಭ ವಾರ್ತೆ, ಕಾರವಾರ, ಜು. 19
ಈ ಬಾರಿ ಬಿಸಿಲು ಮಳೆ ಜೊತೆಯಾಗಿವೆ. ಹೀಗಾಗಿ, ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಿದೆ. ಘಟ್ಟದ ಮೇಲ್ಬಾಗದಲ್ಲಿ ಕಂಡು ಬರುತ್ತಿದ್ದ ಕೆಲ ಸಾಂಕ್ರಾಮಿಕ ರೋಗಗಳು ಈ ಬಾರಿ ಘಟ್ಟದ ಕೆಳಗೆ ಜಾರಿವೆ. ವಿವಿಧ ಉದ್ಯೋಗ ಮುಗಿಸಿ ಹೊರಗಡೆಯಿಂದ ಜಿಲ್ಲೆಗೆ ಆಗಮಿಸಿದವರು ರೋಗ ಹೊತ್ತು ತರುತ್ತಿದ್ದಾರೆ.
ಕಳೆದ ಮಳೆಗಾಲದಂತೆ ಈ ಬಾರಿ ನಿರಂತರವಾಗಿ ಮಳೆ ಸುರಿಯುತ್ತಿಲ್ಲ. ಹೀಗಾಗಿ, ಸಾಂಕ್ರಾಮಿಕ ರೋಗಗಳ ಹರಡುವಿಕೆ ಹೆಚ್ಚುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ರೋಗಗಳು ಹೆಚ್ಚಾಗಿ ಪತ್ತೆಯಾಗಿಲ್ಲ. ಆದರೆ, ಇದೇ ರೀತಿ ಮಳೆ ಬಿಟ್ಟು ಬಿಟ್ಟು ಸುರಿದರೆ ವಾತಾವರಣದಲ್ಲಿ ಏರುಪೇರಾಗುವುದು ಹಾಗೂ ಹಾಗೂ ಎಲ್ಲೆಡೆ ನೀರು ಶೇಖರಣೆಯಾಗಿ ಸೊಳ್ಳೆಗಳ ಸಂತತಿ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ, ಮಳೆಗಾಲದ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಘೀ, ಚಿಕೂನ್ಗುನ್ಯಾ, ವಿಷಮಶೀತ ಜ್ವರ, ಕರಳು ಬೇನೆ ಮುಂತಾದ ರೋಗಗಳು ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳಬಹುದು.
ದಾಖಲಾದ ಪ್ರಕರಣಗಳು: ಜಿಲ್ಲೆಯಲ್ಲಿ ಇಲ್ಲಿ ವರೆಗೆ ಒಟ್ಟು 75 ಮಲೇರಿಯಾ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಹೊನ್ನಾವರದಲ್ಲಿ ಅತೀ ಹೆಚ್ಚು 23, ಕಾರವಾರದಲ್ಲಿ 14, ಕುಮಟಾದಲ್ಲಿ 8, ಭಟ್ಕಳ, ಮುಂಡಗೋಡ ಮತ್ತು ಶಿರಸಿಯಲ್ಲಿ 7, ಅಂಕೋಲಾ ಮತ್ತು ಹಳಿಯಾಳದಲ್ಲಿ 4 ಯಲ್ಲಾಪುರದಲ್ಲಿ 1 ಮಲೇರಿಯಾ ಪ್ರಕರಣ ದಾಖಲಾಗಿದೆ. ಕಳೆದ ವರ್ಷ ಒಟ್ಟು 253 ಮಲೇರಿಯಾ ದೃಢಪಟ್ಟು 62 ಪ್ರಕರಣಗಳು ಮುಂಡಗೋಡದಲ್ಲಿ ದಾಖಲಾಗಿದ್ದವು. ಡೆಂಘೀ ಕೇವಲ 8 ಜನರಲ್ಲಿ ದೃಢಪಟ್ಟಿದ್ದು, ಕುಮಟಾ, ಹೊನ್ನಾವರ ಭಟ್ಕಳಗಳಲ್ಲಿ ತಲಾ ಎರಡು ಅಂಕೋಲಾ ಮತ್ತು ಸಿದ್ಧಾಪುರದಲ್ಲಿ ಒಬ್ಬರಲ್ಲಿ ಡೆಂಘೀ ಪತ್ತೆಯಾಗಿದೆ. ಕಳೆದ ಬಾರಿ 502 ಡೆಂಘೀ ಪ್ರಕರಣಗಳು ಪತ್ತೆಯಾಗಿ ಇಬ್ಬರು ಮೃತಪಟ್ಟಿದ್ದರು. ಕಳೆದ ವರ್ಷ ಜಿಲ್ಲಾದ್ಯಂತ ತಲೆನೋವಾಗಿ ಪರಿಣಮಿಸಿದ್ದ ಚಿಕೂನ್ಗುನ್ಯಾ ಇದುವರೆಗೆ ಎಲ್ಲಿಯೂ ದಾಖಲಾಗಿಲ್ಲ. ಜೂನ್ ತಿಂಗಳಿನಲ್ಲಿ 35 ಕರಳು ಬೇನೆ, 36 ಅರಿಶಿನ ಕಾಮಾಲೆ, 308 ವಿಷಮ ಶೀತ ಜ್ವರ ಪ್ರಕರಣಗಳು ಪತ್ತೆಯಾಗಿವೆ.
ಕಳೆದ ವರ್ಷ ಘಟ್ಟದ ಮೇಲ್ಭಾಗದಲ್ಲಿ ಕಂಡುಬಂದ ಮಲೇರಿಯಾ, ಚಿಕೂನ್ಗುನ್ಯಾ ಈ ಬಾರಿ ಘಟ್ಟದ ಕೆಳಗೆ ಮುಖ ಮಾಡಿವೆ. ಈ ಬಾರಿ ಮೂಲತಃ ಜಿಲ್ಲೆಯಲ್ಲಿ ಇದುವರೆಗೆ ಯಾವ ರೋಗಗಳು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದರೆ ಮೀನುಗಾರಿಕೆಗಾಗಿ ದಕ್ಷಿಣ ಕನ್ನಡ, ಮಲ್ಪೆ ಹಾಗೂ ಇತರ ಉದ್ಯೋಗದ ನಿಮಿತ್ತ ಬೆಂಗಳೂರು ಹಾಗೂ ಇತರೆಡೆಗಳಲ್ಲಿ ನೆಲೆಸಿ ಜಿಲ್ಲೆಗೆ ವಾಪಸ್ಸಾದವರಲ್ಲಿ ಕೆಲ ರೋಗಗಳು ಕಾಣಿಸಿಕೊಂಡಿವೆ. ಇದೇ ವಾತಾವರಣ ಮುಂದುವರಿದರೆ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ ಎಂದು ವೈದ್ಯಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆ ರೋಗಗಳ ನಿಯತ್ರಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಹೋಗಿ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ನೀರು ಒಂದೇ ಕಡೆ ಶೇಖರಣೆ ಆಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಲಾಗುತ್ತಿದೆ.
ಒಂದು ಕಡೆ ಮಳೆಯ ಆಟದಿಂದ ಕೃಷಿಗೆ ಹಿನ್ನಡೆಯಾಗುತ್ತಿದೆ. ಇನ್ನೊಂದು ಕಡೆ ರೋಗಗಳ ಹರಡುವಿಕೆ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಜನತೆ ಎಚ್ಚರ ವಹಿಸಿ ಒಂದು ಕಡೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕಿದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ನಿರ್ಲಕ್ಷ್ಯಿಸದೇ ವೈದ್ಯರಲ್ಲಿಗೆ ಹೋಗಿ ಪರೀಕ್ಷಿಸಿಕೊಳ್ಳಬೇಕು.
ಶಿರವಾಡದಲ್ಲಿ ಹೆಚ್ಚು
ಕಾರವಾರದ ಶಿರವಾಡದಲ್ಲಿ ಹೆಚ್ಚಾಗಿ ಹೊರಗಿನ ಜನರೇ ತುಂಬಿರುವುದರಿಂದ ಮತ್ತು ಆಗಾಗ ಉದ್ಯೋಗಕ್ಕಾಗಿ ಹೊರಗಡೆ ಹೋಗಿ ಬರುವುದರಿಂದ ಇಲ್ಲಿ ರೋಗಗಳ ಪ್ರಮಾಣ ಹೆಚ್ಚು. ಕಳೆದ ಬಾರಿ ಮಲೇರಿಯಾ ಇಲ್ಲಿ ಹೆಚ್ಚಾಗಿ ಕಂಡು ಬಂದಿತ್ತು. ಇನ್ನು ಕೋಣೆನಾಲಾ ತೆರೆದಿರುವುದರಿಂದ ಪ್ರತಿ ವರ್ಷ ಈ ಪ್ರದೇಶಗಳಲ್ಲಿ ಹೆಚ್ಚಿನ ರೋಗಗಳು ಕಂಡು ಬರುತ್ತವೆ. ಮುಂದಿನ ದಿನಗಳಲ್ಲಿ ಮಳೆ ನಿರಂತರವಾಗಿ ಸುರಿದರೆ ತಕ್ಕ ಮಟ್ಟಿಗೆ ರೋಗಗಳು ಹರಡುವಿಕೆ ನಿಯಂತ್ರಣಕ್ಕೆ ಬರಬಹುದು. ಇಲ್ಲದಿದ್ದಲ್ಲಿ ಘಟ್ಟದ ಕೆಳ ಭಾಗದಲ್ಲಿ ಅಂದರೆ ಕರಾವಳಿ ಭಾಗಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ.