ಹೆಸರೆಂಬ ಕೆಸರೊಳು ಸಿಲುಕದಿರಿ

Updated on: 

ಹೊನ್ನಾವರ: ಲೌಕಿಕವಾದ ಹೆಸರಿನಲ್ಲಿ ಏನಿಲ್ಲ, ಅಲೌಕಿಕವಾದ ಹೆಸರಲ್ಲಿ ಎಲ್ಲವೂ ಇದೆ. ಹೆಸರೆಂಬ ಕೆಸರೊಳು ಸಿಲುಕಬೇಡಿ ಎಂಬ ಸಂದೇಶವನ್ನು ಶಿಷ್ಯ ಸಮೂಹಕ್ಕೆ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ನೀಡಿದರು.
ತಾಲೂಕಿನ ಕೆಕ್ಕಾರಿನ ಶ್ರೀ ರಘೂತ್ತಮ ಮಠದ ಆವರಣದಲ್ಲಿ ಜಯ ಚಾತುರ್ಮಾಸ್ಯದ ನಿಮಿತ್ತ ನಡೆಯುತ್ತಿರುವ ರಾಮಕಥೆಯ ಎರಡನೇ ದಿನದ ಪ್ರವಚನ ನೀಡಿದ ರಾಘವೇಶ್ವರ ಶ್ರೀಗಳು ರಾಮ ಜನ್ಮದ ಸಂಭ್ರಮದೊಂದಿಗೆ, ಅದರ ಮನೋಜ್ಞ ವಿವರಣೆಯೊಂದಿಗೆ ಎರಡನೇ ದಿನದ ಕಾರ್ಯಕ್ರಮ ಮುಂದುವರಿಸಿದರು.
ಯಾವ ಹೆಸರನ್ನೂ, ಹೊಗಳಿಕೆಯನ್ನೂ ಬಯಸುವುದಿಲ್ಲ ಎಂಬುದನ್ನು ಶ್ರೀಗಳು ಹಾಸ್ಯಮಯ ಉದಾಹರಣೆಗಳ ಮೂಲಕ ಹೆಸರಿಗೂ ವಾಸ್ತವಕ್ಕೂ ಇರುವ ವ್ಯತ್ಯಾಸ ವಿವರಿಸಿದರು.
ಬಾಯಿಮುಚ್ಚಿ 'ರಾ' ಎನ್ನಲಾಗುವುದಿಲ್ಲ. ಬಾಯಿ ತೆರೆದು 'ಮಾ' ಎನ್ನಲಾಗುವುದಿಲ್ಲ. ಇದಕ್ಕೆ ಅರ್ಥವಿದೆ. ಬಾಯಿ ತೆರೆದು 'ರಾ' ಎಂದಾಗ ಒಳಗಿನ ಪಾಪಗಳೆಲ್ಲ ಹೊರಗೆ ಹೋಗುತ್ತವೆ. 'ಮ' ಎಂದು ಬಾಯಿಮುಚ್ಚಿ ಹೇಳುವುದರಿಂದ ಅವು ಮತ್ತೆ ಒಳಬರುವುದಿಲ್ಲ 'ರಾಮ' ನಾಮದಲ್ಲಿ ಅಂತಹ ಮಹತ್ವವಿದೆ ಎಂದು ಶ್ರೀಗಳು ನುಡಿದರು. ಭದ್ರಾಚಲ ರಾಮದಾಸರ ಹಾಗೂ ಸಂತ ಕಬೀರರ, ತ್ಯಾಗರಾಜರ ಜೀವನದ ಘಟನೆಗಳ ಮೂಲಕ ರಾಮನಾಮದ ಚಮತ್ಕಾರ ವಿವರಿಸಿದ ಶ್ರೀಗಳು, ರಾಮನಾಮದಿಂದ ಆಪತ್ತು ಪರಿಹಾರ ಎಂಬುದಕ್ಕೆ ಸಂತ ಕಬೀರರು ಉದಾಹರಣೆ, ಪತಿತ ಪಾವನವದು ರಾಮನಾಮ ಎಂಬುದಕ್ಕೆ ವಾಲ್ಮೀಕಿ ಉದಾಹರಣೆ, ರಾಮನಾಮ ಸಂಪದ್ಭರಿತ ಎಂಬುದಕ್ಕೆ ಭದ್ರಾಚಲ ರಾಮದಾಸರು ಹಾಗೂ ತ್ಯಾಗರಾಜರು ಉದಾಹರಣೆ ಎಂದು ಮನೋಜ್ಞವಾಗಿ ವಿವರಿಸಿದರು. ಕೊನೆಯಲ್ಲಿ ತ್ಯಾಗರಾಜರ ಕುರಿತಾದ ರೂಪಕ ಜನಮನ ಸೆಳೆಯಿತು. ಕೋಲ್ಕತಾದ ಸತ್ಯಜಿತ್ ರಾಮಧುನ್ ಮೂಲಕ ತುಂಬಿದ ಸಭೆಯಲ್ಲಿ ಮಿಂಚು ಹರಿಸಿದರು. ಬೆಂಗಳೂರಿನ ಜಯಲಕ್ಷ್ಮೀ ಬಳಗದವರು ಸುಶ್ರಾವ್ಯ ಗಾಯನದ ಮೂಲಕ ಗಮನ ಸೆಳೆದರು. ರಾಮಕಥಾ ಕವಿ ಗಜಾನನ ಶರ್ಮಾ ರಚಿಸಿದ ಕವಿತೆಗಳು, ಹಿನ್ನೆಲೆ ಸಂಗೀತ, ನೀರ್ನಳ್ಳಿ ಗಣಪತಿ ಅವರ ಆಶುಚಿತ್ರಕ್ಕೆ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾದವು. ಸತ್ಯನಾರಾಯಣ ಶರ್ಮಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಎಂ.ಕೆ. ಹೆಗಡೆ ದಂಪತಿ ಪ್ರಾಯೋಜಕತ್ವ ವಹಿಸಿದ್ದರು. ಮಂಜುನಾಥ ಭಟ್ಟ ಸುವರ್ಣಗದ್ದೆ, ಮುರಳೀಧರ ಪ್ರಭು, ಶ್ರೀಕಾಂತ ಪಂಡಿತ ಪುಷ್ಪಾರ್ಚನೆಗೈದರು. ಪ್ರತಿದಿನದಂತೆ ಕೃತಿ ಲೋಕಾರ್ಪಣೆ ನಡೆಯಿತು. ಜಿ.ಎಸ್. ಹೆಗಡೆ ದಂಪತಿ ಪ್ರಾಯೋಜಕತ್ವ ವಹಿಸಿದ್ದರು.
ರಕ್ತದಾನ ಶಿಬಿರ: ಕೆಕ್ಕಾರು ವಲಯ ಆಶ್ರಯದಲ್ಲಿ ಕುಮಟಾ ಮಂಡಲದಿಂದ ರಕ್ತದಾನ ಶಿಬಿರ ಜರುಗಿತು. ಆಂಜನೇಯನ ಸನ್ನಿಧಿಯಲ್ಲಿ ಮಾವಿನಹಣ್ಣಿನ ಕಣಜ ಸೇವೆ, ರಾಮತಾರಕಹವನ, ಅನ್ನಪೂರ್ಣೇಶ್ವರಿಯಾಗ ಸಂಪನ್ನಗೊಂಡವು. ರಾಮಕಥಾ ನಿರ್ವಹಣಾ ಸಮಿತಿಯವರ ಅಚ್ಚುಕಟ್ಟಾದ ವ್ಯವಸ್ಥೆ ಗಮನ ಸೆಳೆಯಿತು. ರಾಮಕಥಾ ನಿರ್ವಹಣಾ ಸಮಿತಿ ಮಾಧ್ಯಮ ಸಂಚಾಲಕ ರವೀಂದ್ರ ಭಟ್ಟ ಸೂರಿ ಸಹಕರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com