ಕನ್ನಡಪ್ರಭ ವಾರ್ತೆ, ಹೊನ್ನಾವರ, ಜು. 24
ನಾಲಿಗೆ ಸರಿಯಿದ್ದರೆ ಲೋಕವೇ ಸರಿ ಇರುತ್ತದೆ. ಕತ್ತಿ ಬಳಸುವಾಗ ಎಚ್ಚರವಿರಲಿ. ರಾಮಕಥೆ ಎಂಬ ಗಂಗೆಯಲ್ಲಿ ಮಿಂದು ಪಾವನರಾಗಲು ಈ ಗಂಗೆ ನಿಮ್ಮಲ್ಲಿಗೇ ಬಂದಿದೆ. ಶ್ರವಣ ಮಾಡಿ ಪಾವನರಾಗಿ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ನುಡಿದರು.
ಜಯ ಚಾತುರ್ಮಾಸ್ಯದ ನಿಮಿತ್ತ ಕೆಕ್ಕಾರು ಶ್ರೀ ರಘೂತ್ತಮ ಮಠದಲ್ಲಿ ನಡೆಯುತ್ತಿರುವ ರಾಮಕಥೆಯನ್ನು ಅನುಗ್ರಹಿಸಿ ಪ್ರವಚನ ನೀಡಿದ ಅವರು, ಜೀವನದಲ್ಲಿ ಮುಂದೆ ಸಾಗಬೇಕಿದ್ದರೆ ಪರೀಕ್ಷೆ ಎದುರಿಸಬೇಕು. ಪರೀಕ್ಷೆ ಎದುರಿಸಿ ಸೋತರೂ ಅದಕ್ಕೊಂದು ಬೆಲೆ ಇದೆ. ಹೋರಾಟಕ್ಕೂ ಮೊದಲೇ ಸೋಲೊಪ್ಪಿಕೊಂಡರೆ ಅರ್ಥಹೀನ. ದಶರಥನ ಎದುರು ಅಂತಹ ಒಂದು ಪರೀಕ್ಷೆಯಿತ್ತು. ರಾಮನನ್ನು ಕೊಡು-ಮೋಹವನ್ನು ಬಿಡು ಎಂದರು ವಿಶ್ವಾಮಿತ್ರರು. ದಶರಥ ಮೊದಲು ಕೊಟ್ಟ ಮಾತಿಗೆ ವ್ಯತಿರಿಕ್ತನಾಗಿ ನಡೆದುಕೊಂಡು ರಾಮನನ್ನು ಕೊಡಲೊಪ್ಪಲಿಲ್ಲ. ಇದರ ಪರಿಣಾಮ ದಶರಥ ಪುತ್ರನಿಂದ ದೂರವಾಗಬೇಕಾಯಿತು, ಪುತ್ರನಿಲ್ಲದಾಗಲೇ ಮರಣ ಪ್ರಾಪ್ತಿಯಾಯಿತು ಎಂದು ವಿವರಿಸಿದರು.
ರಾಮಕಥೆ ಸಮಾಪ್ತಿಗೊಳಿಸಿದ ಬಳಿಕ ಶ್ರೀಗಳು ಏಕಾಂತ ಘೋಷಿಸಿರುವ ನಿರ್ಧಾರ ಬದಲಿಸುವಂತೆ ಭಕ್ತಸಮೂಹ ಭಾವುಕವಾಗಿ ಪ್ರಾರ್ಥಿಸಿತು. ತೊಡು ನಮ್ಮ ನಡುವಿರುವ ದೀಕ್ಷೆ, ತೊಡು ನಮ್ಮ ಬಿಡದಿರುವ ದೀಕ್ಷೆ, ಗುರುವೆ ಏಕಿಂತು ಏಕಾಂತ ಶಿಕ್ಷೆ ಎಂಬ ಹಾಡು ಸನ್ನಿವೇಶವನ್ನು ಇನ್ನಷ್ಟು ಗಾಢವಾಗಿಸಿತು. ಶೀಘ್ರದಲಿ ಬರುವೆ ಎಂಬ ಗುರುವಾಕ್ಯ ನೀರ್ನಳ್ಳಿ ಗಣಪತಿಯವರ ಚಿತ್ರದಲ್ಲಿ ವ್ಯಕ್ತವಾದಾಗ ಭಕ್ತರು ಸಮಾಧಾನಪಟ್ಟರು.
ಹೊನ್ನಾವರದ ಉಮೇಶ ಶಾನಭಾಗ ಲಕಡಿ ರಾಮಕಥೆಯ ಪ್ರಾಯೋಜಕತ್ವ ವಹಿಸಿದ್ದರು. ಅಲ್ಕಾ ಪಟೇಲ್, ಮೋಹನ ಭಾಸ್ಕರ ಹೆಗಡೆ, ಗಣಪತಿ ಹೆಗಡೆ, ರವಿಶಂಕರ ಭಟ್ಟ, ವಿ.ಡಿ. ಹೆಗಡೆ ಪುಷ್ಪಾರ್ಚನೆ ಗೈದರು. ಪುಣ್ಯ ಕೋಟಿ ರೂಪಕ ಗಮನ ಸೆಳೆಯಿತು. ಮನೋರಮಾ ಅವರು ಬರೆದ 'ಮಹಾಮುನಿ ಭರತ' ಕೃತಿಯನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು. ಶಿವಾನಂದ ಹೆಗಡೆ ಕಡತೋಕಾ ದಂಪತಿ ಪ್ರಾಯೋಜಕತ್ವ ವಹಿಸಿದ್ದರು. ಸ್ವರ್ಣಪೀಠಾರೂಢ ರಾಮಾದಿ ದೇವರ ಪೂಜೆ ಗೈಯುತ್ತಿರುವ ಶ್ರೀ ಸಂಸ್ಥಾನದವರ ಫೋಟೋವನ್ನು ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಬಿಡುಗಡೆಗೊಳಿಸಿದರು. ಅರವಿಂದ ಸುರತ್ಕಲ್ ಸರ್ವಸೇವೆ ನಿರ್ವಹಿಸಿದರು.
ರಾಮಕಥಾ ನಿರ್ವಹಣಾ ಸಮಿತಿಯ ಮಾಧ್ಯಮ ಸಂಚಾಲಕ ರವೀಂದ್ರ ಭಟ್ಟ ಸೂರಿ, ರಾಜಾರಾಮ ಹೆಬ್ಬಾರ, ಎಸ್.ಜಿ. ಭಟ್ಟ ಸಹಕರಿಸಿದರು. ಜಯಚಾತುರ್ಮಾಸ್ಯದ ವಿಶೇಷವಾಗಿ ಯಜುರ್ವೇದ ಕಂಠಪಾಠವುಳ್ಳ ತಮಿಳುನಾಡಿನ ಘನಪಾಠಿಗಳಿಂದ ಪಾರಾಯಣ, ರಾಮಾಯಣ ಪಾರಾಯಣ ಆಂಜನೇಯ ಸನ್ನಿಧಿಯಲ್ಲಿ ಉದ್ದಿನ ವಡೆ ಕಣಜ ಸೇವೆ, ಅಖಂಡ ಭಜನಾ ಸಪ್ತಾಹದ ಅಂಗವಾಗಿ ಭಜನೆ, ಆಹಾರೋತ್ಸವ ನೆರವೇರಿದವು.