ಶಿರಸಿ: ಅನೇಕ ಸಂದರ್ಭಗಳಲ್ಲಿ ಪುರಾಣದ ಹಿನ್ನೆಲೆಗೆ ಐತಿಹಾಸಿಕ ಸತ್ಯ ಪುಷ್ಟಿ ಕೊಡುತ್ತದೆಯಾದರೂ ಅದು ಕಡ್ಡಾಯವಲ್ಲ. ಕದಂಬರ ರಾಜಧಾನಿಯೆಂದೇ ಖ್ಯಾತವಾದ ಬನವಾಸಿಗೆ ಪೌರಾಣಿಕವಾಗಿಯೂ ಐತಿಹಾಸಿಕವಾಗಿಯೂ ಅತ್ಯಂತ ಪುರಾತನತೆ ಇದೆ. ಕ್ರಿಸ್ತ ಪೂರ್ವ 321ರಷ್ಟು ಹಿಂದೆ ಅದು ಬೌದ್ಧ ಕೇಂದ್ರವಾಗಿತ್ತು. ನಾವೆಲ್ಲರೂ ಅಭಿಮಾನ ಪಡುವ ಘನತೆ ನಮ್ಮ ಜಿಲ್ಲೆಗಿದೆ. ಅಭಿಮಾನ ಶೂನ್ಯತೆಯನ್ನು ತೊರೆದು ಅಭಿಮಾನದೊಂದಿಗೆ ನಾವು ಅಭಿವೃದ್ಧಿ ಹೊಂದಬೇಕು ಎಂದು ಜಿಲ್ಲೆಯ ಇತಿಹಾಸ ತಜ್ಞ ಲಕ್ಷ್ಮೀಶ ಹೆಗಡೆ ಸೋಂದಾ ತಿಳಿಸಿದ್ದಾರೆ.
ಅವರು ಸ್ಥಳೀಯ ರೋಟರಿ ಕ್ಲಬ್ ಆಶ್ರಯದಲ್ಲಿ 7 ವರ್ಷಗಳ ನಿರಂತರ ಶ್ರಮದಿಂದ ತಾವು ಸಿದ್ಧಪಡಿಸಿದ ಉಕ ಜಿಲ್ಲಾ ಚರಿತ್ರಾ ಅಭಿಯಾನ ಉದ್ಘಾಟನೆ ನಂತರ ಪ್ರಾತ್ಯಕ್ಷಿಕೆಯೊಂದಿಗೆ ಮಾತನಾಡಿ, ಜಿಲ್ಲೆಯ ವಿವಿಧ ಪ್ರದೇಶಗಳ ಇತಿಹಾಸ-ಸಂಸ್ಕೃತಿ ಹಾಗೂ ಪರಿಸರದ ಮೇಲೆ ಸಂಕ್ಷಿಪ್ತವಾಗಿ ಬೆಳಕು ಚೆಲ್ಲುತ್ತ ಉದ್ಘಾಟನೆಗೊಂಡ ಈ ಅಭಿಯಾನವನ್ನು ತಾವು ನಿರಂತರ ಮುಂದುವರಿಸುವುದಾಗಿಯೂ, ಆಸಕ್ತರು ಅಹ್ವಾನಿಸಿದಲ್ಲೆಲ್ಲ ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸ ನೀಡುವದಾಗಿಯೂ ತಿಳಿಸಿದರು.
ಸಂಕ್ಷಿಪ್ತ ಮಾಹಿತಿ: 1 ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ ಅಡಕೆ, ಪ್ರೇಮದ ಸವಿನೆನಪಿಗೆ ಸೋದೆಯ ಸದಾಶಿವರಾಯ ಕಟ್ಟಿಸಿದ ಶಿರಸಿಯ ಮುಸುಕಿನ ಬಾವಿ, ಬೆಳವಡಿ ಮಲ್ಲಮ್ಮನ ಕುರಿತ ವಿವರ, ಬನವಾಸಿ-ಬಿಳಗಿ-ಭುವನಗಿರಿ-ಗೇರುಸೊಪ್ಪ-ಗೋಕರ್ಣ- ದೇಶದಲ್ಲೇ ಅತ್ಯಂತ ಪುರಾತನವಾದ ಗಣಪತಿ ವಿಗ್ರಹ ಹೊಂದಿರುವ ಇಡಗುಂಜಿ-ಸಹಸ್ರಲಿಂಗ-ಮಿರ್ಜಾನ್-ಸೋಂದಾ-ಮಂಜುಗುಣಿ-ಶಿರಸಿ ಮಾರಿಕಾಂಬೆ ಮತ್ತು ಅದಕ್ಕೂ ಪುರಾತನವಾದ ರಾಯರಪೇಟೆ ದೊಡ್ಡ ಗಣಪತಿ ಸ್ಥಳಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ರೋಟರಿ ಅಧ್ಯಕ್ಷ ಅರುಣ ನಾಯಕ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಮುಖ್ಯ ಅತಿಥಿ ಲಕ್ಷ್ಮೀಶ ಅವರಿಗೆ ನೆನಪಿನ ಕಾಣಿಕೆ ನೀಡಿದರು. ರೊ. ಪಾಂಡುರಂಗ ಪೈ ಪರಿಚಯಿಸಿದರು. ಕಾರ್ಯದರ್ಶಿ ಪ್ರವೀಣ ಕಾಮತ ವಂದಿಸಿದರು. ಕೋಶಾಧ್ಯಕ್ಷ ಡಾ. ರಮೇಶ ಹೆಗಡೆ ಹಾಗೂ ವೃತ್ತಿಪರ ಸೇವಾ ನಿರ್ದೇಶಕ ಡಾ. ಶಿವರಾಮ ಕೆ.ವಿ. ವೇದಿಕೆಯಲ್ಲಿದ್ದರು.