ವಿನಯ ದಂಟಕಲ್
ಕನ್ನಡಪ್ರಭ ವಾರ್ತೆ, ಶಿರಸಿ, ಜು. 31
ಘಟ್ಟದ ಮೇಲಿನ ತಾಲೂಕುಗಳಲ್ಲಿ ಗುರುವಾರವೂ ಮಳೆ ಅಬ್ಬರ ಮುಂದುವರಿದಿದೆ. ಮಳೆಯ ಅಬ್ಬರದಿಂದಾಗಿ ಗ್ರಾಮೀಣ ಪ್ರದೇಶದ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಬ್ಬರದ ಮಳೆ ಶುಕ್ರವಾರದ ನಾಗರಪಂಚಮಿ ಕಳೆಗುಂದಿದೆ.
ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಜೋಯಿಡಾ ತಾಲೂಕಿನಲ್ಲಿಯೂ ಒಳ್ಳೆಯ ಮಳೆ ಸುರಿಯುತ್ತದೆ. ಸಾಧಾರಣ ಮಳೆಯಾಗುತ್ತಿದ್ದ ಹಳಿಯಾಳ ಹಾಗೂ ಮುಂಡಗೋಡ ತಾಲೂಕುಗಳಲ್ಲಿಯೂ ಎರಡು ದಿನಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಹಳ್ಳಕೊಳ್ಳಗಳು ಭರ್ತಿಯಾಗಿದ್ದರೆ ಜೀವನದಿಗಳಾದ ಅಘನಾಶಿನಿ, ಶಾಲ್ಮಲಾ, ವರದಾ, ಕಾಳಿ ನದಿಗಳು ಉಕ್ಕಿ ಹರಿಯಲು ಆರಂಭಿಸಿವೆ.
ಬುಧವಾರ ಸಂಜೆ ಆರಂಭಗೊಂಡ ಮಳೆ ಗುರುವಾರ ಬೆಳಗಿನ ವರೆಗೂ ಸುರಿದಿದೆ. ಗುರುವಾರ ಹಗಲಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾದಂತೆ ಕಂಡಿದ್ದರೂ ಸಂಜೆಯ ವೇಳೆಗೆ ಮತ್ತೆ ಮಳೆ ಅಬ್ಬರಿಸಲು ಆರಂಭಿಸಿತು. ವರ್ಷಧಾರೆಗೆ ಗ್ರಾಮೀಣ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಮಳೆ ವಿವರ: ಶಿರಸಿ ತಾಲೂಕಿನಲ್ಲಿ 24 ಗಂಟೆಗಳಲ್ಲಿ 135 ಮಿಮೀ ಮಳೆಯಾಗಿದ್ದು ಒಟ್ಟು 1702.5 ಮಿಮೀ ಮಳೆಯಾಗಿದೆ. ಸಿದ್ದಾಪುರ ತಾಲೂಕಿನಲ್ಲಿ 158.6 ಮಿಮೀ ಮಳೆ ಸುರಿದಿದ್ದು, 2217.8 ಮಿಮೀ ಮಳೆಯಾಗಿದೆ. ಯಲ್ಲಾಪುರ ತಾಲೂಕಿನಲ್ಲಿ 146.0 ಮಿಮೀ ಮಳೆ ಸುರಿದಿದ್ದು ಒಟ್ಟು 1592.0 ಮಿಮೀ ಮಳೆಯಾಗಿದೆ. ಕಳೆದ ವರ್ಷ 82.4 ಮಿಮೀ ಮಳೆಯಾಗಿ ಒಟ್ಟು 1837.2 ಮಿಮೀ ಮಳೆಯಾಗಿತ್ತು. ಮುಂಡಗೋಡ ತಾಲೂಕಿನಲ್ಲಿ 56.3 ಮಿಮೀ ಮಳೆಯಾಗಿದ್ದು ಒಟ್ಟು 631 ಮಿಮೀ ಮಳೆ ಸುರಿದಿದೆ.
ಮಳೆಯಿಂದಾಗಿ ಶಿರಸಿ ನಗರದಲ್ಲಿ ಬಸವೇಶ್ವರ ನಗರ ಕಾಲೋನಿಯಲ್ಲಿ ನೀರು ನಿಂತಿದೆ. ಆರ್ಟಿಒ ಕಚೇರಿಗೆ ತೆರಳುವ ರಸ್ತೆಯಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ರಸ್ತೆಯಲ್ಲಿಯೇ ಮಳೆ ನೀರು ಹರಿಯುವಂತಾಗಿದ್ದು, ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ಚರ್ಚ್ ರಸ್ತೆಯಲ್ಲಿರುವ ಮಂಜುನಾಥ ಅಂಕೋಲೇಕರ್ ಅವರಿಗೆ ಸೇರಿದ ಮನೆಯ ಗೋಡೆ ಭಾಗಶಃ ಕುಸಿದಿದೆ. ಗಣೇಶನಗರದ ಇಳಿಜಾರಿನಲ್ಲಿರುವ ಕೆಲ ಮನೆಗಳಿಗೆ ನೀರು ನುಗ್ಗಿದೆ. ನಗರದ ತಗ್ಗು ಪ್ರದೇಶವಾದ ದುಂಡಸಿನಗರದಲ್ಲಿ ನೀರು ನಿಂತಿದೆ.
ಸಿದ್ದಾಪುರ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಅಬ್ಬರಕ್ಕೆ ಅಘನಾಶಿನಿ ನದಿಯಲ್ಲಿ ಪ್ರವಾಹ ಉಂಟಾಗಿದೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನಜಾವದ ವರೆಗೂ ಸರಕುಳಿ, ಹೂಸಗದ್ದೆ ಸೇತುವೆಗಳು ನೀರಿನಲ್ಲಿ ಮುಳುಗಿದ್ದವು. ಮಾನಿಮನೆಯಲ್ಲಿ ಸೇತುವೆಯ ಮೇಲೆ ನೀರು ಹರಿದುಹೋಗಿದೆ.
ಕಾನಸೂರು-ಬಾಳೇಸರ, ಕಾನಸೂರು-ಘಟ್ಟೀಕೈ, ಕೊಳಗೀಬೀಸ್ ತಟ್ಟೀಕೈ, ಹೇರೂರು-ಗೋಳಿಮಕ್ಕಿ ಹಾಗೂ ಗೋಳಿಮಕ್ಕಿ-ಹೆಗ್ಗರಣಿ ರಸ್ತೆಯ ಮೇಲೆ ಅಘನಾಶಿನಿ ನೀರು ಹರಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ನಿಂತಿತ್ತು. ಅಘನಾಶಿನಿಯ ನೀರು ಉಕ್ಕಿ ಹರಿದ ಕಾರಣದಿಂದಾಗಿ ಹೊಸಗದ್ದೆ, ಬಾಳೂರು ಗ್ರಾಮಗಳು ಕೆಲಕಾಲ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡಿದ್ದವು. ಕಾನಸೂರು-ಬಾಳೇಸರ ರಸ್ತೆ ಮಾರ್ಗಮಧ್ಯದ ಕೋಡ್ಸರದ ಬಳಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಈ ಮಾರ್ಗದಲ್ಲಿ ರಸ್ತೆ ಸಂಚಾರ ನಿಲುಗಡೆಯಾಗುವ ಭೀತಿ ಇದೆ.
ಭಾರಿ ಮಳೆಗೆ ಅಡ್ಕಳ್ಳಿ-ಕೋಡ್ಸರ ಸಂಪರ್ಕ ರಸ್ತೆಯಲ್ಲಿ ಹಲವೆಡೆಗಳಲ್ಲಿ ರಸ್ತೆ ಕೊಚ್ಚಿ ಹೋಗಿದೆ. ಹೊಸದಾಗಿ ಮಾಡಿದ್ದ ರಸ್ತೆ ಮಾರ್ಗದಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ರಸ್ತೆ ಪಕ್ಕದ ಭೂಕುಸಿತದ ಪರಿಣಾಮ ಮಾಡಿದ್ದ ರಸ್ತೆ ಕೊಚ್ಚಿ ಹೋಗಿದ್ದು, ಸಂಚಾರ ವ್ಯವಸ್ಥೆ ನಿಲುಗಡೆಯ ಭೀತಿ ಎದುರಿಸುತ್ತಿದೆ.
ಕಾನಸೂರು ಪಂಚಾಯಿತಿ ವ್ಯಾಪ್ತಿಯ ದಂಟಕಲ್ನ ನರಸಿಂಹ ವಿ. ಹೆಗಡೆ ಹಾಗೂ ಮಧುಕೇಶ್ವರ ಹೆಗಡೆ ಅವರ ತೋಟದಲ್ಲಿ ಹಳ್ಳ ಉಕ್ಕಿ ಹರಿದ ಪರಿಣಾಮ ಹಾನಿಯಾಗಿದೆ. ಇದರಿಂದಾಗಿ ತೋಟ ಕೊಚ್ಚಿ ಹೋಗಿದ್ದು ಕನಿಷ್ಠ 50 ಅಡಕೆ ಮರಗಳಿಗೆ ಹಾನಿಯಾಗಿದೆ. ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಯಲ್ಲಾಪುರ ತಾಲೂಕಿನ ಕೆಲ ಗ್ರಾಮೀಣ ಪ್ರದೇಶದಲ್ಲಿ ಭೂ ಕುಸಿತ ಉಂಟಾದ ಬಗ್ಗೆ ವರದಿಯಾಗಿದೆ. ಮಳೆಯ ಅಬ್ಬರಕ್ಕೆ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ಕಡಿತಗೊಂಡಿದೆ. ಬೇಡ್ತಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಯಲ್ಲಾಪುರ ಪಟ್ಟಣದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಮುಂಡಗೋಡ ತಾಲೂಕಿನಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ತಾಲೂಕಿನ ಎಲ್ಲ ಜಲಾಶಯಗಳೂ ಭರ್ತಿಯಾಗಿವೆ. ಮಳೆಯಿಂದಾಗಿ ಕೃಷಿ ಕಾರ್ಯ ಚುರುಕಾಗಿದೆ. ಜೋಯಿಡಾ ತಾಲೂಕಿನಲ್ಲಿಯೂ ಒಳ್ಳೆಯ ಮಳೆಯಾಗುತ್ತಿದೆ. ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಹಳಿಯಾಳ ತಾಲೂಕಿನಲ್ಲಿಯೂ ಮಳೆಯಾಗುತ್ತಿದೆ. ಮಳೆಯಿಲ್ಲದೇ ಸೊರಗಿದ್ದ ಈ ತಾಲೂಕಿನಲ್ಲಿ ಮಳೆಯಾಗುತ್ತಿರುವ ಕಾರಣ ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ.