ಕನ್ನಡ ಸಂಸ್ಕೃತಿ ಇಲಾಖೆ ಈಚೆಗೆ ವ್ಯವಸ್ಥೆ ಮಾಡಿದ್ದ ವಚನಕಾರ ಸಿದ್ಧರಾಮನ ಬಗೆಗಿನ 'ವಿಚಾರ ಸಂಕಿರಣ'ದ ಉದ್ಘಾಟನಾ ಭಾಷಣದಲ್ಲಿ ನಾನು ಆಡಿದ ಮುಖ್ಯ ಸಂಗತಿಯನ್ನು ತಮ್ಮ ಪತ್ರಿಕೆ ವರದಿ ಮಾಡಿದೆ (ಕ.ಪ್ರ. 15.1.14). ಅಂದು ನಾನು ಸಾರ್ವಜನಿಕರ ಗಮನಕ್ಕೆ ತಂದ ಒಂದು ಅಪೂರ್ವ ಅಂಶವು ತಮ್ಮ ವರದಿಯಲ್ಲಿ ಬಿಟ್ಟುಹೋಗಿದೆ. ಸಿದ್ಧರಾಮನ ಅಂಕಿತ "ಕಪಿಲ ಸಿದ್ಧ ಮಲ್ಲಿಕಾರ್ಜುನ"ದಲ್ಲಿಯ "ಕಪಿಲ" ಎಂದರೆ ಏನು ಎಂಬುದು ಒಂದು ಮುಖ್ಯ ಸಂಗತಿ. "ಕಪಿಲ" ಎಂದರೆ ಕಂದು ಬಣ್ಣದ ಗೋವು. (ಅದು ಕನ್ನಡದಲ್ಲಿ 'ಕಪಿಲೆ' ಎಂದೂ ರೂಪಾಂತರಗೊಂಡಿದೆ). ಸಿದ್ಧರಾಮನು ಶ್ರೀಶೈಲದಿಂದ ಚಿಕ್ಕ ಮಲ್ಲಿಕಾರ್ಜುನ ಲಿಂಗವನ್ನು ತನ್ನ ಊರು ಸೊನ್ನಲಿಗೆಗೆ (ಸೊಲ್ಲಾಪುರ) ತಂದು ಅದಕ್ಕಾಗಿ ಒಂದು ದೇವಾಲಯ ನಿರ್ಮಿಸಿ ಅದರ ಗರ್ಭಗುಡಿಯಲ್ಲಿ ಆ ಲಿಂಗವನ್ನು ಪ್ರತಿಷ್ಠಾಪಿಸುತ್ತಾನೆ. ಆ ಲಿಂಗದ ಪ್ರಾಣ ಪ್ರತಿಷ್ಠಾಪನೆಗೆ ಯಾವ ಪುರೋಹಿತರನ್ನೂ ಕರೆಯದೆ ಒಂದು ವೃಷಭವು ಗರ್ಭಗುಡಿಗೆ ಪ್ರವೇಶಿಸುವಂತೆ ಮಾಡಿ ಅದರ ಬಲಗಾಲನ್ನು ಲಿಂಗದ ತಲೆಯ ಮೇಲೆ ಇಡುವಂತೆ ಮಾಡಿ ಅದರ ಪ್ರಾಣ ಪ್ರತಿಷ್ಠಾಪನೆ ಮಾಡಿಸಿದ-ಇದು ರಾಘವಾಂಕನ ಸಿದ್ಧರಾಮನ ಚರಿತ್ರೆಯಲ್ಲಿ ದಾಖಲಾಗಿದೆ. 'ಕಪಿಲೆ' ಎಂದರೆ ಮೂಲಾರ್ಥ ಹಸು ಎಂದಿದ್ದರೂ ಕನ್ನಡದಲ್ಲಿ ಹಸು ಅರ್ಥದ ಜೊತೆ ವೃಷಭ (ಎತ್ತು) ಎಂಬರ್ಥವನ್ನೂ ಪಡೆದುಕೊಂಡಿದೆ. ವಚನಕಾರರು ತಮ್ಮ ಇಷ್ಟದ ದೈವದ ಅಥವಾ ಮನೆ ದೇವರ ಹೆಸರುಗಳನ್ನು ಅಂಕಿತಗಳಾಗಿ ಬಳಸಿಕೊಂಡಿರುವಂತೆ (ಉದಾ; 'ಕೂಡಲಸಂಗಮ ದೇವ') ಸಿದ್ಧರಾಮನೂ ತನ್ನ ದೈವದ ಹೆಸರನ್ನೇ ಬಳಸಿಕೊಂಡಿದ್ದಾನೆ. "ಕಪಿಲಸಿದ್ಧ ಮಲ್ಲಿಕಾರ್ಜುನ" ಎಂದರೆ ವೃಷಭದಿಂದ ಸ್ಥಾಪಿತವಾದ ಮಲ್ಲಿಕಾರ್ಜುನ ಲಿಂಗ ಎಂಬ ಅರ್ಥ ಧ್ವನಿತವಾಗುತ್ತದೆ. ಕಪಿಲೆ ಅಥವಾ ಕವಿಲೆ ಪದಕ್ಕೆ ವೃಷಭ ಎಂಬರ್ಥವಿರುವುದು ಕನ್ನಡದ "ಕವಲೆತ್ತು" ಎಂಬ ಪದದಿಂದಲೂ ಸೂಚಿತವಾಗುತ್ತದೆ. 'ಕವಲೆತ್ತ'ನ್ನು 'ಕಪಿಲೆ ಬಸವ' ಎಂದೂ ಕರೆಯುತ್ತಾರೆ. ಗೋ ಅಥವಾ ವೃಷಭಕ್ಕೆ ಭಾರತೀಯ ಪರಂಪರೆಯಲ್ಲಿ ಪವಿತ್ರ ಸ್ಥಾನವಿರುವುದು ಎಲ್ಲರಿಗೂ ಗೊತ್ತಿದೆ. ನೂತನ ಗೃಹ ಪ್ರವೇಶದ ದಿನ ಮೊತ್ತ ಮೊದಲು ಮನೆಗೆ ಹಸುವಿನ ಪ್ರವೇಶ ಆದ ಮೇಲೆಯೇ ಉಳಿದವರಿಗೆ ಪ್ರವೇಶ. ನಾನು ಹಲವೆಡೆ ನೋಡಿರುವಂತೆ ಗತ ದೇವಾಲಯಗಳ ಮೇಲೆ ಲಿಂಗದ ಮೇಲೆ ಬಲಗಾಲೂರಿ ಕುಳಿತಿರುವ ನಂದಿಯ ಶಿಲ್ಪಗಳಿವೆ. ವೃಷಭದಿಂದ ಶಿವಲಿಂಗದ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದ್ದ ಪದ್ಧತಿಯ ಸ್ಪಷ್ಟ ಸೂಚನೆ ಅದು. ಪವಿತ್ರ ಕ್ಷೇತ್ರಗಳಿಂದ ಲಿಂಗವನ್ನು ಖರೀದಿಸಿ ಹೊತ್ತು ತಂದು ಅದನ್ನು ತಮ್ಮ ಊರಲ್ಲಿ ಭಕ್ತರು ಅದೇ ದೈವದ ಹೆಸರಲ್ಲಿ ಸ್ಥಾಪಿಸುತ್ತಿದ್ದ ಪದ್ಧತಿ ಹಿಂದೆ ಇತ್ತು. ಇದರಿಂದ ತಮ್ಮ ಮನೆದೇವರ ದರ್ಶನವನ್ನು ದಿನವೂ ಪಡೆಯುವಂತಾಗುತ್ತಿತ್ತು.
- ಡಾ. ಎಂ. ಚಿದಾನಂದಮೂರ್ತಿ, ಸಂಶೋಧಕರು, ಬೆಂಗಳೂರು
ಬನವಾಸಿಯ ನೆನೆದರೆ...
ಕದಂಬೋತ್ಸವ ಆಚರಿಸಿಕೊಂಡು ತಾಲೂಕು ಕೇಂದ್ರವಾಗಿಸುವ ಭರವಸೆ ಪಡೆದುಕೊಂಡಿರುವ ಬನವಾಸಿಯಲ್ಲಿ ಸಮಸ್ಯೆಗಳ ಸರಮಾಲೆಯೇ ತುಂಬಿದೆ. ಮೊದಲನೆಯದಾಗಿ ವಿದ್ಯುತ್ ಸಮಸ್ಯೆ. ಹಗಲಿನಲ್ಲಿ ವಿದ್ಯುತ್ ಇರುವುದೇ ಕಡಿಮೆ. ಇದ್ದಾಗಲೂ ವೋಲ್ಟೇಜ್ ಇರುವುದಿಲ್ಲ. ರಾತ್ರಿಯೂ ಅಷ್ಟೇ. ಇನ್ನು ಕದಂಬ ಸರ್ಕಲ್‌ನಿಂದ ದೇವಸ್ಥಾನದವರೆಗಿನ ಮುಖ್ಯರಸ್ತೆ ಸ್ವಲ್ಪ ದೂರವಷ್ಟೇ ಅಗಲೀಕರಣಗೊಂಡಿದ್ದು ಮುಂದಿನ ದಾರಿ ಕಿರಿದಾಗಿರುವುದರಿಂದ ಗಾಡಿ ಓಡಿಸುವುದೇ ಸವಾಲಾಗಿದೆ. ಬುಧವಾರದ ಸಂತೆಯ ದಿನ ಟೂರಿಸ್ಟ್ ವಾಹನವೇನಾದರೂ ಬಂದರೆ ಅವರು ದೇವಸ್ಥಾನ ತಲುಪಲು ಸಾಹಸ ಪಡಬೇಕಾಗುತ್ತದೆ. ಇನ್ನು ರಾಜ್ಯದಲ್ಲೇ ಪ್ರಸಿದ್ಧವಾದ ಪ್ರವಾಸಿ ತಾಣವಾದ ಇಲ್ಲಿಯ ಮಧುಕೇಶ್ವರ ದೇವಸ್ಥಾನಕ್ಕೆ ಹೋಗುವವರು ದೇವಸ್ಥಾನದ ಮುಂದಿನ ಕಸದ ರಾಶಿ ತುಳಿದುಕೊಂಡೇ ಹೋಗಬೇಕಾಗುತ್ತದೆ. ವರ್ಷದಲ್ಲಿ ಸಾವಿರಾರು ಜನ ಇಲ್ಲಿಗೆ ಭೇಟಿ ಕೊಡುತ್ತಾರೆ. ಆದರೆ ಉಳಿದುಕೊಳ್ಳಲು ಒಂದೇ ಒಂದು ವಸತಿ ಗೃಹವಿಲ್ಲ. ಇನ್ನು ಪ್ರಸಿದ್ಧ ಕವಿ ಪಂಪನ ಹೆಸರನ್ನಿಟ್ಟಿರುವ ಇಲ್ಲಿಯ 'ಪಂಪವನ' ಅಭಿವೃದ್ಧಿಯಿಲ್ಲದೇ ಹಾಳು ಸುರಿಯುತ್ತಿದೆ. ರಾಜ್ಯದ ಅತ್ಯುತ್ತಮ ಪ್ರವಾಸಿ ತಾಣವಾಗುವ ಎಲ್ಲ ಅವಕಾಶವಿದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬನವಾಸಿ ಮೂಲೆಗುಂಪಾಗುತ್ತಿದೆ.
- ಜಯಶ್ರೀ ಭಟ್ಟ, ಬನವಾಸಿ
-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Advertisement