ಆ ಹಣವನ್ನು ಅವರಿಗೇ ನೀಡಿ

Published on

ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದಕ್ಕೆ ಸಹಾಯ ಮಾಡುವ ಮನಸ್ಸಿದ್ದರೆ ಸಾಕು. ಎಷ್ಟೋ ಜನ ತಾವು ಬಡವರಾಗಿದ್ದರೂ ಇತರರಿಗೆ ನೆರವಾದ ನಿದರ್ಶನ ಬೇಕಾದಷ್ಟಿವೆ. ಅಂತಹ ಒಬ್ಬ ಹೃದಯವಂತ, ಕೇರಳದ ಪ್ರಸಿದ್ಧ ಚಿತ್ರ ಕಲಾವಿದ ಕೃಷ್ಣನ್ ಕುಟ್ಟಿ. ತಾನು, ತನ್ನ ಮಡದಿ ಮತ್ತು ಪುಟ್ಟ ಮಗುವಿನ ಜೀವನೋಪಾಯಕ್ಕಾಗಿ ಅವನು ಆರಿಸಿಕೊಂಡಿದ್ದ ವೃತ್ತಿ ಚಿತ್ರಕಲೆ. ಒಂದು ದಿನ ಕೃಷ್ಣನ್ ಮನೆಯಲ್ಲಿ ತಾದ್ಯಾತ್ಮ ಭಾವದಿಂದ ಯಾವುದೋ ಚಿತ್ರವನ್ನು ಬಿಡಿಸುತ್ತಿರುವಾಗ ಹೊರಗೆ ಜೋರಾದ ಗಲಾಟೆ ಕೇಳಿಸಿತು. ಹೊರಬಂದು ನೋಡಿದರೆ, ಮನೆಯ ಸಮೀಪ ಇದ್ದ ಬಡ ಮುಸಲ್ಮಾನರ ಮನೆಯೊಂದಕ್ಕೆ ಬೆಂಕಿ ಬಿದ್ದಿದೆ. ಮನೆಯಲ್ಲಿದ್ದ ಎಲ್ಲರೂ ಹೊರಗೆ ಪಾರಾಗಿ ಬಂದರೂ, ತೊಟ್ಟಿಲಲ್ಲಿದ್ದ ಕೂಸು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಬೀಳುವುದರಲ್ಲಿತ್ತು. ಮನೆಯವರೆಲ್ಲಾ ಬೊಬ್ಬೆ ಹೊಡೆಯತ್ತಿದ್ದರೆ, ಅಲ್ಲಿ ಸೇರಿದವರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದಾರೆ. ಕೃಷ್ಣನ್‌ಗೆ ತಡೆಯಲಾಗಲಿಲ್ಲ. ತಕ್ಷಣ ಉರಿಯುತ್ತಿದ್ದ ಮನೆಯೊಳಗೆ ನುಗ್ಗಿ ತೊಟ್ಟಿಲಲ್ಲಿದ್ದ ಕಂದನನ್ನು ಎದೆಗವುಚಿಕೊಂಡು ಹೊರಗೋಡಿ ಬಂದ. ಆದರೆ ಬೆಂಕಿಗೆ ಸಿಲುಕಿ ಅವನ ದೇಹದ ಬಹುಭಾಗ ಸುಟ್ಟುಬಿಟ್ಟಿತು. ಸುರಕ್ಷಿತವಾಗಿದ್ದ ಮಗುವನ್ನು ತಾಯಿಗೊಪ್ಪಿಸಿ, ನೆಮ್ಮದಿಯ ಉಸಿರು ಬಿಡುವಾಗಲೇ ಸುಟ್ಟ ಗಾಯದಿಂದ ಅಸು ನೀಗಿದ. ಕೃಷ್ಣನ್ ಮೃತಪಟ್ಟಾಗ ಮಲಯಾಳಂ ದೈನಿಕ ಮಾತೃಭೂಮಿ ಪ್ರಕಟಣೆಯೊಂದನ್ನು ನೀಡಿ, ಮೃತ ಕೃಷ್ಣನ್ ಕುಟುಂಬಕ್ಕೆ ನೆರವಾಗಲು ಸಾರ್ವಜನಿಕರಿಗೆ ಮನವಿ ಮಾಡಿತು. ಅದರ ಪರಿಣಾಮವಾಗಿ ಜನರಿಂದ ಸಹಾಯ ಹರಿದು ಬಂತು. ಅದನ್ನೆಲ್ಲಾ ಸಂಗ್ರಹಿಸಿ ಪತ್ರಿಕೆಯ ಸಂಪಾದಕರು ಕೃಷ್ಣನ್ ಮನೆಗೆ ಹೋಗಿ ಅದನ್ನು ಆತನ ಮಡದಿಗೆ ನೀಡಿದರು. ಆದರೆ ಆಕೆ, ತಮಗಾದರೋ ಇರಲೊಂದು ಪುಟ್ಟ ಮನೆಯಿದೆ. ಆದರೆ ಬೆಂಕಿಯಲ್ಲಿ ಮನೆ ಕಳೆದುಕೊಂಡ ಆ ಮುಸ್ಲಿಂ ಬಡ ಕುಟುಂಬ ಬೀದಿ ಪಾಲಾಗಿದೆ. ಅವರಿಗೆ ಹಣದ ಅವಶ್ಯಕತೆಯಿರುವುದರಿಂದ ಮನೆಕಟ್ಟಿಕೊಳ್ಳಲು ಆ ಹಣವನ್ನೆಲ್ಲಾ ಅವರಿಗೇ ನೀಡಬೇಕೆಂದು ಕೇಳಿಕೊಂಡು ಗಂಡನಂತೆಯೇ ಮಾನವೀಯತೆ ಮೆರೆದಳು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com