ಹುಟ್ಟಿನಿಂದ ಬರುವುದೂ ಅಲ್ಲ ಮುಟ್ಟಿನಿಂದ ಹೋಗುವುದೂ ಇಲ್ಲ
ಶೃಂಗೇರಿ ಮಠಾಧೀಶರಾಗಿದ್ದ ವಿದ್ಯಾತೀರ್ಥ ಸ್ವಾಮೀಜಿ ಮಂಗಳೂರು ಬಳಿಯ ಪಣಂಬೂರಿನಲ್ಲಿ ಬಿಡಾರ ಹೂಡಿದ್ದರು. ಬಹಳಷ್ಟು ಜನ ಸ್ವಾಮೀಜಿಯವರ ದರ್ಶನಾಕಾಂಕ್ಷಿಗಳಾಗಿ ಬಂದು ಹೋಗಿ ಮಾಡುತ್ತಿದ್ದರು. ಒಬ್ಬಾತ ಬಹಳ ದೂರದಲ್ಲಿಯೇ ನಿಂತಿದ್ದ. ಅವನ ಮುಖದಲ್ಲಿ ದುಃಖ ಮಡುಗಟ್ಟಿತ್ತು. ಅವನನ್ನು ನೋಡಿದ ಸ್ವಾಮೀಜಿಯವರು ಅವನನ್ನು ಹತ್ತಿರ ಕರೆಸಿಕೊಂಡರು. ಆತ ಅಳುತ್ತಿದ್ದ. ಸ್ವಾಮಿಗಳು ಅವನೇಕೆ ಅಳುತ್ತಿದ್ದಾನೆಂದು ವಿಚಾರಿಸಿದರು. ಅವನ ಅಳು ಜೋರಾದಾಗ, ಅವನಿಗೆ ಸಮಾಧಾನ ಹೇಳಿದ್ದೇ ಅಲ್ಲದೆ, ಅವನಿಗೆ ಯಾವ ಕಷ್ಟ ಬಂದಿದೆ ಎಂದು ವಿಚಾರಿಸಿದರು. ಅವನು ಬಿಕ್ಕುತ್ತಲೇ, "ತಮ್ಮ ದರ್ಶನಕ್ಕೆ ನಾನು ಅನರ್ಹ" ಎಂದ. ಅದನ್ನು ಕೇಳಿ ಸ್ವಲ್ಪ ವಿವರವಾಗಿ ಹೇಳಲು ಅವನಿಗೆ ಆದೇಶಿಸಿದರು. ಆಗ ಅವನು ನಿಧಾನವಾಗಿ, ತಾನು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವನಾಗಿದ್ದು, ಒಮ್ಮೆ ಯಾವುದೋ ಕಾರಣಕ್ಕಾಗಿ ನೆರೆಯ ಮುಸಲ್ಮಾನನೊಡನೆ ಜಗಳವಾಗಿ, ಜಗಳದಲ್ಲಿ ಆತ ತನ್ನ ಮೇಲೆ ಉಗಿದನೆಂದೂ, ಅಲ್ಲಿಂದ ತನ್ನ ಬ್ರಾಹ್ಮಣತ್ವ ಕಳೆದುಕೊಂಡು ಜಾತಿಭ್ರಷ್ಟನಾಗಿರುವುದಾಗಿಯೂ, ಎಲ್ಲರೂ ತನ್ನನ್ನು ಬ್ರಾಹ್ಮಣ ಸಮಾಜದಿಂದ ದೂರವಿಟ್ಟಿರುವುದಾಗಿಯೂ ತಿಳಿಸಿದ. ಕ್ಷುಲ್ಲಕ ಕಾರಣದಿಂದ ಹೀಗೆ ಒಬ್ಬ ವ್ಯಕ್ತಿಗೆ ಬಹಿಷ್ಕಾರ ಹಾಕಿದ್ದು ಸ್ವಾಮೀಜಿಗೆ ಸರಿಯೆನಿಸಲಿಲ್ಲ. ಧರ್ಮಸೂಕ್ಷ್ಮವನ್ನು ಹೀಗೆ ತಿರುಚಿ ವೃಥಾಪವಾದ ಮಾಡಿದ ಸಮಾಜದ ಬಗ್ಗೆ ಅವರಿಗೆ ಅಸಮಾಧಾನವೂ ಆಯಿತು. "ಬೇರೆ ಜಾತಿಯವರು ಉಗಿದರೆ, ಜಾತಿಭ್ರಷ್ಠನಾಗುತ್ತಾನೆಂದು ಹೇಳಿದವರು ಯಾರು? ಹುಟ್ಟಿನಿಂದ ಯಾರೂ ಬ್ರಾಹ್ಮಣರಾಗುವುದಿಲ್ಲ., ಮುಟ್ಟಿನಿಂದ ಹೋಗುವುದೂ ಇಲ್ಲ. ಬ್ರಹ್ಮೋಪದೇಶ ಮಾಡಿಕೊಂಡು ಗಾಯತ್ರಿ ಉಪಾಸನೆ ಮಾಡುವ ಯಾರೇ ಆಗಲಿ ಬ್ರಾಹ್ಮಣನಾಗುತ್ತಾನೆ. ಇಂದಿನಿಂದಲೇ ನೀನು ಗಾಯತ್ರಿ ಉಪಾಸನೆ ಮಾಡುವುದನ್ನು ಪ್ರಾರಂಭಿಸು" ಎಂದು ಸಮಾಧಾನ ಪಡಿಸಿದರು. ಈ ಪ್ರಸಂಗವನ್ನು ತ.ರಾ.ಸು ಅವರಿಗೆ ಸ್ವತಃ ಸ್ವಾಮೀಜಿಯವರೇ ಹೇಳಿದರೆಂದು ಅವರು ತಮ್ಮ "ಸ್ನೇಹ ಸಮನ್ವಯ" ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ