ನವದೆಹಲಿ: ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದು, ರಾಜಕಾರಣಿಗಳು ಎದುರಾಳಿ ಪಕ್ಷದ ನಾಯಕರ ವಿರುದ್ಧ ಆರೋಪ, ವಾಗ್ದಾಳಿ ನಡೆಸುವಲ್ಲಿ ನಿರತರಾಗಿದ್ದಾರೆ. ಈ ವಾಗ್ದಾಳಿ ಕೆಲವೊಮ್ಮೆ ವಿಕೋಪಕ್ಕೆ ತಿರುಗಿರುವ ಉದಾಹರಣೆಗಳಿದ್ದು ಅಂತಹದ್ದೇ ಘಟನೆ ಈಗ ನಡೆದಿದೆ.
ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ನಾಯಕ ಬಿಜೆಪಿ ವಕ್ತಾರನ ಮೇಲೆ ನೀರಿನ ಲೋಟ ಎಸೆದು ಹಲ್ಲೆಗೆ ಮುಂದಾಗಿರುವ ಘಟನೆ ನಡೆದಿದೆ.
ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಅಲೋಕ್ ಶರ್ಮಾ ಬಿಜೆಪಿ ವಕ್ತಾರ ಕೆ.ಕೆ ಶರ್ಮಾ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.
ಬಿಜೆಪಿ ವಕ್ತಾರ ನೇರ ಪ್ರಸಾರದಲ್ಲಿ ಹಲವು ಬಾರಿ ಕಾಂಗ್ರೆಸ್ ನಾಯಕ ಅಲೋಕ್ ಶರ್ಮಾ ಅವರನ್ನು "ದೇಶದ್ರೋಹಿ" ಎಂದು ಹೇಳಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಕಾಂಗ್ರೆಸ್ ನಾಯಕ ನೀರಿನ ಲೋಟ ಎಸೆದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಕಾರ್ಯಕ್ರಮ ನಿರೂಪಕನ ಜಾಕೆಟ್ ಕೂಡ ಒದ್ದೆಯಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗದಿದ್ದರೂ ಗಾಜು ಪುಡಿಯಾಗಿ ಹರಡಿತ್ತು. ಅಲೋಕ್ ಶರ್ಮಾ ನಡೆದುಕೊಂಡ ರೀತಿಗೆ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ವಕ್ತಾರ ಆಗ್ರಹಿಸಿದ್ದರೆ, ತನ್ನನ್ನು ದೇಶದ್ರೋಹಿ ಎಂದು ಕರೆದ ಕೆ.ಕೆ ಶರ್ಮಾ ಕೂಡ ಕ್ಷಮೆ ಕೇಳಲಿ ಎಂಬುದು ಕಾಂಗ್ರೆಸ್ ನಾಯಕನ ಆಗ್ರಹ.