ಟಿಕೆಟ್ ಕೈಕೊಟ್ಟ ಕಾಂಗ್ರೆಸ್: ಪಾರ್ಟಿ ಆಫೀಸಿಂದ 300 ಕುರ್ಚಿ ಹೊತ್ತೊಯ್ದ ಮಹಾರಾಷ್ಟ್ರ ಶಾಸಕ!

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ ಎಂದು ಬೇಸರಗೊಂಡು ಕಾಂಗ್ರೆಸ್ ಶಾಸಕ ...
ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ಅಬ್ದುಲ್ ಸತ್ತರ್
ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ಅಬ್ದುಲ್ ಸತ್ತರ್
ಔರಂಗಾಬಾದ್: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ ಎಂದು ಬೇಸರಗೊಂಡು ಕಾಂಗ್ರೆಸ್ ಶಾಸಕ ಅಬ್ದುಲ್ ಸತ್ತರ್ ಇಲ್ಲಿನ ಸ್ಥಳೀಯ ಕಾಂಗ್ರೆಸ್ ಕಚೇರಿಯಿಂದ ಬೆಂಬಲಿಗರ ಮೂಲಕ ಸುಮಾರು 300 ಕುರ್ಚಿಗಳನ್ನು ತೆಗೆದುಕೊಂಡು ಹೋದ ಘಟನೆ ಕೇಂದ್ರ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಸಿಲ್ಲೊದ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಬ್ದುಲ್ ಸತ್ತರ್ ತಾನು ಪಕ್ಷ ತೊರೆದಿದ್ದು ಪಾರ್ಟಿ ಆಫೀಸ್ ನಲ್ಲಿದ್ದ ಕುರ್ಚಿಗಳು ತನಗೆ ಸೇರಿದವು, ಹೀಗಾಗಿ ತೆಗೆದುಕೊಂಡು ಹೋದೆ ಎಂದು ಹೇಳುತ್ತಿದ್ದಾರೆ.
ಸ್ಥಳೀಯ ಕಾಂಗ್ರೆಸ್ ನಾಯಕರು ಎನ್ ಸಿಪಿ ಮತ್ತು ಕಾಂಗ್ರೆಸ್ ನ ಜಂಟಿ ಸಭೆಯನ್ನು ಶಾಹ್ ಗುಂಜ್ ಪ್ರದೇಶದ ಗಾಂಧಿ ಭವನದಲ್ಲಿ ಕರೆದಿದ್ದರು. ಈ ಸಭೆಗೆ ಮುನ್ನ ಶಾಸಕ ಸತ್ತರ್ ತನ್ನ ಬೆಂಬಲಿಗರೊಂದಿಗೆ ಸೇರಿ ಅಲ್ಲಿದ್ದ ಕುರ್ಚಿಯನ್ನು ಹೊತ್ತೊಯ್ದಿದ್ದಾರೆ. ನಂತರ ಸಭೆ ಎನ್ ಸಿಪಿ ಕಾರ್ಯಾಲಯದಲ್ಲಿ ನಡೆಯಿತು.
ಜಿಲ್ಲೆಯಲ್ಲಿ ಅಬ್ದುಲ್ ಸತ್ತರ್ ಓರ್ವ ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದು ಔರಂಗಾಬಾದ್ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ಹೊಂದಿದ್ದರು. ಆದರೆ ಕಾಂಗ್ರೆಸ್ ಎಂಎಲ್ ಸಿ ಸುಭಾಷ್ ಜಾಂಬಾದ್ ರನ್ನು ನಿಲ್ಲಿಸಿದ್ದು ಇದರಿಂದ ಸತ್ತರ್ ನೊಂದಿದ್ದರು.
ಕಳೆದ ಮಂಗಳವಾರ ಪಾರ್ಟಿ ಮೀಟಿಂಗ್ ಇದೆ ಎಂದು ಸತ್ತರ್ ಗೆ ಗೊತ್ತಾಗಿತ್ತು. ಸಭೆ ಆರಂಭವಾಗುವ ಮುನ್ನ ಅವರ ಬೆಂಬಲಿಗರು ಬಂದು ಕುರ್ಚಿಗಳನ್ನು ತೆಗೆದುಕೊಂಡು ಹೋದರು.
ಈ ಕುರಿತು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸತ್ತರ್, ಕುರ್ಚಿಗಳು ನನಗೆ ಸೇರಿದವು. ಅದನ್ನು ಕಾಂಗ್ರೆಸ್ ಸಭೆಗೆ ನೀಡುತ್ತಿದ್ದೆವು. ನಾನೀಗ ಕಾಂಗ್ರೆಸ್ ತೊರೆದಿದ್ದೇನೆ, ಹೀಗಾಗಿ ಕುರ್ಚಿಗಳನ್ನು ಹಿಂದಕ್ಕೆ ಪಡೆದಿದ್ದೇನೆ, ಅಭ್ಯರ್ಥಿಯಾಗಿ ಕಣಕ್ಕಿಳಿಯುವವರು ಪ್ರಚಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಲಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com