ದೆಹಲಿಯಲ್ಲಿ ಬಿಎಸ್ ವೈ ಡೈರಿ ಸ್ಫೋಟ: ಸಿಎಂ ಆಗಿದ್ದಾಗ ಬಿಜೆಪಿ ಹೈಕಮಾಂಡ್ ಗೆ 1800 ಕೋಟಿ ರು. ಕಪ್ಪ, ತನಿಖೆಗೆ ಕಾಂಗ್ರೆಸ್ ಆಗ್ರಹ

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಹೈಕಮಾಂಡ್ ಗೆ...
ರಂದೀಪ್ ಸುರ್ಜೇವಾಲ
ರಂದೀಪ್ ಸುರ್ಜೇವಾಲ
ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಹೈಕಮಾಂಡ್ ಗೆ 1800 ಕೋಟಿ ರುಪಾಯಿ ಕಪ್ಪ ನೀಡಿರುವುದಾಗಿ ಕಾಂಗ್ರೆಸ್ ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಡೈರಿಯೊಂದನ್ನು ಬಿಡುಗಡೆ ಮಾಡಿದೆ.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಎಸ್ ವೈ ಸಹಿ ಇರುವ ಡೈರಿ ಬಿಡುಗಡೆ ಮಾಡಿದ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲ ಅವರು, ಯಡಿಯೂರಪ್ಪ ಅವರು ಬಿಜೆಪಿ ಹೈಕಮಾಂಡ್ ಗೆ ಲಂಚ ನೀಡಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖವಿದೆ. ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಸೇರಿದಂತೆ ವಿವಿಧ ನಾಯಕರಿಗೆ 1800 ಕೋಟಿ ರುಪಾಯಿ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಸುರ್ಜೆವಾಲ ಆಗ್ರಹಿಸಿದ್ದರು.
ಬಿಜೆಪಿ ಹೈಕಮಾಂಡ್ ಗೆ ಲಂಚ ನೀಡಿರುವುದನ್ನು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಈ ಕುರಿತು ಅವರು ದಿ.ಅನಂತ್ ಕುಮಾರ್ ಜತೆ ಮಾತನಾಡಿರುವ ಆಡಿಯೋವನ್ನು ಕಾಂಗ್ರೆಸ್ ಈ ಹಿಂದೆ ಬಿಡುಗಡೆ ಮಾಡಿತ್ತು. ಇದು ಮಾಧ್ಯಮಗಳಲ್ಲೂ ವರದಿಯಾಗಿತ್ತು ಎಂದರು.
ಕಾರವಾನ್ ಮ್ಯಾಗಜಿನ್ ವರದಿಯನ್ನು ಆಧಾರಿಸಿ ಸುದ್ದಿಗೋಷ್ಠಿ ನಡೆಸಿದ ಸುರ್ಜೇವಾಲ, ಈ ಡೈರಿಯ ಪ್ರತಿ ಪುಟದಲ್ಲಿ ಬಿಎಸ್ ಯಡಿಯೂರಪ್ಪ ಅವರ ಹಸ್ತ ಬರಹದ ಜೊತೆ ಸಹಿ ಇದೆ. ಅಷ್ಟೇ ಅಲ್ಲದೇ ಈ ಪ್ರಕರಣ ವಿಚಾರಣೆಗೆ ಯೋಗ್ಯವಾಗಿದ್ದು, ಹೊಸದಾಗಿ ನೇಮಕಗೊಂಡಿರುವ ಲೋಕಪಾಲರು ಈ ಡೈರಿಯ ಬಗ್ಗೆ ತನಿಖೆ ನಡೆಸಲು ಆದೇಶ ನೀಡಬೇಕೆಂದು ಒತ್ತಾಯಿಸಿದರು.
2017 ರಿಂದ ಈ ಡೈರಿ ಆದಾಯ ತೆರಿಗೆ ಇಲಾಖೆಯಲ್ಲಿದ್ದು, ಮೋದಿ ಯಾಕೆ ಈ ಪ್ರಕರಣದಲ್ಲಿ ಮೌನ ವಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಈ ಡೈರಿಯಲ್ಲಿರುವ ವಿಚಾರಗಳು ಸರಿಯೇ ತಪ್ಪೇ ಎನ್ನುವುದರ ಬಗ್ಗೆ ಹೆಸರು ಪ್ರಸ್ತಾಪವಾಗಿರುವ ನಾಯಕರು ಮುಂದೆ ಬಂದು ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಡೈರಿ ಬಿಡುಗಡೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಈಗ ಕಾಂಗ್ರೆಸ್ ಡೈರಿ ಬಿಡುಗಡೆ ಮಾಡಿದೆ.
ಡೈರಿಯಲ್ಲಿ ಏನಿದೆ?
ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ 1 ಸಾವಿರ ಕೋಟಿ, ಅರುಣ್ ಜೇಟ್ಲಿ ಮತ್ತು ಗಡ್ಕರಿ ಅವರಿಗೆ 150 ಕೋಟಿ, ರಾಜನಾಥ್ ಸಿಂಗ್ ಅವರಿಗೆ 100 ಕೋಟಿ, ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರಿಗೆ 50 ಕೋಟಿ ರೂ. ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಿತಿನ್ ಗಡ್ಕರಿ ಮಗಳ ಮದುವೆಗೆ 10 ಕೋಟಿ ನೀಡಿದ್ದು, ತನ್ನ ವಿರುದ್ಧದ ಕೇಸ್‍ಗಳ ವಕಾಲತ್ತಿಗೆ 50 ಕೋಟಿ ರೂ. ಹಣವನ್ನು ಯಡಿಯೂರಪ್ಪ ನೀಡಿದ್ದಾರೆ ಎಂದು ಸುರ್ಜೆವಾಲಾ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com