ಬಾಲಕೋಟ್ ವೈಮಾನಿಕ ದಾಳಿಯಿಂದ ಪಾಕ್ ಗೆ ಬಿಸಿ ಮುಟ್ಟಿದೆ: ಪ್ರಧಾನಿ ಮೋದಿ

ಭಯೋತ್ಪಾದನೆಯನ್ನು ನಿಯಂತ್ರಿಸುವ ನೆಲಕ್ಕೆ ನುಗ್ಗಿ ಹೊಡೆಯಬೇಕು ಎಂಬ ಉದ್ದೇಶದಿಂದ ಭಾರತೀಯ ವಾಯುಪಡೆಗೆ ಬಾಲಕೋಟ್ ಮೇಲೆ ವೈಮಾನಿಕ ದಾಳಿ....
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಭಯೋತ್ಪಾದನೆಯನ್ನು ನಿಯಂತ್ರಿಸುವ ನೆಲಕ್ಕೆ ನುಗ್ಗಿ ಹೊಡೆಯಬೇಕು ಎಂಬ ಉದ್ದೇಶದಿಂದ ಭಾರತೀಯ ವಾಯುಪಡೆಗೆ ಬಾಲಕೋಟ್ ಮೇಲೆ ವೈಮಾನಿಕ ದಾಳಿ ನಡೆಸಲು ಸೂಚಿಸಲಾಗಿತ್ತು. ಬಾಲಕೋಟ್ ವೈಮಾನಿಕ ದಾಳಿಯಿಂದ ಪಾಕ್ ಗೆ ಬಿಸಿ ಮುಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.
ಇಂದು ನವದೆಹಲಿಯ ಟೌನ್​​ ಹಾಲ್​ನಲ್ಲಿ‘ಮೈ ಭಿ ಚೌಕಿದಾರ್’ ಕಾರ್ಯಕ್ರಮದಲ್ಲಿ ದೇಶದ ಮತದಾರರನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಉಗ್ರರ ಕೇಂದ್ರ ಬಿಂದು ಎಲ್ಲಿದೆ ಎನ್ನುವುದು ಇಡಿ ವಿಶ್ವಕ್ಕೆ ಗೊತ್ತಿದೆ. ಈ ಕಾಣರಕ್ಕಾಗಿಯೇ ನಾವು ಅವರ ನೆಲಕ್ಕೆ ನುಗ್ಗಿ ದಾಳಿ ಮಾಡಿ ನೆಲೆಗಳನ್ನು ಧ್ವಂಸ ಮಾಡಿದ್ದೇವೆ. ಚುನಾವಣೆ ಇದೆ ಎನ್ನುವ ಕಾರಣಕ್ಕೆ ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡಿಲ್ಲ. ನಮ್ಮ ದೇಶದ ಜನರು ಪಾಕಿಸ್ತಾನ ಹೇಳಿಕೆಯನ್ನು ಬೆಂಬಲಿಸುತ್ತಿರುವುದನ್ನು ನೋಡಿ ನನಗೆ ಬೇಸರವಾಗುತ್ತದೆ ಎಂದರು.
ಪಾಕಿಸ್ತಾನ ಬಾಲಕೋಟ್ ನಲ್ಲಿ ಮರು ನಿರ್ಮಾಣ ಮಾಡುತ್ತಿದೆ. ಬಾಲಕೋಟ್ ಮೇಲೆ ದಾಳಿ ಮಾಡಿದ್ದು, ನಾನಲ್ಲ. ನಮ್ಮ ವೀರ ಯೋಧರು. ಅವರಿಗೆ ಗೌರವ ಸಲ್ಲಿಸೋಣ. ವಂಚಕರು ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಬಿಡುವುದಿಲ್ಲ ಎಂದರು.
ದೇಶದ ಪ್ರತಿಯೊಬ್ಬರೂ ಚೌಕಿದಾರ್​ ಆಗಬೇಕು. ದೇಶವನ್ನು ಲೂಟಿ ಹೊಡೆಯುತ್ತಿರುವವರ ವಿರುದ್ಧ ಒಂದಾಗಬೇಕಿದೆ ಎಂದರು.
ರಾಜಮನೆತನದ ನಾಯಕರೆಲ್ಲಾ ದೇಶವನ್ನ ಕೊಳ್ಳೆ ಹೊಡೆದಿದ್ದಾರೆ. ಈ ದೇಶಕ್ಕೆ ಮಹಾರಾಜರು ಬೇಕಿಲ್ಲ, ಚೌಕಿದಾರರು ಬೇಕಿದೆ. ಇಂದು ನಾವೆಲ್ಲರೂ ಕಾವಲುಗಾರರಾಗಿ ದೇಶವನ್ನ ರಕ್ಷಣೆ ಮಾಡಬೇಕಿದೆ ಅಂತಾ ಪರೋಕ್ಷವಾಗಿ ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಸೈನಿಕರು, ಕಾರ್ಮಿಕರು, ವಿದ್ಯಾರ್ಥಿಗಳು ಎಲ್ಲರೂ ಕೂಡ ಚೌಕಿದಾರರೇ. ಚೌಕಿದಾರರು ಯಾವತ್ತೂ ಭ್ರಷ್ಟಾಚಾರವನ್ನ ಸಹಿಸಲ್ಲ. ಇಂದು ದೇಶದ ಅಭಿವೃದ್ಧಿಗಾಗಿ ನಾವೆಲ್ಲ ಶಪಥ ಮಾಡೋಣ. ಕಳೆದ 70 ವರ್ಷಗಳ ಅವಧಿಯಲ್ಲಿ ಆಗಿರದ ಅಭಿವೃದ್ಧಿ ಐದು ವರ್ಷದಲ್ಲಿ ಆಗಿದೆ ಅಂದ್ರೆ ಅದಕ್ಕೆ ಕಾರಣ ಮೋದಿ ಅಲ್ಲ. ದೇಶದ ಜನರು. ನೀವು ನಮಗೆ ನೀಡಿರೋ ಪೂರ್ಣ ಬಹುಮತವೇ ಅಭಿವೃದ್ಧಿಗೆ ಪ್ರಮುಖ ಕಾರಣ ಎಂದರು.
ಕಳೆದ 40 ವರ್ಷಗಳಿಂದ ದೇಶದಲ್ಲಿ ಭಯೋತ್ಪಾದನೆಯ ಸಮಸ್ಯೆ ಇದೆ. ಉಗ್ರ ಸಂಘಟನೆಗಳು ಭಾರತದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಲೇ ಬಂದಿವೆ.  ಜಮ್ಮು-ಕಾಶ್ಮೀರ, ಮುಂಬೈ ಸೇರಿದಂತೆ ಅನೇಕ ಭಾಗಗಳಲ್ಲಿ  ದಾಳಿ ನಡೆದಿದೆ. ಇದಕೆಲ್ಲಾ ನಾವು ಅಂತ್ಯ ಹಾಡಬೇಕಿದೆ. ನಾವು ಕೂಡ ಎಷ್ಟು ಅಂತಾ ಸಹಿಸಿಕೊಳ್ಳೋದು ಅಂತಾ ಪ್ರಶ್ನೆ ಮಾಡಿದರು.
ಬಾಲ್​ಕೋಟ್​ನಲ್ಲಿ ಉಗ್ರರಿಗೆ ನಮ್ಮ ಹೆಮ್ಮೆಯ ಯೋಧರು ಪಾಠ ಕಲಿಸಿದ್ದಾರೆ. ಆದರೆ ಅದನ್ನ ಪಾಕಿಸ್ತಾನ ಒಪ್ಪಿಕೊಳ್ಳುತ್ತಿಲ್ಲ. ಅಲ್ಲದೇ ನಾವು ಯಾವುದೇ ಉಗ್ರರ ಕ್ಯಾಂಪ್​ಗಳನ್ನ ನಡೆಸುತ್ತಿಲ್ಲ ಎಂದು ಹೇಳುತ್ತಿದೆ. ಆದ್ರೆ ನಾನು ಈಗಲೂ ಹೇಳುತ್ತೇನೆ, ಪಾಕಿಸ್ತಾನ ಉಗ್ರರಿಗಾಗಿ ಕ್ಯಾಂಪ್ ನಡೆಸುತ್ತಿದೆ. ಮೋದಿ ಚುನಾವಣೆಯಲ್ಲಿ ಬ್ಯುಸಿ ಇಲ್ಲ. ದೇಶದ  ಸೇವೆಯಲ್ಲಿ ಬ್ಯುಸಿ ಇದ್ದಾರೆ. ನನಗೆ ಚುನಾವಣೆ ಮುಖ್ಯ ಅಲ್ಲ. ನಮ್ಮದು ರಿಮೋಟ್ ಕಂಟ್ರೋಲ್ ಸರ್ಕಾರ ಅಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com