ಲೋಕಸಭೆ ಚುನಾವಣೆ 2019: ಪ್ರಾದೇಶಿಕ ಪಕ್ಷಗಳ ಕನಸು ನನಸಾಗುವುದೇ?

ಇನ್ನೇನು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲು ಎರಡು ವಾರ ಮಾತ್ರ ಬಾಕಿಯಿದೆ. 2019ರ ಲೋಕಸಭೆ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲು ಎರಡು ವಾರ ಮಾತ್ರ ಬಾಕಿಯಿದೆ. 2019ರ ಲೋಕಸಭೆ ಚುನಾವಣೆ ಕಲ್ಪನೆ ಮತ್ತು ಸಿದ್ಧಾಂತಗಳ ಮಧ್ಯೆ ನಡೆದ ಚುನಾವಣೆ ಮಾತ್ರವಲ್ಲ.
ದೇಶದ 542 ಲೋಕಸಭಾ ಕ್ಷೇತ್ರಗಳಲ್ಲಿ ಈ ಬಾರಿ ಚರ್ಚಿತವಾದ ವಿಷಯವೆಂದರೆ ಮೋದಿ ವರ್ಸಸ್ ಪ್ರಾದೇಶಿಕ ಪಕ್ಷಗಳು. ಮೋದಿಯವರಿಗೆ ಪ್ರಧಾನಿ ಹುದ್ದೆ ಶತಾಯಗತಾಯ ತಪ್ಪಿಸಬೇಕೆಂದು ವಿರೋಧ ಪಕ್ಷಗಳು ಹವಣಿಸುತ್ತಿದ್ದು ಈ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷಗಳು ಒಟ್ಟಾಗಲು ನೋಡುತ್ತಿವೆ. ಇವರಲ್ಲಿ ಕಿಂಗ್ ಮೇಕರ್ ಯಾರಾಗುತ್ತಾರೆ. ಯಾವ ಪ್ರಾದೇಶಿಕ ಪಕ್ಷಗಳಿಗೆ ಮನ್ನಣೆ ದೊರಕಲಿದೆ ಎಂಬುದು ಕುತೂಹಲಕಾರಿ ಸಂಗತಿ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಬರೆದಿರುವ ಅಂಕಣದಲ್ಲಿ ಪ್ರಭು ಚಾವ್ಲಾ ಹೇಳಿದ್ದಾರೆ.
ರಾಜಕೀಯದಲ್ಲಿ ಅಧಿಕಾರವೇ ಕೊನೆಯ ಕರ್ಮ. ರಾಷ್ಟ್ರ ರಾಜಕೀಯದಲ್ಲಿ ಅಧಿಕಾರ ಗಳಿಸಿ ಮಿಂಚುವುದು ಪ್ರತಿಯೊಬ್ಬ ರಾಜಕೀಯ ನಾಯಕನ ಆಸೆ-ಆಕಾಂಕ್ಷೆಯಾಗಿರುತ್ತದೆ. ದೆಹಲಿಯ ಸಂಸತ್ತು ಮೆಟ್ಟಿಲು ಹತ್ತಿ ಪ್ರಧಾನಿ ಗದ್ದುಗೆಯಲ್ಲಿ ಎಲ್ಲ ಪಕ್ಷಗಳ ನಾಯಕರ ಕಣ್ಣು ಇರುತ್ತದೆ.
ಪ್ರಧಾನಿ ಮೋದಿಯಾಗಿ ಬಿಜೆಪಿ ನಾಯಕರು ದೇಶದೆಲ್ಲೆಡೆ ಚುನಾವಣೆ ಪ್ರಚಾರದಲ್ಲಿ ಹೇಳುತ್ತಿದ್ದ ಮಾತೆಂದರೆ ನೀವು ಕಮಲದ ಬಟನ್ ಒತ್ತಿ, ಅದು ನೇರವಾಗಿ ಮೋದಿಯವರ ಖಾತೆಗೆ ಹೋಗುತ್ತದೆ ಎಂದು. ದೇಶಕ್ಕೆ ಮೋದಿ ಮತ್ತೊಮ್ಮೆ ಎಂಬುದೇ ಅವರ ಪ್ರಚಾರದ ಮುಖ್ಯ ವಾಕ್ಯವಾಗಿತ್ತು.
ಇನ್ನು ಪ್ರತಿಪಕ್ಷಗಳಲ್ಲಿ ಮಮತಾ ಬ್ಯಾನರ್ಜಿ, ಮಾಯಾವತಿ, ಚಂದ್ರಬಾಬು ನಾಯ್ಡು, ಅಖಿಲೇಶ್ ಯಾದವ್ ಹೀಗೆ ಅನೇಕರು ಪ್ರಧಾನಿ ರೇಸ್ ನಲ್ಲಿದ್ದಾರೆ. ಇವರಲ್ಲಿ ಯಾರು ಎಂದು ಇನ್ನೂ ನಿರ್ಧಾರವಾಗಿಲ್ಲ. ಆದರೆ ದೆಹಲಿಯ 7, ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಹೋಗಿ ಕೂರುವ ಸರದಿ ಸಾಲಿನಲ್ಲಿರುವುದಂತು ಖಂಡಿತ. ದೇಶದ 435 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದೆ. ಸದ್ಯದ ಪರಿಸ್ಥಿತಿಯಲ್ಲಿ ತ್ರಿಶಂಕು ಫಲಿತಾಂಶ ಬರಬಹುದು ಎಂದು ಹೇಳಲಾಗುತ್ತಿದೆ.
ಇನ್ನು ಎರಡು ಹಂತಗಳಲ್ಲಿ 107 ಲೋಕಸಭಾ ಕ್ಷೇತ್ರಗಳ ಮತದಾನ ಬಾಕಿಯಿದೆ. ಕೊನೆ ಕ್ಷಣದಲ್ಲಿ ರಾಜಕೀಯ ಚಿತ್ರಣ ಬದಲಾಗಬಹುದು. ಆದರೆ ಸದ್ಯದ ಮಟ್ಟಿಗೆ ಆಡಳಿತಾರೂಢ ಎನ್ ಡಿಎ ಪರ ಮತದಾರರ ಒಲವು ಅಷ್ಟೊಂದು ಇಲ್ಲ ಎಂದು ಟಿವಿ ಚಾನೆಲ್ ಗಳ ಆದಿಯಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಸಹ ವರದಿಯಾಗುತ್ತಿವೆ.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಬದಲಾಗುತ್ತಿರುವ ರಾಜಕೀಯ ಚಿತ್ರಣದಲ್ಲಿ ಶಿಲ್ಪಿಯಾಗಲು ಹವಣಿಸುತ್ತಿದ್ದಾರೆ. ತೆಲಂಗಾಣದಲ್ಲಿ 17 ಸಂಸದರಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಟಿಆರ್ ಎಸ್ ನ ಅಮೋಘ ಗೆಲುವು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವರನ್ನು ನಿರ್ಣಾಯಕ ನಾಯಕನ ಸ್ಥಾನದಲ್ಲಿ ಕೂರಿಸಬಹುದು ಎಂಬ ನಂಬಿಕೆ ಅವರದ್ದು. ಚುನಾವಣಾಪೂರ್ವ ಘಟಬಂಧನವನ್ನು ಅವರು ಆರಂಭಿಸಿದ್ದಾರೆ. ಕೇರಳದಲ್ಲಿ ಮಾರ್ಕ್ಸ್ ವಾದಿ ನಾಯಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಮಾತುಕತೆಯಾಡಿ ಬಂದಿದ್ದಾರೆ.
ಅವರ ನಂತರದ ಟಾರ್ಗೆಟ್ ತಮಿಳುನಾಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಡಿಎಂಕೆಯ ಎಂ ಕೆ ಸ್ಟಾಲಿನ್. ತಮಿಳುನಾಡಿನಲ್ಲಿ ಎಂ ಕೆ ಸ್ಟಾಲಿನ್ ವಿವಾದಾತೀತ ನಾಯಕ. ಕೇಂದ್ರದಲ್ಲಿ ಬಿಜೆಪಿ ಕಡಿಮೆ ಅಂತರದಲ್ಲಿ ಬಹುಮತ ಹೊಂದದಿದ್ದರೆ ಕೆಸಿಆರ್ ಕೊನೆ ಕ್ಷಣದಲ್ಲಿ ಬಿಜೆಪಿ ಬೆಂಬಲಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ತೆಲಂಗಾಣದಲ್ಲಿ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಅಥವಾ ಸಿಬಿಐ ದಾಳಿಗಳು ಯಾವುದೂ ನಡೆದಿಲ್ಲ. ಹೀಗಿರುವಾಗ ಕೇಂದ್ರ ಸರ್ಕಾರ ರಚನೆಯಲ್ಲಿ ಅವರು ಅಷ್ಟೊಂದು ಉತ್ಸಾಹ ತೋರಿಸುತ್ತಿರುವುದು ಕೂಡ ಸಾಕಷ್ಟು ರಾಜಕೀಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ದಕ್ಷಿಣ ಭಾರತದಲ್ಲಿ ಒಟ್ಟು 131 ಲೋಕಸಭಾ ಕ್ಷೇತ್ರಗಳ ಪೈಕಿ 120ಕ್ಕಿಂತ ಹೆಚ್ಚು ಸೀಟುಗಳನ್ನು ಬಿಜೆಪಿ ಗೆಲ್ಲುವುದು ಕಷ್ಟವಿದೆ. ತ್ರಿಶಂಕು ಸಂಸತ್ತು ಸ್ಥಿತಿಯಲ್ಲಿ ದಕ್ಷಿಣದಲ್ಲಿ ಡಿಎಂಕೆ, ಟಿಡಿಪಿ, ಎಡರಂಗ, ಜೆಡಿಎಸ್, ಟಿಆರ್ ಎಸ್, ವೈಎಸ್ಆರ್ ಸಿ ಮತ್ತು ಕಾಂಗ್ರೆಸ್ ಒಟ್ಟಾಗಿ 110 ಸಂಸದರನ್ನು ಹೊಂದಿದರೆ ಸರ್ಕಾರ ರಚನೆಯಲ್ಲಿ ನಿರ್ಮಾಣಯ ಪಾತ್ರ ವಹಿಸುತ್ತವೆ. ಕರ್ನಾಟಕ ಹೊರತುಪಡಿಸಿ ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸೀಟುಗಳು ಬರಬಹುದು ಎಂಬ ವಿಶ್ವಾಸ ಆ ಪಕ್ಷಕ್ಕಿದೆ.
2014ರಲ್ಲಿ ಯುಪಿಎ ವಿರುದ್ಧವಾದ ಬಿಜೆಪಿ ಅಲೆ ದೇಶಾದ್ಯಂತ ಕಂಡು ಬಂದಿದ್ದು ಮೋದಿ ಮೇನಿಯಾದಿಂದಾಗಿ ಬಿಜೆಪಿ ಸ್ಪರ್ಧಿಸಿದ್ದ ಸುಮಾರು 400 ಲೋಕಸಭಾ ಕ್ಷೇತ್ರಗಳಲ್ಲಿ 282 ಸೀಟುಗಳು ಬಂದಿದ್ದವು. 11 ರಾಜ್ಯಗಳಲ್ಲಿ ಬಿಜೆಪಿ 225 ಸ್ಥಾನಗಳನ್ನು ಗೆದ್ದುಕೊಂಡಿತ್ತು.ಇವುಗಳಲ್ಲಿ ಅರ್ಧಕ್ಕೂ ಹೆಚ್ಚು ಕಾಂಗ್ರೆಸ್ ನಿಂದ ಕಸಿದುಕೊಂಡ ಸೀಟುಗಳಾಗಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com