ಕೊಲ್ಕತ್ತಾಕ್ಕೆ ಭೇಟಿ ನೀಡಲು ಯೋಗಿ ಆದಿತ್ಯನಾಥ್ ಗೆ ಅನುಮತಿ ನಿರಾಕರಣೆ- ಬಿಜೆಪಿ
ಲಖನೌ: ಚುನಾವಣಾ ಪ್ರಚಾರಕ್ಕಾಗಿ ಕೊಲ್ಕತ್ತಾಗೆ ಭೇಟಿ ನೀಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೆ ಪ್ರವೇಶ ನಿರಾಕರಣೆ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಪ್ರವೇಶ ನಿರಾಕರಿಸಲಾಗಿದೆ ಎಂದು ಪಕ್ಷದ ಉನ್ನತ ನಾಯಕರೊಬ್ಬರು ಹೇಳಿದ್ದಾರೆ.
ಸ್ಥಳೀಯ ಜಿಲ್ಲಾಡಳಿತದಿಂದ ಪ್ರವೇಶ ನಿರಾಕರಣೆ ಹಿನ್ನೆಲೆಯಲ್ಲಿ ಮೇ 15 ರಂದು ದಕ್ಷಿಣ ಪಶ್ಚಿಮ ಕೊಲ್ಕತ್ತಾದಲ್ಲಿನ ಬೆಹಾಲದ ಜೆಮ್ಸ್ ಲಾಂಗ್ ಸರಾಣಿ ಬಳಿ ಆಯೋಜಿಸಲಾಗಿದ್ದ ಆದಿತ್ಯನಾಥ್ ಅವರ ಚುನಾವಣಾ ಪ್ರಚಾರ ಸಭೆಯನ್ನು ರದ್ದುಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೇ 19 ರಂದು ನಡೆಯಲಿರುವ ಕೊನೆಯ ಹಂತದ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೇ 15 ರಂದು ಉತ್ತರ 24 ಪರಗಣ ಜಿಲ್ಲೆಯ ಹಬ್ರಾ ಮತ್ತು ಉತ್ತರ ಕೊಲ್ಕತ್ತಾದ ಪೊಲ್ ಬಾಗನ್ ನಲ್ಲಿ ಯೋಗಿ ಆದಿತ್ಯನಾಥ್ ಅವರ ಪ್ರಚಾರ ಸಭೆಯನ್ನು ಆಯೋಜಿಸಲಾಗಿತ್ತು ಎಂದು ಪಕ್ಷದ ಮೂಲಗಳು ಹೇಳಿವೆ.
ಯೋಗಿ ಆದಿತ್ಯನಾಥ್ ಅವರಂತೆ ಜಾದವ್ ಪುರದಲ್ಲಿ ಇಂದು ಆಯೋಜಿಸಲಾಗಿದ್ದ ಅಮಿತ್ ಶಾ ಅವರ ಚುನಾವಣಾ ಪ್ರಚಾರ ಸಭೆ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.
ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಹಾಸ್ಯದಂತಿದೆ. ಕೊನೆಯ ಗಳಿಗೆಯಲ್ಲಿ ಜಾದವ್ ಪುರದಲ್ಲಿ ಅಮಿತ್ ಶಾ ಅವರ ಚುನಾವಣಾ ಪ್ರಚಾರಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ. ದಕ್ಷಿಣ ಕೊಲ್ಕತ್ತಾದಲ್ಲಿ ಯೋಗಿ ಆದಿತ್ಯನಾಥ್ ಅವರ ಕಾರ್ಯಕ್ರಮಕ್ಕೂ ಪ್ರವೇಶ ನಿರಾಕರಿಸಲಾಗಿದೆ. ಡಿಎಂ ಹಾಗೂ ಸಿಇಒ ಟಿಎಂಸಿ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸುನೀಲ್ ದೇವಧರ್ ಟ್ವೀಟ್ ಮಾಡಿದ್ದಾರೆ.
ಆದಾಗ್ಯೂ, ಕಡಿಮೆ ಮತದಾರರ ಭಯದಿಂದಾಗಿ ಬಿಜೆಪಿ ಶಾ ಅವರ ಚುನಾವಣಾ ಪ್ರಚಾರ ಸಭೆಯನ್ನು ರದ್ದುಪಡಿಸಿದೆ ಎಂದು ಟಿಎಂಸಿ ಹೇಳಿಕೆ ನೀಡಿದೆ. ಆದರೆ, ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರ ಸಭೆ ರದ್ದಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ