ಟಿಎಂಸಿ ಗೂಂಡಾಗಳು ವಿದ್ಯಾಸಾಗರ್ ಪ್ರತಿಮೆ ಧ್ವಂಸಗೊಳಿಸಿದ್ದು, ಬಿಜೆಪಿಯವರಲ್ಲ: ಅಮಿತ್ ಶಾ

ಕೋಲ್ಕತ್ತಾದಲ್ಲಿ ಬಿಜೆಪಿ ರ್ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ತೃಣಮೂಲ ಕಾಂಗ್ರೆಸ್ ಕಾರಣ, ಇದು ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಬಹಿರಂಗ ದಾಳಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ...
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ
ನವದೆಹಲಿ: ಕೋಲ್ಕತ್ತಾದಲ್ಲಿ ಬಿಜೆಪಿ ರ್ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ತೃಣಮೂಲ ಕಾಂಗ್ರೆಸ್ ನೇರ ಕಾರಣ, ಇದು ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಬಹಿರಂಗ ದಾಳಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇರವಾಗಿ ಆರೋಪಿಸಿದ್ದಾರೆ.
ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಯ ರಕ್ಷಣೆ ಸಿಗದಿದ್ದದ್ದರೆ ತಾವು ಜೀವಂತವಾಗಿ ವಾಪಸ್ಸು ಬರುತ್ತಿರಲಿಲ್ಲ. ರೋಡ್ ಶೋ ನಡೆಸುತ್ತಿದ್ದ ವೇಳೆ ಟಿಎಂಸಿ ಕಾರ್ಯಕರ್ತರು ನಮ್ಮ ಮೇಲೆ ದಾಳಿ ಮಾಡಿದರು ಎಂದು ಅಮಿತ್ ಶಾ ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಕೋಲ್ಕತಾದಲ್ಲಿ ನಿನ್ನೆ ನಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ವೇಳೆ ಆಡಳಿತರೂಢ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಘರ್ಷಣೆ ಉಂಟಾಗಿ ಹಿಂಸಾಚಾರ ನಡೆದಿತ್ತು. ಬಂಗಾಳಿ ಲೇಖಕ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು.
ಈ ಸಂಬಂಧ ಘಟನೆಯ ವಿವರ ನೀಡಲು ದೆಹಲಿಯಲ್ಲಿಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ಘಟನೆ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಸಿಆರ್ ಪಿಎಫ್ ಯೋಧರು ತಮ್ಮನ್ನು ರಕ್ಷಿಸಲು ಯತ್ನಿಸುತ್ತಿರುವಾಗ ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದರು ಎಂದು ಸಾಕ್ಷಿಯಾಗಿ ಫೋಟೋಗಳನ್ನು ಪ್ರದರ್ಶಿಸಿದರು.
ಲೇಖಕ ಈಶ್ವರಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದರ ಹಿಂದೆ ಟಿಎಂಸಿ ಕಾರ್ಯಕರ್ತರ ಪಿತೂರಿಯಿದೆ. ರೋಡ್ ಶೋ ಮುಗಿಯುವವರೆಗೆ ವಿದ್ಯಾಸಾಗರ ಕಾಲೇಜಿನ ಗೇಟ್ ಬಂದ್ ಆಗಿತ್ತು. ನಂತರ ಗೇಟ್ ತೆರೆದು ಮೂರ್ತಿಯನ್ನು ಧ್ವಂಸ ಮಾಡಿದವರು ಯಾರು ಎಂದು ಗೊತ್ತಾಗಬೇಕಿದೆ. ವಿದ್ಯಾಸಾಗರ ಅವರ ಮೂರ್ತಿ ಧ್ವಂಸದ ವಿಚಾರ ಕೇಳಿ ತೀವ್ರ ನೊಂದಿದ್ದೇನೆ ಎಂದರು.
ಈ ಲೋಕಸಭೆ ಚುನಾವಣೆಯಲ್ಲಿ ಪಶ್ಟಿಮ ಬಂಗಾಳದಲ್ಲಿ ಟಿಎಂಸಿ ಸೋಲುವುದು ಖಚಿತವಾಗಿದ್ದು, ಬಿಜೆಪಿಯ ಕೀರ್ತಿ ಉತ್ತುಂಗಕ್ಕೇರುತ್ತಿದೆ. ಇದನ್ನು ನೋಡಿ ಮಮತಾ ಬ್ಯಾನರ್ಜಿಯವರಿಗೆ ಸಹಿಸಲಾಗುತ್ತಿಲ್ಲ. ಅದಕ್ಕಾಗಿ ಬಿಜೆಪಿಗೆ ಕಳಂಕ ತರಲು ಹೀಗೆಲ್ಲಾ ಮಾಡುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪಶ್ಚಿಮ ಬಂಗಾಳದ ಚುನಾವಣಾ ಆಯೋಗ ಮಾತ್ರ ಮೂಕ ಪ್ರೇಕ್ಷಕನಂತೆ ಕುಳಿತಿದೆ ಎಂದು ಆಪಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com