ಮತ ಎಣಿಕೆಗೆ ಕ್ಷಣಗಣನೆ, ರಾಜಕೀಯ ನಾಯಕರಲ್ಲಿ ಗರಿಗೆದರಿದ ನಿರೀಕ್ಷೆ; ಮೈತ್ರಿ ಪಕ್ಷಗಳಲ್ಲಿ ತಳಮಳ

ಲೋಕಸಭೆ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜಕೀಯ ನಾಯಕರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಯಾರು ಗೆಲ್ಲಲಿದ್ದಾರೆ, ಯಾರಿಗೆ ಸೋಲು
ಮತ ಎಣಿಕೆಗೆ ಕ್ಷಣಗಣನೆ, ರಾಜಕೀಯ ನಾಯಕರಲ್ಲಿ ಗರಿಗೆದರಿದ ನಿರೀಕ್ಷೆ; ಮೈತ್ರಿ ಪಕ್ಷಗಳಲ್ಲಿ ತಳಮಳ
ಬೆಂಗಳೂರು: ಲೋಕಸಭೆ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜಕೀಯ ನಾಯಕರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಯಾರು ಗೆಲ್ಲಲಿದ್ದಾರೆ, ಯಾರಿಗೆ ಸೋಲು ಎನ್ನುವ ಕುತೂಹಲ ಮನೆ ಮಾಡಿದೆ. ಫಲಿತಾಂಶದ ಕೌತುಕಕ್ಕೆ ಎಲ್ಲರೂ ಕಾತರರಾಗಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಒಂದಾಗಿ ಮೈತ್ರಿ ಮೂಲಕ ಬಿಜೆಪಿ ವಿರುದ್ಧ ಚುನಾವಣಾ ಅಖಾಡದಲ್ಲಿ ಸೆಣೆಸಿದ್ದು ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಹೊಂದಿದೆ. ಆದರೆ ಲೋಕಸಭಾ ಚುನಾವಣಾ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ಮೇಲುಗೈ ಸಾಧಿಸಲಿವೆ ಎಂಬ ವರದಿಗಳು ರಾಜ್ಯದ ಮೈತ್ರಿ ನಾಯಕರಲ್ಲಿ ತಲ್ಲಣ ಸೃಷ್ಟಿಸಿವೆ.
ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷಗಳಲ್ಲಿ ಕಾಂಗ್ರೆಸ್ 21 ಕ್ಷೇತ್ರ ಹಾಗೂ ಜೆಡಿಎಸ್ 7 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.
ಈ ಬಾರಿಯ ಚುನಾವಣಾ ಅಖಾಡದಲ್ಲಿ ಘಟನಾನುಘಟಿ ನಾಯಕರು ತಮ್ಮ ರಾಜಕೀಯ ಭವಿಷ್ಯವನ್ನು ಪಣಕ್ಕಿಟ್ಟಿದ್ದರು. ಬಿಜೆಪಿಯಿಂದ ಸಂಸದ ಹಾಗೂ ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ರಮೇಶ್ ಜಿಗಜಿಣಗಿ, ಅನಂತ್ ಕುಮಾರ್ ಹೆಗಡೆ, ಹಾಗೂ ಸಂಸದರಾದ ಸುರೇಶ್ ಅಂಗಡಿ, ಪಿ.ಸಿ. ಗದ್ದಿಗೌಡರ, ಪ್ರಹ್ಲಾದ್ ಜೋಶಿ , ಭಗವಂತ ಖೂಬಾ , ಕರಡಿ ಸಂಗಣ್ಣ, ಶಿವಕುಮಾರ್ ಉದಾಸಿ, ಜಿ.ಎಂ. ಸಿದ್ದೇಶ್ವರ್ , ಶೋಭಾ ಕರಂದ್ಲಾಜೆ, ನಳೀನ್ ಕುಮಾರ್ ಕಟೀಲು , ಪ್ರತಾಪ್ ಸಿಂಹ , ಪಿ.ಸಿ. ಮೋಹನ್ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಹೋರಾಟ ನಡೆಸಿದ್ದರು. 
ಇದರ ಹೊರತಾಗಿ ಬೆಂಗಳೂರು ಉತ್ತರದಿಂದ ತೇಜಸ್ವಿ ಸೂರ್ಯ, ಕೋಲಾರದಿಂದ ಎಸ್. ಮುನಿಸ್ವಾಮಿ (ಬಿಬಿಎಂಪಿ ಸದಸ್ಯರು), ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ, ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಮಾಜಿ ಸಂಸದ ಜಿ.ಎಸ್. ಬಸವರಾಜು, ಮಾಜಿ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಸಚಿವ ಎ. ಮಂಜು, ಅಣ್ಣಾ ಸಾಹೇಬ್ ಜೊಲ್ಲೆ , ದೇವೇಂದ್ರಪ್ಪ , ರಾಜಾ ಅಮರೇಶ್ ನಾಯಕ್ ಬಿಜೆಪಿಯಿಂದ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ.
ಇನ್ನೊಂದೆಡೆ ಮೈತ್ರಿ ಪಕ್ಷದ ಕಾಂಗ್ರೆಸ್ ಸಂಸದರಾದ ಪ್ರಕಾಶ್ ಹುಕ್ಕೇರಿ, ಮಲ್ಲಿಕಾರ್ಜುನ ಖರ್ಗೆ, ಬಿ.ವಿ. ನಾಯಕ್, ವಿ.ಎಸ್. ಉಗ್ರಪ್ಪ, ಬಿ.ಎನ್. ಚಂದ್ರಪ್ಪ, ಆರ್. ಧೃವನಾರಾಯಣ, ಡಿ.ಕೆ. ಸುರೇಶ್ , ವೀರಪ್ಪ ಮೊಯ್ಲಿ , ಕೆ.ಎಚ್. ಮುನಿಯಪ್ಪ ರಾಜಕೀಯದ ಭವಿಷ್ಯ ನಾಳೆ ನಿರ್ಧಾರವಾಗಲಿದೆ. 
ಜಡಿಎಸ್ ನಿಂದ ಹಾಲಿ ಸಂಸದ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಸನ ಕ್ಷೇತ್ರ ಬಿಟ್ಟು ತುಮಕೂರಿನಿಂದ ರಾಜಕೀಯ ಭವಿಷ್ಯ ಕಂಡುಕೊಳ್ಳುತ್ತಿದ್ದು, ಚುನಾವಣೆಗೆ ಸ್ಪರ್ಧಿಸಿರುವ ಏಕೈಕ ಮಾಜಿ ಪ್ರಧಾನಿ ಇವರಾಗಿದ್ದಾರೆ. ಇವರ ಹಣೆ ಬರಹವನ್ನು ತುಮಕೂರು ನಿರ್ಧರಿಸಿದ್ದು, ನಾಳೆ ಮಧ್ಯಾಹ್ನದ ವೇಳೆಗೆ ಅವರ ಭವಿಷ್ಯ ನಿರ್ಧಾರವಾಗಲಿದೆ. 
ಉಳಿದಂತೆ ಕಾಂಗ್ರೆಸ್ ಪಕ್ಷದಿಂದ ಸಿ.ಎಚ್.ವಿಜಯ ಶಂಕರ್, ವೀಣಾ ಕಾಶಪ್ಪನವರ್, ಈಶ್ವರ್ ಖಂಡ್ರೆ , ರಾಜಶೇಖರ್ ಹಿಟ್ನಾಳ್ , ಸಚಿವ ಕೃಷ್ಣ ಬೈರೇಗೌಡ , ರಿಜ್ವಾನ್ ಅರ್ಷದ್ , ಬಿ.ಕೆ. ಹರಿಪ್ರಸಾದ್ ಅವರ ಭವಿಷ್ಯ ನಿರ್ಧಾರವಾಗಲಿದೆ. ಜೆಡಿಎಸ್ ವರಿಷ್ಟ ದೇವೇಗೌಡರ ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಸಂಸತ್ತಿಗೆ ಪ್ರವೇಶಿಸಲಿದ್ದಾರೆ ಎನ್ನುವುದು ಸಹ ಇದೇ ಸಂದರ್ಭದಲ್ಲಿ ನಿರ್ಧಾರವಾಗಲಿದೆ. ಉಳಿದಂತೆ ಮಧು ಬಂಗಾರಪ್ಪ, ಆನಂದ್ ಆಸ್ನೋಟಿಕರ್, ಪ್ರಮೋದ್ ಮಧ್ವರಾಜ್ ಕೂಡ ಮೈತ್ರಿ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.
ರಾಜ್ಯದಲ್ಲಿ ಅತ್ಯಂತ ಪ್ರತಿಷ್ಠೆಯ ಹಾಗೂ ಭಾರೀ ಕುತೂಹಲ ಕೆರಳಿಸಿರುವ ಕ್ಷೇತ್ರ ಮಂಡ್ಯ. ಇಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಮೈತ್ರಿ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಪ್ರಬಲ ಪೈಪೋಟಿ ನೀಡಿದ್ದಾರೆ. ಉಳಿದಂತೆ ಹಾಸನದಲ್ಲಿ ಸಚಿವ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಎದುರು ಮಾಜಿ ಸಚಿವ ಹಾಗೂ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿರುವ ಎ. ಮಂಜು, ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ಬಿಜೆಪಿಯ ಮಾಜಿ ಸಂಸದ ಜಿ.ಎಸ್. ಬಸವರಾಜ್, ಕಲಬುರುಗಿಯಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಾಂಗ್ರೆಸ್ ತ್ಯಜಿಸಿ ಬಿಜೆಪಿಯಿಂದ ಕಣಕ್ಕಿಳಿದಿರುವ ಡಾ. ಉಮೇಶ್ ಜಾದವ್, ಬೀದರ್ ನಲ್ಲಿ ಸಂಸದ ಭಗವಂತ ಖೂಬಾ ವಿರುದ್ಧ ಕಾಂಗ್ರೆಸ್ ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಿವಮೊಗ್ಗದಲ್ಲಿ ಮಾಜಿ ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಮಾಜಿ ಶಾಸಕ ಮಧು ಬಂಗಾರಪ್ಪ, ಬೆಂಗಳೂರು ಉತ್ತರದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ವಿರುದ್ಧ ಸಚಿವ ಕೃಷ್ಣ ಬೈರೇಗೌಡ, ಕೋಲಾರದಲ್ಲಿ ಸಂಸದ ಕೆ.ಎಚ್. ಮುನಿಯಪ್ಪ ವಿರುದ್ಧ ಕಾರ್ಪೊರೇಟರ್ ಆಗಿರುವ ಎಸ್. ಮುನಿಸ್ವಾಮಿ ಧಾರವಾಡದಿಂದ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಕಾಂಗ್ರೆಸ್ ನ ಮಾಜಿ ಸಚಿವ ವಿನಯ್ ಕುಲಕರ್ಣಿ, ಬಳ್ಳಾರಿಯಲ್ಲಿ ಸಂಸದ ವಿ.ಎಸ್. ಉಗ್ರಪ್ಪ ವಿರುದ್ಧ ದೇವೇಂದ್ರಪ್ಪ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಇವೆಲ್ಲಾ ಕ್ಷೇತ್ರಗಳ ಫಲಿತಾಂಶ ಸಾಕಷ್ಟು ಕುತೂಹಲ ಕೆರಳಿಸಿದೆ.
ಏ.18 ಹಾಗೂ ಏ.23ರಂದು ನಡೆದ ಎರಡು ಹಂತಗಳಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಒಟ್ಟು 3,50,31,495 ಮಂದಿ ಚಲಾವಣೆ ಮಾಡಿದ್ದು ಶೇ.68.61ರಷ್ಟು ಮತದಾನವಾಗಿತ್ತು. ಮಂಡ್ಯದಲ್ಲಿ ಅತಿ ಹೆಚ್ಚು ಶೇ.80.23, ದಕ್ಷಿಣ ಕನ್ನಡದಲ್ಲಿ ಶೇ. 77.90 ಹಾಗೂ ತುಮಕೂರು ಕ್ಷೇತ್ರದಲ್ಲಿ ಶೇ.77.90ರಷ್ಟು ಮತದಾನವಾಗಿದ್ದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ. 53.47ರಷ್ಟು ಮತದಾನವಾಗಿದೆ.
ರಾಜ್ಯದಲ್ಲಿ ಒಟ್ಟು 28 ಮತ ಎಣಿಕಾ ಕೇಂದ್ರಗಳಿದ್ದು, 28 ಚುನಾವಣಾಧಿಕಾರಿಗಳು, 258 ಸಹಾಯಕ ಚುನಾವಣಾಧಿಕಾರಿಗಳು ಸೇರಿ 11 ಸಾವಿರದಷ್ಟು ಚುನಾವಣಾ ಸಿಬ್ಬಂದಿಯನ್ನು ಮತ ಎಣಿಕೆಗೆ ನಿಯೋಜಿಸಲಾಗಿದೆ. 28 ಮತ ಎಣಿಕೆ ಕೇಂದ್ರಗಳಲ್ಲಿ 3,223 ಎಣಿಕೆ ಟೇಬಲ್ ಗಳನ್ನು ಹಾಕಲಾಗಿದ್ದು, ಒಟ್ಟು 4,215 ಸುತ್ತಿನ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಪ್ರತಿ ಸುತ್ತಿನ ಎಣಿಕೆಗೂ ಸರಾಸರಿ 20 ನಿಮಿಷದ ಅವಧಿ ಹಿಡಿಯುತ್ತದೆ. ಈ ಲೆಕ್ಕಾಚಾರದ ಅನುಸಾರ, ಮಧ್ಯಾಹ್ನ 12ರ ಸುಮಾರಿಗೆ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆದರೆ, ನಂತರ, ಪ್ರತಿ ವಿಧಾನಸಭಾ ವ್ಯಾಪ್ತಿಯಲ್ಲಿ 5 ವಿವಿಪ್ಯಾಟ್ ರಸೀತಿಯನ್ನು ಲೆಕ್ಕ ಹಾಕಬೇಕಿರುವುದರಿಂದ ಫಲಿತಾಂಶ ಪ್ರಕಟಣೆ ನಾಲ್ಕು ಗಂಟೆಗಳ ಕಾಲ ವಿಳಂಬವಾಗಲಿದೆ ಎನ್ನಲಾಗಿದೆ.
ಮೇ 23ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದೆ. ಮೊದಲ ಅರ್ಧ ಗಂಟೆ ಅಂಚೆ ಮತಗಳ ಎಣಿಕೆ ನಡೆಯಲಿದೆ. ನಂತರ, ಇವಿಎಂ ಯಂತ್ರಗಳ ಮತ ಎಣಿಕೆ ಆರಂಭವಾಗಲಿದೆ. ಈ ಬಾರಿ ವಿಶೇಷ ಮೆಸೆಂಜರ್ ವ್ಯವಸ್ಥೆ ಅಳವಡಿಸಿದ್ದು, ಅಂಚೆ ಮತದಾನದಿಂದ ಇಲ್ಲಿಯವರೆಗೆ ಒಟ್ಟು 98, 606 ಅಂಚೆ ಮತಗಳನ್ನು ಸ್ವೀಕರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com