ಇದು ಪ್ರಜಾಪ್ರಭುತ್ವ - ಸರ್ವಾಧಿಕಾರದ ನಡುವಿನ ಚುನಾವಣೆ: ಸಿದ್ದರಾಮಯ್ಯ

ಈ ಬಾರಿಯ ಲೋಕಸಭಾ ಚುನಾವಣೆ ರಾಹುಲ್- ಮೋದಿ ನಡುವಣ ಚುನಾವಣೆಯಲ್ಲ, ಪ್ರಜಾಪ್ರಭುತ್ವ ಹಾಗೂ ಸರ್ವಾಧಿಕಾರದ ನಡುವಿನ ಚುನಾವಣೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಪ್ರೆಸ್ ಕ್ಲಬ್ ಸಂವಾದದಲ್ಲಿ  ಸಿದ್ದರಾಮಯ್ಯ
ಪ್ರೆಸ್ ಕ್ಲಬ್ ಸಂವಾದದಲ್ಲಿ ಸಿದ್ದರಾಮಯ್ಯ
Updated on
ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆ ರಾಹುಲ್- ಮೋದಿ ನಡುವಣ ಚುನಾವಣೆಯಲ್ಲ, ಪ್ರಜಾಪ್ರಭುತ್ವ ಹಾಗೂ ಸರ್ವಾಧಿಕಾರದ ನಡುವಿನ ಚುನಾವಣೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಇಂದು ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ನಾಯಕತ್ವದಲ್ಲಿ ಬಿಜೆಪಿ ಐದು ವರ್ಷ ಪೂರೈಸಿದೆ. ಮೋದಿ ಐದು ವರ್ಷದ ಸಾಧನೆ ಒರೆಗೆ ಹಚ್ಚುವ ಸ್ಥಿತಿ ಇದೆ. ಹೇಳಿದ್ದೇನು? ಮಾಡಿದ್ದೇನು? ಎನ್ನುವುದನ್ನು ಜನರ ಮುಂದಿಡುವುದು ಸರ್ಕಾರದ ಕರ್ತವ್ಯ ಎಂದರು. 
ಸಂವಿಧಾನದ ಉಳಿವು ಮುಖ್ಯ.
 ಮೋದಿ ಸರ್ಕಾರದ ಸಾಧನೆ, ಅಭಿವೃದ್ಧಿ, ಜನರ ಬಗ್ಗೆ ಮಾತಾಡಿದ್ದು ವಿರಳ. ಭಾವನಾತ್ಮಕ ವಿಚಾರದ ಬಗ್ಗೆ, ಪ್ರತಿಪಕ್ಷಗಳ ಮಹಾಘಟಬಂಧನ್, ದೇಶದ ರಕ್ಷಣೆ ವಿಚಾರಗಳ ಮಾತಿಗೆ ಒತ್ತು ಕೊಡುತ್ತಿದ್ದಾರೆ. ಏನು ಹೇಳಿದ್ದೇವೆ ಮತ್ತು ಏನು ಮಾಡಿದ್ದೇವೆ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ. ಐದು ವರ್ಷ ಭ್ರಮಾಲೋಕ ಸೃಷ್ಟಿಸಿ ಜನರನ್ನು ಮರಳು ಮಾಡಿದ್ದರು. ಜನ ಕೂಡ ಬದಲಾವಣೆ ಬಯಸಿದ್ದರು. ಇದರ ಲಾಭ ಮೋದಿಗೆ ಸಿಕ್ಕಿತು. ಆಕರ್ಷಣೆಯ ಮಾತಿಗೆ ಜನ ಮರಳಾಗಿ ಕಳೆದ ಬಾರಿ ಅಧಿಕಾರ ಕೊಟ್ಟಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಂದಿಗೂ ಇಂದಿಗೂ ಬಹಳ ವ್ಯತ್ಯಾಸ ಇದೆ. ಜನರನ್ನು ಈಗ ನಂಬಿಸಲು, ಮೋಸಗೊಳಿಸಲು ಸಾಧ್ಯವಿಲ್ಲ. ದೇಶದ ಜನ ರಾಜಕೀಯವಾಗಿ ಪ್ರಬುದ್ಧರಾಗಿದ್ದಾರೆ ಎಂದರು.
ಕೊಟ್ಟ ಭರವಸೆ ಏನಾಯಿತು?
ಸರ್ಜಿಕಲ್ ಸ್ಟ್ರೈಕ್ ಅನ್ನು ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇದರಿದಲೇ ಚುನಾವಣೆ ಗೆಲ್ಲಲು ಸಾಧ್ಯ ಎಂದು ಭಾವಿಸಿಕೊಂಡರೆ ಅದು ಮೂರ್ಖತನವಾಗಲಿದೆ. ನೀವು ಕೊಟ್ಟ ಭರವಸೆ ಏನಾಯಿತು.? ಜನರ ಖಾತೆಗಳಿಗೆ 15 ಲಕ್ಷ ರೂ. ಹಾಕುವ ವಿಚಾರ ಎಲ್ಲಿಗೆ ಬಂತು? ನೋಟು ಅಮಾನ್ಯದ ನಂತರ ಎಷ್ಟು ಕಪ್ಪು ಹಣ ಪತ್ತೆಯಾಯಿತು? ಯಾರ ವಿರುದ್ಧ ಕ್ರಮ ಕೈಗೊಂಡಿರಿ. ಇದರಿಂದ ದೇಶದ ವರಮಾನ ಕಡಿಮೆಯಾಗಲಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನುಡಿದಿದ್ದ ಭವಿಷ್ಯ ನಿಜವಾಗಿದೆ ಎಂದರು.
ದೇಶ, ಪ್ರಧಾನಿ ಮೋದಿ ಕೈಯಲ್ಲಿ ಸುರಕ್ಷಿವಾಗಿದೆ ಎಂಬ ವಾದ ಹಬ್ಬಿಸಲಾಗಿದೆ. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಟ್ಟು, ಭಾವನಾತ್ಮಕ ವಿಚಾರದ ಮೂಲಕ ಮರೆಮಾಚಲು ಹೋದರೆ, ಒಂದಲ್ಲ ಒಂದು ದಿನ ಜನರ ಮುಂದೆ ಬಣ್ಣ ಬಯಲಾಗಲೇ ಬೇಕು ಎಂದರು. 
ಸಾಲಮನ್ನಾ ಮಾಡಲಿಲ್ಲ 
ಪ್ರಜಾಪ್ರಭುತ್ವ ಇವತ್ತು ಉಳಿಯಬೇಕಿದೆ. ಸಿಬಿಐ, ಸಿಇಸಿ, ನ್ಯಾಯಾಧೀಶರು ಕೂಡ ಅಸಮಾಧಾನ ತೋಡಿಕೊಂಡು ಬೀದಿಗೆ ಬರುವಂತಾಗಿದೆ. ನ್ಯಾಯಾಲಯಗಳಲ್ಲಿ ಸತ್ಯ ಹೇಳುವುದು ಕಷ್ಟ ಆಗುತ್ತಿದೆ. ಮಾತು ಎತ್ತಿದರೆ ಎಲ್ಲರೂ ಚೌಕಿದಾರ್ ಎನ್ನುತ್ತಾರೆ. ಇದು ಒಂದು ರೀತಿಯ ಚಟವಾಗಿದೆ. ಯಡಿಯೂರಪ್ಪ ,ಈಶ್ವರಪ್ಪ, ಎಲ್ಲರೂ ಕೂಡ ಚೌಕಿದಾರ್ ಆಗಿದ್ದಾರೆ . ಸಾಮಾಜಿಕ ಬದ್ಧತೆ ಇವರಿಗೆ ಎಷ್ಟಿದೆ? ಎಲ್ಲಕ್ಕೂ ಉತ್ತರ ಕೊಡಿ. ಸಂವಿಧಾನ ಬದಲಿಸಿ ಎಲ್ಲರಿಗೂ ಸಮಾನತೆ ಇಲ್ಲದಂತೆ ಮಾಡಲು ಹೊರಟಿದ್ದಾರೆ. ಸಂವಿಧಾನ ರಕ್ಷಣೆ ವಿಚಾರದಲ್ಲಿ ಆತಂಕ ಶುರುವಾಗಿದೆ. ಸಂವಿಧಾನಾತ್ಮಕ ಸಂಸ್ಥೆ ದುರ್ಬಲಗೊಳಿಸುವ ಜತೆಗೆ ಸಾಮಾನ್ಯ ಜನರಿಗೆ ಭದ್ರತೆ ನೀಡುವ ಕಾರ್ಯ ಮಾಡಿಲ್ಲ ಎಂದರು.
ಸರ್ಕಾರ ನಡೆಸಿ ಐದು ವರ್ಷದ ನಂತರ ಮೋದಿ ಅವರಿಗೆ ರೈತರು ಈಗ ನೆನಪಾಗಿದ್ದಾರೆ. ರಾಹುಲ್ ಗಾಂಧಿ ಕನಿಷ್ಠ 12 ಸಾವಿರ ರೂ. ಕನಿಷ್ಠ ಆದಾಯ ಇರಬೇಕು, ಅದಿಲ್ಲದವರಿಗೆ ವಾರ್ಷಿಕ 72 ಸಾವಿರ ರೂ. ನೀಡುವ ಕನಿಷ್ಠ ಆದಾಯ ಖಾತರಿ (ನ್ಯಾಯ್) ಯೋಜನೆ ತರಲಿದ್ದಾರೆ. 25 ಕೋಟಿ ಬಡವರಿಗೆ 3.5 ಲಕ್ಷ ಕೋಟಿ ಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ  ವಿರೋಧಿ ವ್ಯಕ್ತಪಡಿಸಲಾಗುತ್ತಿದೆ. ನರೇಂದ್ರ ಮೋದಿಯ ಚೌಕಿದಾರ್ ಯಾರ ಅನುಕೂಲಕ್ಕೆ ಬರುತ್ತದೆ. ಇವರು ಯಾರಿಗೆ ಚೌಕಿದಾರ್ ? ಇಂಧನ ಬೆಲೆ ಇಳಿಯುತ್ತಿಲ್ಲ , ಕಚ್ಚಾತೈಲ ಬೆಲೆ ಇಳಿದಾಗ ಬೆಲೆ ಇಳಿಸದೇ ಉಳಿತಾಯವಾದ ಹಣ ಜನರಿಗೆ ಯಾಕೆ ಸಿಕ್ಕಿಲ್ಲ. ಅಚ್ಚೇದಿನ್ ಯಾರಿಗೆ ಬಂತು? ರಾಜ್ಯದಲ್ಲಿ ದಲಿತರಿಗೆ ಜನಸಂಖ್ಯೆ ಗೆ ಅನುಗುಣವಾಗಿ ಹಣ ಸಿಗುವಂತೆ ನಾವು ಮಾಡಿದ್ದೇವೆ. ಕಾಳಜಿ ಇದ್ದರೆ ಇಂಥ ಕೆಲಸವನ್ನು ಮೋದಿ ಏಕೆ ಮಾಡಲಿಲ್ಲ? ಜನರಿಗೆ ಐದು ವರ್ಷದಲ್ಲಿ ಏನೂ ಮಾಡಿಲ್ಲ, ಪುಲ್ವಾಮಾ ಘಟನೆ ಪ್ರಸ್ತಾಪ, ರಾಮಮಂದಿರ ನಿರ್ಮಾಣದ ವಿಚಾರ ಪ್ರಸ್ತಾಪ ಮಾಡುತ್ತಲೇ ಇದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ನಾವು ವಿರೋಧಿಸುತ್ತಿಲ್ಲ. ಆದರೆ ಇವರ ಘೋಷಣೆ ಮಾತಿಗೆ ಮಾತ್ರ ಸೀಮಿತವಾಗಿದೆ. ಯಾರಿಗೆ ಇವರು ಸೇವಕ? ಸಬ್ ಸಾಥ್ ಸಬ್ ಕಾ ವಿಕಾಸ್ ಅಂದರು. ಅದು ಆಯಿತಾ? ಜನರ ಮುಂದೆ ಪ್ರಸ್ತಾಪಿಸುವ ಬದಲು ಚೌಕಿದಾರ್, 56 ಇಂಚಿನ ಎದೆ ತೋರಿಸಿದರೆ ಹೊರತು ಜನರ ಸಮಸ್ಯೆ ಬಗ್ಗೆ ಮಾತಾಡಲಿಲ್ಲ ಎಂದು ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಯಡಿಯೂರಪ್ಪ, ಮೋದಿ ನಮ್ಮ ವೈರಿಯಲ್ಲ: 
ಕೋಮುವಾದಿ ಬಿಜೆಪಿ ಪಕ್ಷ ನಮ್ಮ ವಿರೋಧಿ, ವೈರಿಯೇ ಹೊರತು ವೈಯಕ್ತಿಕವಾಗಿ ಯಡಿಯೂರಪ್ಪ, ಮೋದಿ ನಮ್ಮ ವೈರಿಯಲ್ಲ.  ಸಮ್ಮಿಶ್ರ ಸರ್ಕಾರ ಚುನಾವಣೆ ನಂತರವೂ ಉಳಿಯಲಿದೆ. ಯಡಿಯೂರಪ್ಪ ಕೇವಲ ಸಿಂ ಆಗುವ ಕನಸು ಕಾಣುತ್ತಿದ್ದಾರೆ. ಅದು ಈಡೇರದು. ಈ ಬಾರಿ  ಬಿಜೆಪಿ ಸೋಲಲಿದೆ. ಮೋದಿ ಮತ್ತೆ ಪ್ರಧಾನಿ ಆಗಲ್ಲ, ಯುಪಿಎ ಅಧಿಕಾರಕ್ಕೆ ಬರಲಿದೆ, ರಾಹುಲ್ ಪ್ರಧಾನಿ ಆಗಲಿದ್ದಾರೆ. ಮೈತ್ರಿ ಗೆ ಬೆಂಬಲ‌ಸಿಗಲಿದೆ. ಬಿಜೆಪಿ ನೆಲೆ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.
ಈ ಸಾರಿ ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳು 20 ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದಾರೆ ಇತ್ತೀಚಿನ ದಿನಗಳಲ್ಲಿ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಸೋಲು ಹೆಚ್ಚಾಗಿದೆ. ಮೋದಿ ಪ್ರಧಾನಿ ಆಗಲು ಸಾಧ್ಯವಿಲ್ಲ. ಇವಿಎಂ ಬಗ್ಗೆ ಈಗಲೂ ತಕರಾರು ಇದೆ. ಪರ- ವಿರೋಧ ಮಾತಿದೆ. ಈಗ ಅದನ್ನು ಬಿಟ್ಟುಬಿಡಿ. ನಮಗೆ ಅನುಮಾನ ಇಂದಿಗೂ ಇದ್ದೇ ಇದೆ. ನಾವು ಎಲ್ಲೆಡೆ ಗೆಲ್ಲುತ್ತೇವೆ. ಮತ್ತೆ ಮತ್ತೆ ಪ್ರಸ್ತಾಪ ಬೇಡ ಎಂದರು. 
ಸಮನ್ವಯ ಸಮಿತಿ ಅಧ್ಯಕ್ಷರಾಗಿ ಹೇಗೆ ಮುಂದುವರಿಯುತ್ತೀರಿ ಎಂಬ ಪ್ರಶ್ನೆಗೆ, ನಾವು ಎರಡೂ ಪಕ್ಷ ದವರು ಒಟ್ಟಾಗಿ ಹೋಗುತ್ತೇವೆ, ಗೆಲ್ಲುತ್ತೇವೆ. ಹಳೆ ಮೈಸೂರಿನಲ್ಲಿ ನಾವು ಪರಸ್ಪರ ವಿರೋಧಿಗಳು, ಆರಂಭದಲ್ಲಿ ಅಪಸ್ವರ ಇದೆ, ಕಾಲಾನಂತರದಲ್ಲಿ ಎಲ್ಲವೂ ಸರಿಯಾಗಲಿದೆ. ಸಮನ್ವಯತೆ ಧಕ್ಕೆ ಆಗಿಲ್ಲ, ಮುಂದುವರಿಯುತ್ತೇವೆ. ಮುದ್ದಹನುಮೇಗೌಡರನ್ನು ನಾವೇ ಸಮಾಧಾನಿಸಿದ್ದೇವೆ. ಮೈಸೂರು ಸಮಸ್ಯೆ ಬಗೆಹರಿದಿದೆ. ಚುನಾವಣೆ ಸಂದರ್ಭ ಆಯಾರಾಮ್, ಗಯಾರಾಮ್ ಇದ್ದೇ ಇರುತ್ತದೆ. ಬಿಜೆಪಿಯಿಂದ ಕೂಡ ಸಾಕಷ್ಟು ಮಂದಿ ಬಂದಿದ್ದಾರೆ. ಇಲ್ಲಿಂದ ಕೆಲವರು ತೆರಳಿದ್ದಾರೆ. ಇದೆಲ್ಲ ಸಾಮಾನ್ಯ ಎಂದು ಎ. ಮಂಜು, ಸುಮಲತಾ ಬಗ್ಗೆ ಕೇಳಿದ ಪ್ರಶ್ನೆಗೆ ವಿವರಿಸಿದರು.
ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಇದು ದೊಡ್ಡ ಸಮಸ್ಯೆ. ಬಿಜೆಪಿ, ಮೋದಿ ವಿರುದ್ಧ ಅಲೆ ಇದೆ. ಇದರಿಂದ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದರು.
ಬಿಎಸ್ ವೈ ಆಡಿಯೋ ಟೇಪ್ ಎಸ್ ಐಟಿ ತನಿಖೆ ವಿಚಾರ ಪ್ರಸ್ತಾಪಿಸಿ, ಸ್ಪೀಕರ್ ಎಸ್ ಐಟಿಗೆ ಸಲಹೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಕೂಡ ಎಸ್ ಐಟಿ ರಚನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಆದಷ್ಟು ಬೇಗ ಎಸ್ ಐಟಿ ಮಾಡುವಂತೆ ಹೇಳಿದ್ದೇನೆ. ಆದಷ್ಟು ಬೇಗ ಮಾಡುತ್ತಾರೆ ಎಂದರು.
ನಾವು ಬೆಂಬಲ ಕೊಟ್ಟ ಮೇಲೆ ಸಿಎಂ ಆದದ್ದು
ಯಡಿಯೂರಪ್ಪ, ಕುಮಾರಸ್ವಾಮಿ ಅವರು ಅವರಪ್ಪನಾಣೆ ಸಿಎಂ ಆಗಲ್ಲ ಎಂದಿದ್ದೆ, ಈಗ ಅವರು ಆಗಿದ್ದಾರೆ. ಯಡಿಯೂರಪ್ಪ ಮೂರು ದಿನ ಮಾತ್ರ ಆಗಿದ್ದರು. ಕುಮಾರಸ್ವಾಮಿ ನಾವು ಬೆಂಬಲ ಕೊಟ್ಟಿದ್ದರಿಂದ ಮಾತ್ರ ಮುಖ್ಯಮಂತ್ರಿ ಆಗಿದ್ದಾರೆ. ರಾಜಕೀಯ ಪ್ರೇರಿತ, ಪ್ರತಿಪಕ್ಷ ಗುರಿಯಾಗಿಸಿಕೊಂಡು ನಡೆಸುವ ದಾಳಿ ಬೇಡ. ಕೇಂದ್ರ ಸರ್ಕಾರ ಉದ್ದೇಶಪೂರ್ವಕ ಆದಾಯ ತೆರಿಗೆ ದಾಳಿ ಸರಿಯಲ್ಲ. ಅಮಿತ್ ಷಾ, ಮೋದಿ ಬಂದರೆ ನಮಗೆ ಭಯವಿಲ್ಲ. ಧಾರಾಳವಾಗಿ ಪ್ರಚಾರಕ್ಕೆ ಬರಲಿ. ಷಾ ಬಂದಷ್ಟು ರಾಜ್ಯದಲ್ಲಿ ನಮಗೆ ಅನುಕೂಲ. ಮೈಸೂರಿನಲ್ಲಿ ಗೆಲ್ಲುವ ಮತಗಳ ಅಂತರ ಗೊತ್ತಿಲ್ಲ. ನಾವು ಗೆಲ್ಲುತ್ತೇವೆ. ಕುಟುಂಬ ರಾಜಕಾರಣದ ಬಗ್ಗೆ ನಮ್ಮ ವಿರೋಧ ಇಲ್ಲ. ಅರ್ಹತೆ ಇದ್ದರೆ ಅವಕಾಶ ಪಡೆಯುವುದು ತಪ್ಪಲ್ಲ ಎಂದು ಹೇಳಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಕಾರ್ಯದರ್ಶಿ ಕಿರಣ್, ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಎಂ. ಚಂದ್ರಶೇಖರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com