ಇದು ಲೋಕಸಭೆಗೆ ಚುನಾವಣೆಯೇ ಹೊರತು ಒಕ್ಕಲಿಗರ ಸಂಘಕ್ಕಲ್ಲ: ಎಸ್ ಎಂ ಕೃಷ್ಣ

ವಂಶಪಾರಂಪರ್ಯ ರಾಜಕಾರಣ ಹಿಡಿಸಲಿಲ್ಲ, ಅದಕ್ಕೆ ಕಾಂಗ್ರೆಸ್ ಪಕ್ಷ ಬಿಟ್ಟು ಬಂದೆ, ನನಗೆ ಯಾವ ಅಧಿಕಾರವೂ ಬೇಕಾಗಿಲ್ಲ, ದೇಶಕ್ಕೆ ನರೇಂದ್ರ ಮೋದಿ ಅನಿವಾರ್ಯವಾಗಿದೆ...
ಎಂಎಸ್ ಕೃಷ್ಣ
ಎಂಎಸ್ ಕೃಷ್ಣ
Updated on
ಬೆಂಗಳೂರು: ವಂಶಪಾರಂಪರ್ಯ ರಾಜಕಾರಣ ಹಿಡಿಸಲಿಲ್ಲ, ಅದಕ್ಕೆ ಕಾಂಗ್ರೆಸ್ ಪಕ್ಷ ಬಿಟ್ಟು ಬಂದೆ, ನನಗೆ ಯಾವ ಅಧಿಕಾರವೂ ಬೇಕಾಗಿಲ್ಲ, ದೇಶಕ್ಕೆ ನರೇಂದ್ರ ಮೋದಿ ಅನಿವಾರ್ಯವಾಗಿದೆ, ಈಗ ನಡೆಯುತ್ತಿರುವುದು ಒಕ್ಕಲಿಗರ ಸಂಘದ ಚುನಾವಣೆಯಲ್ಲ, ಬದಲಾಗಿ ಲೋಕಸಭಾ ಚುನಾವಣೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಎಸ್,ಎಂ ಕೃಷ್ಣ ಹೇಳಿದ್ದಾರೆ.
ಬೆಂಗಳೂರು ವರದಿಗಾರರ ಕೂಟ ಮತ್ತು ಬೆಂಗಳೂರು ಪ್ರೆಸ್ ಕ್ಲಬ್ ಜಂಟಿಯಾಗಿ ಏರ್ಪಡಿಸಿದ್ದ  ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲೋಕಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾನು ದೇವೇಗೌಡರ ಹಿಂದೆ ನಿಲ್ಲದೇ ಇರುವುದು ವಿಪರ್ಯಾಸ ಅಲ್ಲ ಎಂದು ಸ್ಪಷ್ಟಪಡಿಸಿದರು. 
ರಾಜೀವ್ ಗಾಂಧಿ ಇದ್ದಾಗ ಪೂರ್ಣ ಪ್ರಮಾಣದ ಸಹಕಾರ ಸಿಗುತ್ತಿತ್ತು. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಈಗ ಅಂತಹ ಬೆಳವಣಿಗೆ, ವಾತಾವರಣ ಇಲ್ಲ. ಹೀಗಾಗಿ ಪಕ್ಷ ತೊರೆದು ಬಂದೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು. ಯಾವ ಆಸೆ ಮತ್ತು ಅಧಿಕಾರದ ಗುರಿ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ. ರಾಜ್ಯದಲ್ಲೂ ವಂಶಪಾರಂಪರ್ಯ ರಾಜಕಾರಣ ನಡೆಯುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ತಾತ ಹಾಗೂ ಇಬ್ಬರು ಮೊಮ್ಮಕ್ಕಳು ಸ್ಪರ್ಧಿಸಿದ್ದಾರೆ‌. ಇದು ಸರಿಯಲ್ಲ. ನಾಳೆ ಮಂಡ್ಯದಲ್ಲಿ ಇದನ್ನು ಮತ್ತೆ ಹೇಳುತ್ತೇನೆ.
ನಾನು ಎಂದೂ ಹಿಂಬಾಗಿಲ ರಾಜಕಾರಣ ಮಾಡಿಲ್ಲ. 132 ಕಾಂಗ್ರೆಸ್ ಶಾಸಕರನ್ನು ಹೆಗಲ ಮೇಲೆ ಇಟ್ಟುಕೊಂಡು ಮುಖ್ಯಮಂತ್ರಿ ಆಗಿದ್ದೆ. ಆದರೆ ಅಧಿಕಾರಕ್ಕಾಗಿ ಇದ್ದಕ್ಕಿದ್ದಂತೆ ಬಿಜೆಪಿಯವರ ಜತೆ ಕೈ ಜೋಡಿಸಿ ರಾತ್ರೋ ರಾತ್ರಿ ಮುಖ್ಯಮಂತ್ರಿ ಆದರಲ್ಲ, ಅವರದ್ದು ಹಿಂಬಾಗಿಲ ರಾಜಕಾರಣ ಎಂದು ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.
ಆಗ ಅವರಿಗೆ ಅನಿವಾರ್ಯತೆ, ಅಗತ್ಯತೆ ಏನಿತ್ತು ಎಂಬುದನ್ನು ನಾನೀಗ ಹೇಳಲು ಸಾಧ್ಯವಿಲ್ಲ. ಮುಂದೆ ನನ್ನ ಕುಟುಂಬದ ಯಾರಾದರೂ ಸದಸ್ಯರು ರಾಜಕೀಯಕ್ಕೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಅದು ಅವರ ಇಚ್ಛೆಗೆ ಬಿಟ್ಟಿದ್ದು. ಅವರೆಲ್ಲ ಪ್ರೌಢಾವಸ್ಥೆಗೆ ತಲುಪಿದ್ದಾರೆ. ಸ್ವಯಂ ನಿರ್ಧಾರ ತೆಗೆದುಕೊಳ್ಳಬಲ್ಲರು. ನನ್ನ ತಮ್ಮನ ಮಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದು ಸುಲಭದ ಮಾತೇನಲ್ಲ. ಆದರೆ ಅದಕ್ಕೆ ನನ್ಮ ಹೆಸರನ್ನು  ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ನಾನು ಸಮ್ಮಿಶ್ರ ಸರ್ಕಾರದ ವಿರೋಧಿ, ಕಾಂಗ್ರೆಸ್ ವಿರೋಧಿ, ಜೆಡಿಎಸ್ ವಿರೋಧಿ. ಹಾಗಾಗಿ ಮಂಡ್ಯದಲ್ಲಿ ನಾನು ಯಾವ ನಿಲುವು ತೆಗೆದುಕೊಳ್ಳಬಹುದು ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು ಎಂದು ಅವರು ಮರು ಪ್ರಶ್ನೆ ಹಾಕಿದರು. 
ಬಿಜೆಪಿ ಸೇರಿದ ನಂತರ ನನ್ನ ಅಳಿಯ ಸಿದ್ದಾರ್ಥ ಮನೆ ಮೇಲೆ ಐಟಿ ದಾಳಿ ನಡೆಸಲಾಯಿತು. ಇದು ನನಗೆ ಬಿಜೆಪಿ ಕೊಟ್ಟ ಬಳುವಳಿ. ಆದರೆ ಐಟಿ ದಾಳಿಗೂ ರಾಜಕಾರಣಕ್ಕೂ ಸಂಬಂಧ ಬೆರೆಸುವುದು ಸೂಕ್ತವಲ್ಲ ಎಂದರು.
ನನ್ನನ್ನು ರಾಜ್ಯ ರಾಜಕಾರಣದಿಂದ ಹೊರಗೆ ಹಾಕಬೇಕೆಂಬ ಹುನ್ನಾರ ನಡೆದಿತ್ತು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾದಾಗ ಎಸ್.ಎಂ.ಕೃಷ್ಣ ಒಬ್ಬರನ್ನು ಹೊರತುಪಡಿಸಿ ಬೇರೆ ಯಾರಾದರೂ ಮುಖ್ಯಮಂತ್ರಿ ಆಗಲಿ ಎಂದು ಜೆಡಿಎಸ್ ಷರತ್ತು ವಿಧಿಸಿತ್ತು. ಅದಕ್ಕೆ ನನ್ನನ್ನು‌ ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ಮಾಡಲಾಯಿತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಬೆಂಗಳೂರು ಅಭಿವೃದ್ಧಿಯ ಬಗ್ಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದೆ. ನನ್ನ ಅವಧಿಯಲ್ಲಿ ಪ್ರಾರಂಭವಾದ ಯೋಜನೆಗಳು ಅದೇ ವೇಗದಲ್ಲಿ ಮುಂದುವರಿದಿದ್ದರೆ ಬೆಂಗಳೂರು ಮತ್ತಷ್ಟು ಅಭಿವೃದ್ಧಿಯಾಗುತ್ತಿತ್ತು. ಆದರೆ ನನ್ನ ನಂತರ ಅಧಿಕಾರಕ್ಕೆ ಬಂದವರಿಗೆ ಅದು ಬೇಕಾಗಿರಲಿಲ್ಲ‌ ಎಂದು ಅವರು ಅಸಮಾಧಾನ ಹೊರಹಾಕಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com