ಲೋಕಸಭಾ ಚುನಾವಣೆ: ಮಂಡ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಗೆ ಬಂಡಾಯದ ಭೀತಿ
ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಇನ್ನೂ 10 ದಿನ ಬಾಕಿ ಇದೆ. ಆದರೆ, ಹಳೆಯ ಮೈಸೂರು ಭಾಗದಲ್ಲಿ ಅದರಲ್ಲೂ ಮಂಡ್ಯ ಕಾಂಗ್ರೆಸ್ ಆಂತರಿಕ ಭಿನ್ನಾಭಿಪ್ರಾಯ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದು ಜೆಡಿಎಸ್ ಪಕ್ಷದಲ್ಲಿ ಆತಂಕಕ್ಕೆ ಕಾರಣವಾಗಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಪಕ್ಷದ 10 ಉನ್ನತ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ಪ್ರತಿಯೊಬ್ಬರು ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡಿ ಮೈತ್ರಿ ಅಭ್ಯರ್ಥಿ ಪರ ಅಬ್ಬರದ ಪ್ರಚಾರ ಮಾಡುವಂತೆ ಸೂಚನೆ ನೀಡಿದ್ದಾರೆ.
ಈ ಬಿಕ್ಕಟ್ಟು ಬಗೆಹರಿಸಿ ಭಿನ್ನಮತೀಯ ನಾಯಕರನ್ನು ಸಮಾಧಾನಗೊಳಿಸಿದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬಗ್ಗೆ ಹೈಕಮಾಂಡ್ ಅಸಮಾಧಾನಗೊಂಡಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.ಆಗಾಗ್ಗೆ ರಾಹುಲ್ ಗಾಂಧಿಗೆ ಕರೆ ಮಾಡುತ್ತಿರುವ ಸಿಎಂ ಎಚ್ ಡಿ ಕುಮಾರಸ್ವಾಮಿ, ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ನಾಯಕರಿಗೆ ಎಚ್ಚರಿಕೆ ನೀಡುವಂತೆ ಕೇಳುತ್ತಿದ್ದಾರೆ.
ರಾಹುಲ್ ಗಾಂಧಿ ಏಪ್ರಿಲ್ 13 ಮತ್ತು 19 ರಂದು ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅಷ್ಟರೊಳಗೆ ಮಂಡ್ಯ ಸಮಸ್ಯೆ ಬಗೆಹರಿಸುವಂತೆ ವೇಣುಗೋಪಾಲ್, ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ.
ಮಾರ್ಚ್ 31ರಂದು ನಡೆದ ಕಾಂಗ್ರೆಸ್ -ಜೆಡಿಎಸ್ ಜಂಟಿ ಸಮಾವೇಶದ ಬಳಿಕ ಮಂಡ್ಯ, ಮೈಸೂರು, ಹಾಸನ, ತುಮಕೂರು ಕ್ಷೇತ್ರಗಳಲ್ಲಿರುವ ಬಂಡಾಯವನ್ನು ತಣ್ಣಿಸುವಂತೆ ಸೂಚಿಸಿದ್ದರು. ವೇಣುಗೋಪಾಲ್ ಕೂಡಾ ಪ್ರಚಾರದ ಬಗ್ಗೆ ಪರಿಶೀಲನೆ ನಡೆಸಿದ್ದರು. ಆದರೆ, ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ವಿರುದ್ಧ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಬಹುತೇಕ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ