ರಾಜ್ಯದಲ್ಲಿರುವುದು ಶೇ.20 ಕಮಿಷನ್ ಸರ್ಕಾರ: ಪ್ರಧಾನಿ ಮೋದಿ

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶೇ. 10 ರಷ್ಟು ಕಮೀಷನ್ ಸರ್ಕಾರವಾಗಿತ್ತು. ಇದೀಗ ಕಾಂಗ್ರೆಸ್ – ಜೆಡಿಎಸ್ ಸರ್ಕಾರ...
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಗಂಗಾವತಿ: ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶೇ. 10 ರಷ್ಟು ಕಮೀಷನ್ ಸರ್ಕಾರವಾಗಿತ್ತು. ಇದೀಗ ಕಾಂಗ್ರೆಸ್ – ಜೆಡಿಎಸ್ ಸರ್ಕಾರ ಶೇ 20 ರಷ್ಟು ಕಮೀಷನ್ ಸರ್ಕಾರವಾಗಿ ಮಾರ್ಪಟ್ಟಿದೆ  ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, “ಮೈತ್ರಿ ಸರ್ಕಾರಕ್ಕೆ ಯಾವುದೇ ಮಿಷನ್ ಇಲ್ಲ. ಬರೀ ಕಮೀಷನ್  ಪ್ರಮುಖ ಗುರಿ. ದೋಚಿದ ಹಣವನ್ನು ದೆಹಲಿಗೆ ತೊಘಲಕ್ ರಸ್ತೆಯ ನಿವಾಸಕ್ಕೆ ತಲುಪಿಸಲಾಗುತ್ತಿದೆ.ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಹಣದ ಹಸಿವು ನೀಗುವುದೇ ಇಲ್ಲ” ಎಂದು ಟೀಕಿಸಿದರು.

ರಾಜ್ಯದ ಮೈತ್ರಿ ಪಕ್ಷಗಳಿಗೆ ಜನ ಸಾಮಾನ್ಯರ ಬಗ್ಗೆ ಯಾವುದೇ ಕಾಳಜಿ ಇಲ್ಲ. ದೇಶ ಮತ್ತು ಕುಟುಂಬದಲ್ಲಿ ನಿಮ್ಮ ಆಯ್ಕೆ ಯಾವುದು ಎಂದರೆ ಎರಡೂ ಪಕ್ಷಗಳ ಮುಖಂಡರು ತಮ್ಮ ಕುಟುಂಬವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ಮೊಮ್ಮಕ್ಕಳನ್ನು ಅಭ್ಯರ್ಥಿಗಳನ್ನಾಗಿ ಮಾಡಿ ಜನರ ಭಾವನೆಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಮೈತ್ರಿ ಸರ್ಕಾರಕ್ಕೆ  ಸುಲ್ತಾನ್  ಟಿಪ್ಪು ಜಯಂತಿ ಮಾಡಲು ಹಣ ಇದೆ. ಆದರೆ ವಿಶ್ವವಿಖ್ಯಾತ ಹಂಪಿ ಕಾಯಕಲ್ಪ ಮಾಡಲು ಹಣ ಇಲ್ಲವಾಗಿದೆ ಎಂದರು.

ರಾಮನವಮಿಗೆ ಮುನ್ನ ರಾಮನ ಬಂಟ ಹನುಮನ ನಾಡಾದ ಗಂಗಾವತಿಗೆ ಆಗಮಿಸಿದ್ದು ತಮಗೆ ಬಹುದೊಡ್ಡ ಆಶಿರ್ವಾದ ದೊರೆತಂತಾಗಿದೆ. ಭೂಮಿಯಿಂದ ಆಗಸದವರೆಗೆ ದೇಶದ ಚಹರೆ ಬದಲಾಗಿದೆ. ನಿಮ್ಮ ಪ್ರೀತಿಯಿಂದ ದೆಹಲಿಯಲ್ಲಿರುವವರಿಗೆ ನಿದ್ರೆ ಭಂಗವಾಗಿದೆ. ಹತಾಶರಾಗಿ ವಿರೋಧಿ ದಳ ರಚಿಸಿಕೊಂಡಿದ್ದಾರೆ. ಮತ್ತೊಮ್ಮೆ ಆಶಿರ್ವಾದ ಬೇಡಲು ಬಂದಿದ್ದೇನೆ. ನನ್ನನ್ನು ಹರಸಿ ಎಂದು ಮೋದಿ ಹೇಳಿದರು.

ಮಧ್ಯ ಪ್ರದೇಶದ ಕಾಂಗ್ರೆಸ್ ಸರ್ಕಾರ ಗರ್ಭಿಣಿಯರಿಗೆ ಮೀಸಲಾಗಿದ್ದ ಹಣ ಲೂಟಿ ಮಾಡಿದೆ. ಮಕ್ಕಳ ರೊಟ್ಟಿಯ ತಟ್ಟೆಗೂ ಕೈಹಾಕಿದೆ. ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಇತ್ತೀಚೆಗೆ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ದೆಹಲಿ ತೊಘಲಕ್ ರಸ್ತೆಯಲ್ಲಿರುವ ಪ್ರಭಾವಿಗಳ ಮನೆಗೆ ಇಲ್ಲಿಂದ ಹಣ ಹರಿಯುತ್ತಿದೆ ಎಂದು ಆರೋಪಿಸಿದರು

ಮತ್ತೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು. ದೊಡ್ಡ ರೈತರಿಗೂ ಇದರ ಲಾಭ ದೊರೆಯಲಿದೆ. 60 ವರ್ಷ ಪೂರ್ಣಗೊಳಿಸಿದ ರೈತರಿಗೆ ಪಿಂಚಣಿ ನೀಡಲಾಗುವುದು.  ಮುಂದಿನ ಐದು ವರ್ಷಗಳಲ್ಲಿ ಎಲ್ಲರಿಗೂ ಸುರಕ್ಷತೆ, ಎಲ್ಲರಿಗೂ ಸಮೃದ್ಧಿ ದೊರಕಿಸಿಕೊಡಲಾಗುವುದು ಎಂದು ಮೋದಿ ಹೇಳಿದರು.

ಮೊದಲ ಹಂತದ ಮತದಾನದಲ್ಲಿ ಬಿಜೆಪಿ ಅಲೆ ಸೃಷ್ಟಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ನಮ್ಮ ಅಲೆ ಸ್ಪಷ್ಟವಾಗಿದೆ. ಇಲ್ಲಿ ಸೇರಿರುವ ಜನ ಸಾಗರದ ದೃಶ್ಯ ಅಲೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಮೇ 23 ರಂದು ಬರಲಿರುವ ಫಲಿತಾಂಶ ಮತ್ತೊಮ್ಮೆ ಮೋದಿ ಸರ್ಕಾರವನ್ನು ಪ್ರತಿಷ್ಠಾಪಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com