ಮೈತ್ರಿ ಸರ್ಕಾರ ಸ್ಥಿರವಾಗಿ ಉಳಿಯಲು ಲೋಕಸಭೆ ಚುನಾವಣೆಯಲ್ಲಿ ನಮಗೆ ಗೆಲುವು ಅನಿವಾರ್ಯ: ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಗಾದಿಗೆ ಏರುವುದನ್ನು ತಡೆಯುವುದು ಮಾತ್ರವಲ್ಲ...
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on: 
ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಗಾದಿಗೆ ಏರುವುದನ್ನು ತಡೆಯುವುದು ಮಾತ್ರವಲ್ಲ, ಮೈತ್ರಿ ಸರ್ಕಾರದ ಸ್ಥಿರತೆಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಹೆಚ್ಚಾಗಿ ಗೆಲ್ಲಬೇಕಾದ ಅನಿವಾರ್ಯತೆಯಿದೆ. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್-ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ ದೇಶದ ರಾಜಕೀಯ ಭವಿಷ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು?
-ಇದು ಭಾರತದ ಮಟ್ಟಿಗೆ ಮುಖ್ಯವಾದ ಚುನಾವಣೆಯಾಗಿದ್ದು ಜಾತ್ಯಾತೀತ ಪಕ್ಷಗಳು ಒಂದಾಗಲು ಇದು ಸರಿಯಾದ ಸಮಯ. ಈ ಮೂಲಕ ದೇಶವನ್ನು ಕೋಮುವಾದಿ ಶಕ್ತಿಗಳಿಂದ ಕಾಪಾಡಬಹುದು. ಮೋದಿಯವರು ಸರ್ವಾಧಿಕಾರಿ ಧೋರಣೆ ಹೊಂದಿದ್ದು ಮತ್ತು ಅಮಿತ್ ಶಾ ಅವರು ಬಹುತ್ವದ ಪ್ರತಿಪಾದನೆಯಿಂದ ದೂರವಿದ್ದು ಅದು ಕೊನೆಯಾಗಬೇಕು. ಸಂವಿಧಾನವನ್ನು ಬದಲಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಒಂದು ಧರ್ಮ ಮತ್ತು ಸಂಸ್ಕೃತಿಯನ್ನು ಜನರ ಮೇಲೆ ಹೇರಿಕೆ ಮಾಡುವ ಪ್ರಯತ್ನ ನಡೆಯುತ್ತಿದ್ದು ಅದು ದೇಶದ ಬೆಳವಣಿಗೆಗೆ ವಿರುದ್ಧವಾಗಿದೆ.
ನರೇಂದ್ರ ಮೋದಿಯವರು ದೇಶಕ್ಕೆ ಮತ್ತು ಕಾಂಗ್ರೆಸ್ ಗೆ ಅತಿದೊಡ್ಡ ತಡೆ ಎಂದು ನಿಮಗೆ ಅನಿಸುತ್ತಿದೆಯೇ?
ಖಂಡಿತಾ ದೇಶಕ್ಕೆ ಮೋದಿಯವರು ಒಂದು ದೊಡ್ಡ ತಡೆಯಾಗಿದ್ದಾರೆ. ವಯನಾಡಿನಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಲು ಮುಂದಾದಾಗ ಅದಕ್ಕೆ ಮೋದಿಯವರು ಟೀಕಿಸಿದರು. ಅಲ್ಪಸಂಖ್ಯಾತರು ಹೆಚ್ಚಿರುವ ವಯನಾಡಿನಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುವ ಮೂಲಕ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ದೇಶವನ್ನು ಮತ, ಧರ್ಮದ ಹೆಸರಿನಲ್ಲಿ ಒಡೆಯುವುದು ಸರಿಯಲ್ಲ,
ಬಾಲಾಕೋಟ್ ವಾಯುದಾಳಿ ನಂತರ ಕಾಂಗ್ರೆಸ್ ಜನಪ್ರಿಯತೆ ಕುಸಿದಿದೆಯೇ?
ವಾಯುದಾಳಿ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಆದರೆ ಒಂದು ವಿಷಯವಂತೂ ಖಂಡಿತ ಸತ್ಯ. ರೈತರ ಸಮಸ್ಯೆಗಳು, ನಿರುದ್ಯೋಗ ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರದ ಲೋಪದೋಷ, ವೈಫಲ್ಯವನ್ನು ವಾಯುದಾಳಿ ಮೂಲಕ ಮುಚ್ಚಿಹಾಕಲು ಬಿಜೆಪಿ ಯತ್ನಿಸಿದೆ.
ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು?
ಬಿಜೆಪಿ ಉತ್ತಮ ಸಾಧನೆ ಮಾಡಿದರೆ ಖಂಡಿತಾ ಅದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸ್ಥಿರತೆ ಮೇಲೆ ಪರಿಣಾಮ ಬೀರಲಿದೆ. ಜನರ ಒಲವು ಸರ್ಕಾರದ ವಿರುದ್ಧವಾಗಿದೆ ಎಂದು ಬಿಜೆಪಿ ಸಾರುತ್ತದೆ. ಶಾಸಕರನ್ನು ಸೆಳೆಯಲು ಪ್ರಯತ್ನ ಮಾಡುತ್ತದೆ. ನಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಸವಾಲಾಗಿರುತ್ತದೆ ನಮಗೆ.
ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆಯೇ?
ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ನಾವು ಮೈತ್ರಿ ಸರ್ಕಾರವನ್ನು ರಚಿಸಿದ್ದೇವೆ. ಇಂತಹ ಸಂದರ್ಭದಲ್ಲಿ ವಿರೋಧವನ್ನು ಎದುರಿಸುವುದು ಸಹಜ.
ದೇವೇಗೌಡರು ತಮ್ಮ ವರ್ಚಸ್ಸನ್ನು ಮತಗಳಾಗಿ ಪರಿವರ್ತಿಸುತ್ತಾರೆ ಎಂದು ನಿಮಗೆ ಅನಿಸುತ್ತದೆಯೇ?
-ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆಯಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಸಮಸ್ಯೆಯಿರುವುದು ಮೈಸೂರು, ಮಂಡ್ಯ, ಹಾಸನ, ತುಮಕೂರು ಮತ್ತು ಚಿಕ್ಕಬಳ್ಳಾಪುರಗಳಲ್ಲಿ. ಇದುವರೆಗೆ ಗ್ರಾಮ ಪಂಚಾಯತ್ ಎಲೆಕ್ಷನ್ ನಿಂದ ಹಿಡಿದು ವಿಧಾನಸಭೆ ಚುನಾವಣೆಯವರೆಗೆ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧವಾಗಿ ಚುನಾವಣೆಗಳನ್ನು ಎದುರಿಸಿವೆ. ಮೈತ್ರಿ ಹೊಂದಾಣಿಕೆ ಮಾಡಿಕೊಂಡಿದ್ದು ಅದು ಸಹಜತೆಗೆ ಬರಲು ಸ್ವಲ್ಪ ಸಮಯ ಹಿಡಿಯುತ್ತದೆ.
ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು ಅಹಿಂದ ಸಮುದಾಯಗಳ ಹೋರಾಟದ ಜೊತೆ ನೀವು ರಾಜಿ ಮಾಡಿಕೊಂಡಿದ್ದೀರಿ ಅನಿಸುವುದಿಲ್ಲವೆ?
ಇಲ್ಲ, ನಾನು ಯಾವಾಗಲೂ ಸಾಮಾಜಿಕ ನ್ಯಾಯ ಮತ್ತು ಊಳಿಗಮಾನ್ಯ ಪದ್ಧತಿ ವಿರುದ್ಧ ಹೋರಾಟ ನಡೆಸಿಕೊಂಡು ಬಂದವನು. ಇಲ್ಲಿ ನಮ್ಮ ಮುಖ್ಯ ಉದ್ದೇಶ ನಮ್ಮ ದೊಡ್ಡ ಶತ್ರು ಅದು ಮೋದಿಯವರನ್ನು ಸೋಲಿಸಿ ದೇಶವನ್ನು ಕೋಮುಶಕ್ತಿಗಳಿಂದ ಕಾಪಾಡುವುದು. ನಾನು ಸಾರ್ವಜನಿಕ ಜೀವನದಲ್ಲಿರುವವರೆಗೆ ಅಹಿಂದ ಸಮುದಾಯಗಳ ಪರ ಹೋರಾಟ ನಡೆಸುವುದನ್ನು ನಿಲ್ಲಿಸುವುದಿಲ್ಲ.
ದೇಶದಲ್ಲಿರುವ ಶೇಕಡಾ 30ರಷ್ಟು ವಿದ್ಯುನ್ಮಾನ ಮತಯಂತ್ರಗಳು ದೋಷಪೂರಿತವಾದವು ಎಂದು ಇತ್ತೀಚೆಗೆ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಅದು ನಿಮ್ಮಲ್ಲಿಯೂ ಆತಂಕವನ್ನುಂಟುಮಾಡುತ್ತಿದೆಯೇ?
-ಹೌದು, ನಮ್ಮ ಪಕ್ಷದ ನಾಯಕರು ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ. ಹಿಂದಿನ ಬ್ಯಾಲಟ್ ಪೇಪರ್ ಮಾತ್ರವೇ ಇದಕ್ಕಿರುವ ಪರಿಹಾರ. ಮುಂದುವರಿದ ರಾಷ್ಟ್ರಗಳು ಬ್ಯಾಲಟ್ ಪೇಪರ್ ಬಳಸುವಾಗ ಭಾರತದಲ್ಲಿ ನಮಗೆ ಏಕೆ ಸಾಧ್ಯವಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com