ಶೃಂಗೇರಿ: ಹಿಮ್ನಿಗೆ ಸೇತುವೆ ಆಗ್ರಹಿಸಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಹಿಮ್ನಿಗೆ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಶೃಂಗೇರಿ ತಾಲೂಕಿನ ನೆಮ್ನಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಮ್ಮಿಗೆ ಗೂಳಿಮಕ್ಕಿ ಹಾಗೂ ಅಬ್ಬಿವರೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಚಿಕ್ಕಮಗಳೂರು: ಹಿಮ್ನಿಗೆ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಶೃಂಗೇರಿ ತಾಲೂಕಿನ ನೆಮ್ನಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಮ್ಮಿಗೆ ಗೂಳಿಮಕ್ಕಿ ಹಾಗೂ ಅಬ್ಬಿವರೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ
ರಾಜ್ಯದಲ್ಲಿ  ಲೋಕಸಭಾ ಚುನಾವಣೆಗೆ ಗುರುವಾರ ಮೊದಲ ಹಂತದ ಮತದಾನ ನಡೆಯಲಿದ್ದು, ನಾಳೆ ಮತದಾನದಲ್ಲಿ  ಪಾಲ್ಗೊಳ್ಳದಿರಲು ಈ ಮೂರು ಗ್ರಾಮಗಳ ಜನರು ನಿರ್ಧಾರ ಕೈಗೊಂಡಿದ್ದಾರೆ. ನಕ್ಸಲ್  ಪ್ಯಾಕೇಜ್ ಅಡಿ ಹಿಮ್ನಿಗೆ ಹೊಳೆಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ  ಮುಂದಾಗಿತ್ತು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸೇತುವೆಯ ಅರ್ಧಕಾಮಗಾರಿ ಕೆಲಸವೂ  ಮುಗಿದಿತ್ತು. ಆದರೆ ಇಂತಹ ಸಂದರ್ಭದಲ್ಲಿ ಕೆಲವು ದಿನಗಳ ಹಿಂದಷ್ಟೇ ಅರಣ್ಯ ಇಲಾಖೆ  ಅಧಿಕಾರಿಗಳು ಸೇತುವೆ ಕಾಮಗಾರಿ ಸಾಧ್ಯವಿಲ್ಲ. ಅರಣ್ಯ ವ್ಯಾಪ್ತಿಯ ಜಾಗದಲ್ಲಿ ಸೇತುವೆ  ನಿರ್ಮಿಸಲು ಅವಕಾಶವಿಲ್ಲವೆಂದು ಕಾಮಗಾರಿಯನ್ನು ತಡೆ ಹಿಡಿದ ಪರಿಣಾಮ, ಕಾಮಗಾರಿ  ಸ್ಥಗಿತಗೊಂಡಿತ್ತು. 
ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ  ಆರಂಭವಾಗಲಿದ್ದು, ಮಳೆಗಾಲದಲ್ಲಿ ಶಾಲಾ ಮಕ್ಕಳ ಸುಗಮ ಸಂಚಾರಕ್ಕೆ ಸೇತುವೆಯ ಅಗತ್ಯತೆ  ಹೆಚ್ಚಾಗಿದೆ. ಆದ್ದರಿಂದ ಗ್ರಾಮದಲ್ಲಿ ಸೇತುವೆ ನಿರ್ಮಾಣವಾಗುವವರೆಗೂ ಯಾವುದೇ  ಕಾರಣಕ್ಕೂ  ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಈ ಗ್ರಾಮಸ್ಥರು  ನಿರ್ಧರಿಸಿದ್ದಾರೆ ಎಂದು ಯುಎನ್‍ಐ ಕನ್ನಡ ಸುದ್ದಿಸಂಸ್ಥೆಗೆ ಹಿಮ್ನಿಗೆ ಗ್ರಾಮಸ್ಥರಾದ  ಶಂಕರಪ್ಪ ಗೌಡ ಹಾಗೂ ವಿಜೇಂದ್ರ ತಿಳಿಸಿದ್ದಾರೆ. 
ಮಲೆನಾಡು, ಅರೆಮಲೆನಾಡು  ಹಾಗು ಕರಾವಳಿ ಸೇರಿದಂತೆ ವೈವಿಧ್ಯಮಯ ವಾತಾವರಣ ಹೊಂದಿರುವ ಚಿಕ್ಕಮಗಳೂರು-ಉಡುಪಿ ಲೋಕಸಭಾ  ಕ್ಷೇತ್ರಕ್ಕೆ ಗುರುವಾರ ಮತದಾನ ನಡೆಯಲಿದೆ. 1952 ರಲ್ಲಿ ಕಾಫಿನಾಡು  ಚಿಕ್ಕಮಗಳೂರು-ಹಾಸನ ಲೋಕಸಭಾ ಕ್ಷೇತ್ರವಾಗಿ ಮೊದಲ ಚುನಾವಣೆ ನಡೆದಿತ್ತು. ನಂತರ 1967  ರಲ್ಲಿ ಚಿಕ್ಕಮಗಳೂರು ಸ್ವತಂತ್ರ ಲೋಕಸಭಾ ಕ್ಷೇತ್ರವಾಯಿತು. ಬಳಿಕ 2009 ರಲ್ಲಿ ಪುನಃ  ಕ್ಷೇತ್ರ ಪುನರ್ ವಿಂಗಡನೆಯಿಂದಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಾಗಿ  ಪರಿವರ್ತನೆಗೊಂಡಿದೆ. ಕ್ಷೇತ್ರದಲ್ಲಿ ಇದೂವರೆಗೂ 2 ಉಪಚುನಾವಣೆ ಸೇರಿದಂತೆ ಇದು 19 ನೇ  ಲೋಕಸಭಾ ಚುನಾವಣೆಯಾಗಿದೆ. 
10 ಬಾರಿ ಕಾಂಗ್ರೆಸ್, ಬಿಜೆಪಿ 5 ಬಾರಿ, ಜನತಾದಳ  ಹಾಗೂ ಪಿಎಸ್‍ ಪಿ ಪಕ್ಷಗಳು ತಲಾ ಒಂದು ಬಾರಿ ಕ್ಷೇತ್ರದಲ್ಲಿ ಗೆಲುವು ಕಂಡಿವೆ. 
ಕಣದಲ್ಲಿ ಬಿಜೆಪಿಯಿಂದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಕಣದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com