ಡೈರಿಯ ಚಿತ್ರ
ಕರ್ನಾಟಕ
ಕಾಂಗ್ರೆಸ್ ಬಿಡುಗಡೆ ಮಾಡಿರುವ ಡೈರಿ ಸುಳ್ಳಿನ ಕಂತೆ, ಮಾನನಷ್ಟ ಮೊಕದ್ದಮೆ ಹೂಡುವೆ: ಯಡಿಯೂರಪ್ಪ
ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಡೈರಿ ಸುಳ್ಳಿನ ಕಂತೆಯಾಗಿದೆ.ಈ ಬಗ್ಗೆ ಕಾನೂನು ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ ಕಾನೂನು ಸಲಹೆ ಪಡೆದು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ
ಬೆಂಗಳೂರು: ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಡೈರಿ ಸುಳ್ಳಿನ ಕಂತೆಯಾಗಿದೆ.ಈ ಬಗ್ಗೆ ಕಾನೂನು ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ ಕಾನೂನು ಸಲಹೆ ಪಡೆದು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಈ ಈ ವಿಷಯ ಮುಗಿದ ಅಧ್ಯಾಯವಾಗಿದೆ.ರಾಜಕೀಯ ಲಾಭ ಪಡೆಯುವ ಉದ್ದೇಶ ಇದರ ಹಿಂದಿದ್ದು, ಕಾಂಗ್ರೆಸ್ ನಾಯಕರು ದುರುದ್ದೇಶಪೂರಿತ ಅಪಪ್ರಚಾರ ಮತ್ತು ನಕಲಿ ಸುದ್ದಿಗಳನ್ನು ಹರಡುವುದರಲ್ಲಿ ನಿರತರಾಗಿದ್ದಾರೆ.ಈಗ ಪ್ರಸ್ತಾಪಿಸಿರುವ ಭ್ರಷ್ಟಾಚಾರ ಆರೋಪದ ಕುರಿತು ಈ ಹಿಂದೆಯೇ ವಿಚಾರಣೆ ನಡೆದು ಇದಕ್ಕೆ ಸಂಬಂಧಿಸಿದ ದಾಖಲೆಗಳೆಲ್ಲವೂ ನಕಲಿ ಎನ್ನುವುದು ಸಾಬೀತಾಗಿದೆ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಜನಪ್ರಿಯತೆ ದಿನ ಕಳೆದಂತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ತೀವ್ರ ಹತಾಶೆಗೊಂಡಿದ್ದಾರೆ. 2019ರ ಚುನಾವಣೆಯಲ್ಲಿ ಸೋಲು ತಮಗೆ ಕಟ್ಟಿಟ್ಟ ಬುತ್ತಿ ಎನ್ನುವುದು ಕಾಂಗ್ರೆಸ್ ನಾಯಕರಿಗೆ ಸ್ಪಷ್ಟವಾಗಿ ಅರಿವಾಗಿದೆ. ಕಾಂಗ್ರೆಸ್ ನಾಯಕರು ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ವೈಚಾರಿಕವಾಗಿ ದಿವಾಳಿಯಾಗಿದ್ದಾರೆ. ಅವರಿಗೆ ಸಾರ್ವಜನಿಕವಾಗಿ ಚರ್ಚಿಸಲು ಯಾವುದೇ ಅಭಿವೃದ್ಧಿಪರ ವಿಚಾರಗಳಿಲ್ಲ. ಹೀಗಾಗಿ ಈ ರೀತಿಯ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
Absolute nonsense, disgusting & desperate efforts by @INCIndia to release such fake diary, prove it at the earliest or face defamation case. pic.twitter.com/3sMkYTd3Kb
— Chowkidar B.S. Yeddyurappa (@BSYBJP) March 22, 2019
ಈ ಮಧ್ಯೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಗೊ.ಮಧುಸೂಧನ್, ಶೋಭಾ ಕರಂದ್ಲಾಜೆ ಯಡಿಯೂರಪ್ಪ ಅವರ ವಿವಾಹ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕರು ಕ್ರೂರಿಗಳು. ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಅವರನ್ನು ಯಾವಾಗಲೂ ಸಹೋದರಿ ಎಂದೇ ಸಂಬೋಧಿಸುತ್ತಾರೆ. ಇದು ಕಾಂಗ್ರೆಸ್ಸಿಗರ ಅಶ್ಲೀಲ ನಡವಳಿಕೆಯ ಪರಮಾವಧಿ ಎಂದರು.ಮದುವೆಯಾಗಿರುವುದನ್ನು ಯಾರೂ ಡೈರಿಯಲ್ಲಿ ಬರೆದುಕೊಳ್ಳುವುದಿಲ್ಲ ಎಂಬ ಸಾಮಾನ್ಯ ಪ್ರಜ್ಞೆಯೂ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದರು.
ಕಾಂಗ್ರೆಸ್ ಬಿಡುಗಡೆ ಮಾಡಿರುವ ದಾಖಲೆಗಳು ಐಟಿ ದಾಳಿಯಲ್ಲಿ ವಶಪಡಿಸಿಕೊಂಡಿರುವುದು ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷಾಧಾರವೂ ಇಲ್ಲ. ಇದು ಕಾಂಗ್ರೆಸ್ ನಾಯಕರ ವಂಚನೆಯ ಕೃತ್ಯ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದು, ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ.ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಯಡಿಯೂರಪ್ಪ ಕೂಡ ಹೇಳಿದ್ದಾರೆ ಎಂದು ಗೋ ಮಧುಸೂಧನ್ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ