ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುವ ಸುಮಲತಾ ಅವರಿಗೆ ಬೆಂಬಲ ನೀಡಿದ ನಂತರ ನಟ ದರ್ಶನ್ ಅವರ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿ ಓಡಿಹೋಗಿರುವ ಘಟನೆಗೆ ಸಂಬಂಧಿಸಿದಂತೆ ತಾವು ಅವರ ಜೊತೆ ಮಾತನಾಡಿದ್ದು, ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಸುಮಲತಾ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ್ದಾರೆ.
ದರ್ಶನ್ ಅವರ ಹೆಸರೇ ಚಾಲೆಂಜಿಂಗ್ ಸ್ಟಾರ್. ಇದನ್ನೆಲ್ಲಾ ಅವರು ಚಾಲೆಂಜ್ ಆಗಿಯೇ ಸ್ವೀಕರಿಸುತ್ತಾರೆ. ಯಶ್ ಮತ್ತು ದರ್ಶನ್ ಅವರನ್ನು ಹೆದರಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಇದಕ್ಕೆಲ್ಲ ಯಶ್ ಮತ್ತು ದರ್ಶನ ತಲೆಕೆಡಿಸಿಕೊಳ್ಳುವುದಿಲ್ಲ. ಎಲ್ಲವನ್ನು ಚಾಲೆಂಜ್ ಆಗಿ ಸ್ವೀಕರಿಸುತ್ತಾರೆ ಎಂದರು.
ದರ್ಶನ್ ಅವರ ಮನೆ ಮೇಲೆ ಕಲ್ಲು ತೂರಾಟ ಯಾರು ಮಾಡಿದ್ದು ಎಂದು ನನಗೆ ಗೊತ್ತಿಲ್ಲ, ಹಾಗಾಗಿ ನಾನು ಯಾರನ್ನೂ ಬೆರಳು ತೋರಿಸಿ ಹೇಳುವುದಿಲ್ಲ. ಆದರೆ ಈ ರೀತಿ ಕಲ್ಲು ತೂರಾಟ ನಡೆಸಿ ಬೆದರಿಸಿ, ಹೆದರಿಸಿ ಮಾಡಬಹುದು ಎಂದು ಅಂದುಕೊಂಡರೆ ಅದು ಮೂರ್ಖತ್ವ. ದರ್ಶನ್ ಅಂತದ್ದಕ್ಕೆಲ್ಲ ಹೆದರುವ ಜಾಯಮಾನದವರಲ್ಲ, ಇದರಿಂದ ದರ್ಶನ್ ಗೆ ಇನ್ನಷ್ಟು ಸ್ಪೂರ್ತಿ ಬರುತ್ತದೆಯೇ ಹೊರತು ಅವರೇನು ಕುಗ್ಗಲ್ಲ ಎಂದರು.
ದರ್ಶನ್ ಅವರು ಹೈದರಾಬಾದ್ ನಲ್ಲಿ ಸಿನಿಮಾ ಶೂಟಿಂಗ್ ನಲ್ಲಿದ್ದು, ಅವರ ಜೊತೆ ಫೋನ್ ಮೂಲಕ ಮಾತನಾಡಿದ್ದೇನೆ. ಆಗ ಅವರು ಇದಕ್ಕೆಲ್ಲ ಹೆದರಬೇಡಿ, ಡೋಂಟ್ ವರಿ ಮದರ್ ಇಂಡಿಯಾ, ನಾವೆಲ್ಲಾ ಇದ್ದೇವೆ, ಧೈರ್ಯವಾಗಿರಿ, ಧೈರ್ಯ ಕಳೆದುಕೊಳ್ಳಬೇಡಿ ಎಂದು ಹೇಳಿದರು.