ದೇಶ, ಪಕ್ಷ ಮೊದಲು, ಸ್ವಹಿತಾಸಕ್ತಿ ನಂತರ, ಪಕ್ಷದ ಮುಖಂಡರ ತೀರ್ಮಾನಕ್ಕೆ ಬದ್ಧ: ತೇಜಸ್ವಿನಿ ಅನಂತ್ ಕುಮಾರ್

ದೇಶ ಮೊದಲು ಎನ್ನುವುದು ನನ್ನ ಸಿದ್ಧಾಂತ. ದೇಶದ ರಾಜ್ಯದ ಒಳಿತಿಗಾಗಿ ಪಕ್ಷದ ಕೇಂದ್ರ ನಾಯಕರು ...
ತೇಜಸ್ವಿನಿ ಅನಂತ್ ಕುಮಾರ್
ತೇಜಸ್ವಿನಿ ಅನಂತ್ ಕುಮಾರ್
ಬೆಂಗಳೂರು: ದೇಶ ಮತ್ತು ಪಕ್ಷ ಮೊದಲು, ವೈಯಕ್ತಿಕ ಹಿತಾಸಕ್ತಿಗಳು ನಂತರ ಎನ್ನುವುದು ನನ್ನ ಸಿದ್ಧಾಂತ. ದೇಶದ ರಾಜ್ಯದ ಒಳಿತಿಗಾಗಿ ಪಕ್ಷದ ಕೇಂದ್ರ ನಾಯಕರು ತೆಗೆದುಕೊಂಡ ನಿರ್ಧಾರವನ್ನು ನಾನು ಒಪ್ಪಿಕೊಳ್ಳುತ್ತೇನೆ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ತೇಜಸ್ವಿ ಸೂರ್ಯ ಅವರ ಪರ ಪ್ರಚಾರ ಮಾಡುತ್ತೇನೆ ಎಂದು ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯುವ ನಾಯಕ ಹೊಸ ಮುಖ ತೇಜಸ್ವಿ ಸೂರ್ಯ ಅವರು ಪಕ್ಷ ಬಿ ಫಾರಂ ನೀಡಿ ನಿನ್ನೆಯಷ್ಟೇ ಘೋಷಿಸಿದೆ. ಇದೊಂದು ಅಚ್ಚರಿಯ ಬೆಳವಣಿಗೆಯಾಗಿದ್ದು ಇಷ್ಟು ದಿನಗಳ ಕಾಲ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ಸಿಗುತ್ತದೆ ಎಂಬ ಬಲವಾದ ನಂಬಿಕೆಯಿತ್ತು.
ಕೆಲ ದಿನಗಳಿಂದೀಚೆಗೆ ನಡೆದ ಬೆಳವಣಿಗೆಯಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿದ್ದು ತೇಜಸ್ವಿ ಸೂರ್ಯ ಪಾಲಾಗಿದೆ.
ತಮ್ಮನ್ನು ಘೋಷಿಸಿದ ನಂತರ ಇಂದು ನಾಮಪತ್ರ ಸಲ್ಲಿಕೆಗೆ ಮುನ್ನ ಬೆಳಗ್ಗೆ ತೇಜಸ್ವಿನಿ ಅನಂತ್ ಕುಮಾರ್ ಅವರ ನಿವಾಸಕ್ಕೆ ಶಾಸಕ ರವಿ ಸುಬ್ರಹ್ಮಣ್ಯ ಅವರ ಜೊತೆ ತೇಜಸ್ವಿ ಸೂರ್ಯ ಭೇಟಿ ನೀಡಿ ತೇಜಸ್ವಿನಿಯವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ತೇಜಸ್ವಿನಿ ಅನಂತ್ ಕುಮಾರ್, ನನಗೆ ಟಿಕೆಟ್ ಸಿಗದಿದ್ದಾಗ ಆರಂಭದಲ್ಲಿ ಆಘಾತ ಮತ್ತು ಅಚ್ಚರಿಯಾದದ್ದು ನಿಜ. ಆದರೆ ನಾನು ಪಕ್ಷದ ತೀರ್ಮಾನಕ್ಕೆ ಬದ್ಧಳಾಗಿದ್ದೇನೆ, ಈಗ ಪ್ರಶ್ನೆ ಕೇಳುತ್ತಾ ಕೂರುವುದು ಬೇಡ. ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂದಾದರೆ ಮೋದಿಯವರನ್ನು ಬೆಂಬಲಿಸೋಣ ಎಂದರು.
ಬಿಜೆಪಿ ಪಕ್ಷ ಸಿದ್ಧಾಂತದಲ್ಲಿ ವಿಭಿನ್ನವಾಗಿದ್ದು ಇಲ್ಲಿ ನಾಯಕರು ತೆಗೆದುಕೊಂಡ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗೋಣ, ಏನೇ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಬದಿಗೊತ್ತಿ ಪಕ್ಷದ ಸಂಸ್ಕೃತಿಗೆ ತಕ್ಕವಾಗಿ ಒಳಿತಿಗೆ ಶ್ರಮಿಸೋಣ, ನಮ್ಮ ಮಾತಿನಲ್ಲಿ, ಗುಣನಡತೆಯಲ್ಲಿ ಪ್ರೌಢಿಮೆ ತೋರಿಸುವ ಸಮಯವಿದು, ತೇಜಸ್ವಿ ಸೂರ್ಯಗೆ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು  ಹೇಳಿದರು.
ಬಿಜೆಪಿ ಹಿರಿಯ ನಾಯಕರಾಗಿದ್ದ ನನ್ನ ಪತಿ ಅನಂತ್ ಕುಮಾರ್ ಅವರು ದಶಕಗಳ ಕಾಲ ಬಿಜೆಪಿಯಲ್ಲಿದ್ದು ಪಕ್ಷಕ್ಕಾಗಿ, ದೇಶಕ್ಕಾಗಿ ದುಡಿದಿದ್ದರು, ಸಾವಿರಾರು ಕಾರ್ಯಕರ್ತರನ್ನು ಕೂಡ ಹುಟ್ಟುಹಾಕಿದ್ದರು. ಅವರ ಅಡಿಯಲ್ಲಿ, ಮಾರ್ಗದರ್ಶನದಲ್ಲಿ ನಾನು ಕೂಡ ಕಳೆದ 30 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ನಾವು ಇಷ್ಟು ವರ್ಷಗಳಿಂದ ಒಂದು ಪಕ್ಷದ ಸಿದ್ಧಾಂತದಲ್ಲಿದ್ದು ಇಂದು ಸಣ್ಣಪುಟ್ಟ ಅಸಮಾಧಾನಗಳಿದ್ದರೂ ಕೂಡ ಅದನ್ನು ದೊಡ್ಡದು ಮಾಡದೆ ಹೊಂದಿಕೊಂಡು ಒಟ್ಟಾಗಿ ಹೋಗುವುದು ಮುಖ್ಯ. ಬಿಜೆಪಿಯಲ್ಲಿದ್ದುಕೊಂಡು ಅದರ ಚೌಕಟ್ಟಿನಲ್ಲಿಯೇ ಕೆಲಸ ಮಾಡಲು ಇಚ್ಛಿಸುತ್ತೇನೆ, ದೇಶದ ಪ್ರಜಾಪ್ರಭುತ್ವದಲ್ಲಿ ಚುನಾವಣೆಯೆಂಬ ದೊಡ್ಡ ಹಬ್ಬ ಬಂದಿದೆ, ಅದನ್ನು ಸಮರ್ಥವಾಗಿ ಎದುರಿಸಿ ಉತ್ತಮ ಅಭ್ಯರ್ಥಿಗಳ ಆಯ್ಕೆಯತ್ತ ಗಮನಹರಿಸೋಣ ಎಂದು ಹೇಳಿದರು.
ಕುಟುಂಬ ರಾಜಕಾರಣ ಹೆಸರಿನಲ್ಲಿ ನಿಮಗೆ ಟಿಕೆಟ್ ನಿರಾಕರಿಸಿದ್ದರೆ ತೇಜಸ್ವಿ ಸೂರ್ಯ ಅವರು ಕೂಡ ಶಾಸಕರ ಕುಟುಂಬದವರಲ್ಲವೇ ಎಂದು ಕೇಳಿದ್ದಕ್ಕೆ ಅನಂತ್ ಕುಮಾರ್ ಅವರು ಹೇಳುತ್ತಿದ್ದಂತೆ ನೀವು ಸರಿಯಾದ ಪ್ರಶ್ನೆಯನ್ನು ತಪ್ಪು ವಿಳಾಸಕ್ಕೆ ಕೇಳಿದ್ದೀರಿ, ಸೂಕ್ತವಾದವರಲ್ಲಿಯೇ ಹೋಗಿ ಕೇಳಿ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಪ್ರಶ್ನೆಯೇ ಇಲ್ಲ, ಅದು ನನ್ನ ಮತ್ತು ಬಿಜೆಪಿಯ ಸಂಸ್ಕೃತಿಯಲ್ಲ ಎಂದು ನನ್ನ ಭಾವನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com