ಕೊನೆ ದಿನ ಕೃಷ್ಣ ಬೈರೇಗೌಡ, ಡಿಕೆ ಸುರೇಶ್ ಸೇರಿ ಹಲವು ನಾಯಕರಿಂದ ನಾಮಪತ್ರ ಸಲ್ಲಿಕೆ

ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಮಂಗಳವಾರ ತೆರೆ ಬಿದ್ದಿದ್ದು, ಬೆಂಗಳೂರು ಉತ್ತರ ಕ್ಷೇತ್ರದಿಂದ....
ನಾಮಪತ್ರ ಸಲ್ಲಿಸುತ್ತಿರುವ ನಾಯಕರು
ನಾಮಪತ್ರ ಸಲ್ಲಿಸುತ್ತಿರುವ ನಾಯಕರು
ರಾಮನಗರ: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಮಂಗಳವಾರ ತೆರೆ ಬಿದ್ದಿದ್ದು, ಬೆಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್ ಮಂಗಳವಾರ ಉಮೇದುವಾರಿಕೆ ಸಲ್ಲಿಸಿದರು.
ಇಂದು ಬೆಳಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿದ ಕೃಷ್ಣ ಬೈರೇಗೌಡ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಡಿ.ಕೆ.ಸುರೇಶ್, ರಾಮಗನರದ ದರ್ಗಾಕ್ಕೆ ಭೇಟಿ ನೀಡಿ ಚಾದರ ಅರ್ಪಿಸಿ ಮೌಲ್ವಿಗಳಿಂದ ಆಶೀರ್ವಾದ ಪಡೆದರು. 
ನಂತರ ಚಾಮುಂಡೇಶ್ವರಿ ದೇಗುಲದಿಂದ ತೆರೆದ ವಾಹನದಲ್ಲಿ  ಮೆರವಣಿಗೆಯಲ್ಲಿ ಸಾಗಿದರು.   ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್, ಶಾಸಕರಾದ ಮುನಿರತ್ನ, ಮಂಜು, ಮಾಜಿ ಶಾಸಕ ಬಾಲಕೃಷ್ಣ, ಮಂಡ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಮೈತ್ರಿ ಕೂಟದ ನಾಯಕರೊಂದಿಗೆ ಡಿ.ಕೆ.ಸುರೇಶ್ ಜನರತ್ತ ಕೈಬೀಸಿ ಗೆಲುವಿನ ಸಂಕೇತ ತೋರಿದರು. ಬಳಿಕ ಜಿಲ್ಲಾಧಿಕಾರಿ  ಕಚೇರಿಗೆ ತೆರಳಿ ಚುನಾವಣಾಧಿಕಾರಿಗೆ ಉಮೇದುವಾರಿಕೆ ಸಲ್ಲಿಸಿದರು.
ಬಳಿಕ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ,  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಅವರು ನಾಮಪತ್ರ ಸಲ್ಲಿಸಿದ್ದು, ಇಂದಿನಿಂದ ಚುನಾವಣೆಗೆ ಅಧಿಕೃತ ಅಖಾಡ ಸಿದ್ಧಗೊಂಡಿದೆ. ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಹಳೆಯ ಸ್ನೇಹಿತ ಬಾಲಕೃಷ್ಣ ಸೇರಿದಂತೆ ಉಭಯ ಪಕ್ಷಗಳ ನಾಯಕರು ಸುರೇಶ್ ಅವರಿಗೆ ಬೆಂಬಲ ನೀಡಿದ್ದಾರೆ ಎಂದರು.
ಹಲವಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ತಾವು ಹಾಗೂ ಡಿ.ಕೆ.ಶಿವಕುಮಾರ್ ಈಗ ಜನರ ಆಶೀರ್ವಾದದಿಂದ  ಅಣ್ಣತಮ್ಮಂದಿರಂತೆ ಬದಲಾಗಿದ್ದೇವೆ. ನಾವು ಕೇವಲ ಮಂಡ್ಯ, ರಾಮನಗರ ಜಿಲ್ಲೆಗಳ ಅಭಿವೃದ್ಧಿಗಷ್ಟೇ ಆದ್ಯತೆ ನೀಡಿಲ್ಲ. ಶಿಕಾರಿಪುರ, ಶಿವಮೊಗ್ಗ ನೀರಾವರಿಗೂ ಸರ್ಕಾರದಿಂದ ಹಣ ಬಿಡುಗಡೆ ಮಾಡಿದ್ದೇವೆ.  ಶಿವಮೊಗ್ಗದಲ್ಲಿ 22 ವರ್ಷಗಳಿಂದ ಸಾಧ್ಯವಾಗದ ಅಭಿವೃದ್ಧಿಯನ್ನು ಯಡಿಯೂರಪ್ಪನವರು ಮಾಡಲಾಗದ ಕೆಲಸವನ್ನು ತಾವು ಹಾಗೂ ಡಿ.ಕೆ.ಶಿವಕುಮಾರ್ ಮಾಡಿರುವುದು ತಮಗೆ ಹೆಮ್ಮೆ ತಂದಿದೆ ಎಂದರು. 
ಸಾಲಮನ್ನಾ ಬರಿ ಘೋಷಣೆ ಅಲ್ಲ. ಈಗಾಗಲೇ 6.5 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದು, ಇದಕ್ಕಾಗಿ  11 ಸಾವಿರ ಕೋಟಿ ಹಣ ಬಿಡುಗಡೆ ಬಿಡುಗಡೆ ಮಾಡಲಾಗಿದೆ. ಚುನಾವಣಾ ಆಯೋಗ ಚುನಾವಣೆ ಮುಗಿಯುವವರೆಗೂ ಸಾಲಮನ್ನಾ  ಮಾಡದಂತೆ ತಡೆ ನೀಡಿದೆ. ಆದರೆ ಮೋದಿ ಸರ್ಕಾರದ ಯೋಜನೆಗಳಿಗೆ ನೀಡುವ ಹಣಕ್ಕೆ ಯಾವುದೇ ತಡೆ ನೀಡಿಲ್ಲ. ಆದ್ದರಿಂದ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಸಾಲಮನ್ನಾ ಯೋಜನೆಗೆ ತಡೆ ನೀಡದಂತೆ ಒತ್ತಡ ಹೇರಲಾಗುವುದು. ಜನತೆ ತಮ್ಮ ಮೇಲೆ ವಿಶ್ವಾಸ ಇಡಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ನಿಮ್ಮ ಎತ್ತುಗಳಿಗೆ ನೀವು ಮೇವು ಹಾಕಿ. ಹೊಲದಲ್ಲಿ ಉಳುಮೆ ಮಾಡಲು ಗೊತ್ತಿಲ್ಲದ ಜನರು ಬೆಳೆದ ಫಸಲನ್ನು ತಿಂದುಹೋಗುವ ಹಲವು ಎತ್ತುಗಳು ಬರುತ್ತಿವೆ. ನಿಖಿಲ್ ಅವರನ್ನು ಗೆಲ್ಲಿಸುವ ಮೂಲಕ ಜನತೆ ಶಕ್ತಿ ನೀಡಿದರೆ, ಆ ಶಕ್ತಿಯನ್ನು ಪುನ: ಜನರಿಗೆ ಧಾರೆ ಎರೆಯಲಾಗುವುದು ಎಂದು ಸುಮಲತಾ ಬೆಂಬಲಕ್ಕೆ ನಿಂತಿರುವ ನಟರಾದ ದರ್ಶನ್, ಯಶ್ ವಿರುದ್ಧ ಕುಮಾರಸ್ವಾಮಿ ಪುನ: ಅಬ್ಬರಿಸಿದರು.
ಡಿ.ಕೆ.ಸುರೇಶ್ ಮಾತನಾಡಿ, ಕ್ಷೇತ್ರದ ಜನರು ತಮ್ಮನ್ನು ಎರಡು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ. ಪ್ರಾಮಾಣಿಕವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಹೆಚ್ಚು ಮಾತನಾಡುವುದಕ್ಕಿಂತಲೂ ಹೆಚ್ಚು ಕೆಲಸ ಮಾಡಬೇಕು ಎಂಬ ಸಿದ್ಧಾಂತವನ್ನು ಅಳವಡಿಸಿಕೊಂಡಿರುವ ತಮಗೆ ಮತ್ತೊಮ್ಮೆ ಅವಕಾಶ ಕೊಡುವಂತೆ ಜನರಲ್ಲಿ ಅವರು ಮನವಿ ಮಾಡಿದರು.
ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಜೊತೆಗೂಡುವುದು ಆರಂಭ. ಜೊತೆಗೂಡಿ ಯೋಚಿಸುವುದು ಪ್ರಗತಿ. ಜೊತೆಗೂಡಿ ಕೆಲಸ ಮಾಡುವುದೇ ಯಶಸ್ಸು. ಬಿಜೆಪಿಯವರು ಅಶ್ವತ್ಥ ನಾರಾಯಣ್ ಎನ್ನುವಂತಹ ಅಭ್ಯರ್ಥಿಯನ್ನು ಮೈತ್ರಿಕೂಟದ ಅಭ್ಯರ್ಥಿಯ ವಿರುದ್ಧ ಕಣಕ್ಕಿಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ನಮಗೆ ಲೆಕ್ಕಕ್ಕೆ ಇಲ್ಲ. ಚುನಾವಣೆ ಇರುವುದು ಮೋದಿ ಹಾಗೂ ರಾಹುಲ್ ಗಾಂಧಿ ಅವರ ಸಿದ್ಧಾಂತದ ನಡುವೆ ಎಂದರು.
ಅಶೋಕ್, ಸೋಮಣ್ಣ ಗೈರುಹಾಜರಿಯಲ್ಲಿ ನಾಮಪತ್ರ ಸಲ್ಲಿಸಿದ ತೇಜಸ್ವಿ ಸೂರ್ಯ
ಕೇಂದ್ರ ಸಚಿವ ಅನಂತ್ ಕುಮಾರ್ ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸಿದರು. 
ಬೆಂಗಳೂರು ದಕ್ಷಿಣ ಕ್ಷೇತ್ರದ ಉಸ್ತುವಾರಿ ಹೊಂದಿರುವ ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ಮುಖಂಡ ಆರ್.ಅಶೋಕ್, ಶಾಸಕ ವಿ.ಸೋಮಣ್ಣ ಅವರ ಅನುಪಸ್ಥಿತಿಯಲ್ಲಿ ತೇಜಸ್ವಿ ಸೂರ್ಯ ಉಮೇದುವಾರಿಕೆ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಗಿರಿನಗರದ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ನೂರಾರು ಬೆಂಬಲಿಗರು ಪಕ್ಷದ ಕಾರ್ಯಕರ್ತರೊಡಗೂಡಿ ಜಯನಗರದ ಬಿಬಿಎಂಪಿ ದಕ್ಷಿಣ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ತೇಜಸ್ವಿ ನಾಮಪತ್ರಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಶಾಸಕ ಉದಯ್ ಗರುಡಾಚಾರ್, ಬಿಜೆಪಿ ಕಾರ್ಯದರ್ಶಿ ಜಯದೇವ್, ಬಿಬಿಎಂಪಿ ಸದಸ್ಯ ಕಟ್ಟೆ ಸತ್ಯನಾರಾಯಣ, ನಗರ ಘಟಕ ಅಧ್ಯಕ್ಷ ಸದಾಶಿವ  ಸೂಚಕರಾಗಿ ಸಹಿ ಹಾಕಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ಪಕ್ಷದ ನಾಯಕತ್ವ ತಮಗೆ ಈ ಅವಕಾಶ ಮಾಡಿಕೊಟ್ಟಿದ್ದು, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಅಶೋಕ್, ಸೋಮಣ್ಣ, ಸತೀಶ್ ರೆಡ್ಡಿ ಸೇರಿದಂತೆ ಪಕ್ಷದ ಮುಖಂಡರು ತಮಗೆ ಬೆಂಬಲ ನೀಡಿದ್ದಾರೆ ಎಂದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಶಾಸಕ ಆರ್.ಅಶೋಕ್ ಸಾಕಷ್ಟು ಪ್ರಯತ್ನ ಮಾಡಿದ್ದರಾದರೂ ಹೈಕಮಾಂಡ್ ಕೊನೆಗೆ ತೇಜಸ್ವಿ ಸೂರ್ಯ ಅವರಿಗೆ ಬಿ.ಫಾರಂ ನೀಡಿತ್ತು. ಇದರಿಂದ ತೇಜಸ್ವಿನಿ ಅನಂತ್ ಕುಮಾರ್, ಅಶೋಕ್ ಸೇರಿದಂತೆ ಬಹುತೇಕರಿಗೆ ಅಸಮಾಧಾನವುಂಟಾಗಿದ್ದು, ತೇಜಸ್ವಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅವರೆಲ್ಲ ಗೈರುಹಾಜರಾಗಿದ್ದರು. 
ವಾಟಾಳ್ ನಾಗರಾಜ್ ಉಮೇದುವಾರಿಕೆ ಸಲ್ಲಿಕೆ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಭ್ಯರ್ಥಿಯಾಗಿ ವಾಟಾಳ್ ನಾಗರಾಜ್ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ತಮ್ಮ ಬೆಂಬಲಿಗರೊಂದಿಗೆ ಕುದುರೆಗಾಡಿ ಶಹನಾಯಿ ವಾದನದೊಂದಿಗೆ ವಿಶಿಷ್ಟವಾಗಿ ಜಯನಗರದ ಬಿಬಿಎಂಪಿ ದಕ್ಷಿಣ ಕಚೇರಿಗೆ ಆಗಮಿಸಿದ ವಾಟಾಳ್ ನಾಗರಾಜ್ ನಾಮಪತ್ರ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ತಿನಲ್ಲಿ ಕನ್ನಡ ಪರ ಧ್ವನಿಯಾಗುವವರು ಯಾರೂ ಇಲ್ಲ.  ಸಂಸತ್ತಿಗೆ ಹೋದ ರಾಜಕೀಯ ಪಕ್ಷಗಳ ಸದಸ್ಯರು ಯಾರೂ ಸಹ ಇದೂವರೆಗೂ ಧ್ವನಿಯಾಗಿಲ್ಲ. ಹೀಗಾಗಿ ಕನ್ನಡಕ್ಕಾಗಿ ಹೋರಾಟ ನಡೆಸಲು ಲೋಕಸಭೆಯನ್ನು ಪ್ರವೇಶಿಸಬೇಕಿದೆ ಎಂದರು.
ಮೈತ್ರಿ ಅಭ್ಯರ್ಥಿಯಾಗಿ ಬಿ.ಕೆ.ಹರಿಪ್ರಸಾದ್ ನಾಮಪತ್ರ ಸಲ್ಲಿಕೆ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ನೂರಾರು ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಜಯನಗರ ಬಿಬಿಎಂಪಿ ದಕ್ಷಿಣ ಕಚೇರಿಗೆ ಆಗಮಿಸಿದ ಹರಿಪ್ರಸಾದ್ ,  ಪಕ್ಷದ ಮುಖಂಡರಾದ ರಾಮಲಿಂಗಾರೆಡ್ಡಿ, ಎಂ.ಕೃಷ್ಣಪ್ಪ, ಶಾಸಕಿ ಸೌಮ್ಯರೆಡ್ಡಿ , ಮೇಲ್ಮನೆ ಜೆಡಿಎಸ್ ಸದಸ್ಯ ಟಿ.ಎ.ಶರವಣ, ಸಮ್ಮುಖದಲ್ಲಿಂದು ನಾಮಪತ್ರ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್,  ಮೈತ್ರಿಕೂಟದ ಅಭ್ಯರ್ಥಿಯಾಗಿ ಕಾಂಗ್ರೆಸ್-ಜೆಡಿಎಸ್  ಪಕ್ಷದ ನಾಯಕರ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ.  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಮೊದಲಿಗೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ತೆಕ್ಕೆಗೆ ಸೇರಿತ್ತು. ಬೆಂಗಳೂರು ನಗರದಲ್ಲಿ ಪಕ್ಷಕ್ಕೆ ಒಳ್ಳೆಯ ಬಲವಿದೆ. ಹೀಗಾಗಿ ಕ್ಷೇತ್ರದಲ್ಲಿ ತಾವು ಗೆಲುವು ಸಾಧಿಸಲಿದ್ದು, ಈ ಮೂಲಕ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಮತ್ತೆ ಕಾಂಗ್ರೆಸ್‍ನ ಭದ್ರಕೋಟೆಯಾಗಲಿದೆ ಎಂದರು.
ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ಹರಿಪ್ರಸಾದ್ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಹರಿಪ್ರಸಾದ್ ಅವರಿಗೇನೂ ಹೊಸದಲ್ಲ. ಈ ಹಿಂದೆ 1999 ರಲ್ಲಿಯೂ ಕ್ಷೇತ್ರದಿಂದ ಅವರು ಸ್ಪರ್ಧಿಸಿದ್ದರು. 30-40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿರುವ ಅವರು ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರದ ಅನುದಾನ ಹಾಗೂ ಯೋಜನೆಗಳನ್ನು ನಗರಕ್ಕೆ ತರುವಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ. ಹೀಗಾಗಿ ಶೇಕಡ ನೂರರಷ್ಟು ಹರಿಪ್ರಸಾದ್ ಅವರು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ಭದ್ರಕೋಟೆಯನ್ನು ತಮ್ಮ ಅಭ್ಯರ್ಥಿ ಹೇಗೆ ಬೇಧಿಸಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾರೆಡ್ಡಿ, ಕಳೆದ 5 ವರ್ಷಗಳಲ್ಲಿ ಪ್ರಧಾನಿ ಮೋದಿ ದೇಶದ ಅಭಿವೃದ್ಧಿಯನ್ನು ಕಡೆಗಣಿಸಿದ್ದು, ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಾಧನೆ ಶೂನ್ಯವಾಗಿದ್ದು, ಜನತೆ ಬದಲಾವಣೆ ಬಯಸಿದ್ದಾರೆ. ಜನರ ನಿರೀಕ್ಷೆಗಳನ್ನು ಈಡೇರಿಸುವುದು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯವಾಗಿದ್ದು, ತಿಳುವಳಿಕೆಯುಳ್ಳ ಜನ ಬಿಜೆಪಿಗೆ ಮತ ಹಾಕುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com